ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಸ್ತಿಗೆ ಪೊಲೀಸ್‍ ಇಲಾಖೆ ಮಾದರಿ: ಬನ್ನಟ್ಟಿ

ನಗರದ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ: ಆಕರ್ಷಕ ಪಥಸಂಚಲನ
Last Updated 3 ಏಪ್ರಿಲ್ 2018, 12:47 IST
ಅಕ್ಷರ ಗಾತ್ರ

ಕೊಪ್ಪಳ: 'ಗಂಭೀರತೆ ಹಾಗೂ ಶಿಸ್ತಿಗೆ ಪೊಲೀಸ್‍ ಇಲಾಖೆ ಮಾದರಿಯಾಗಿದೆ. ಪೊಲೀಸರು ಈ ಶಿಸ್ತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು' ಎಂದು ನಿವೃತ್ತ ಡಿವೈಎಸ್‌ಪಿ ವೀರಭದ್ರಪ್ಪ ಎಸ್‍.ಬನ್ನಟ್ಟಿ ಹೇಳಿದರು.ನಗರದ ಜಿಲ್ಲಾ ಪೊಲೀಸ್‍ ಕವಾಯತ್ ಮೈದಾನದಲ್ಲಿ ಸೋಮವಾರ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಅವರು ಮಾತನಾಡಿದರು. 'ಪೊಲೀಸರು ಮತ್ತು ಸಾರ್ವಜನಿಕರ ಮಧ್ಯೆ ಬಾಂಧವ್ಯ ಬೆಳೆಸುವುದು. ಪೊಲೀಸರ ಕಲ್ಯಾಣಕ್ಕೆ ಯೋಜನೆಗಳನ್ನು ರೂಪಿಸುವುದು. ಪೊಲೀಸರ ಮಕ್ಕಳ ಮತ್ತು ಕುಟುಂಬದ ಬಗ್ಗೆ ಕಾಳಜಿ ವಹಿಸುವ ಉದ್ದೇಶಕ್ಕಾಗಿ ಪೊಲೀಸ್‍ ಧ್ವಜ ದಿನಾಚರಣೆಯನ್ನು 1975 ರಿಂದ ಮಾರ್ಚ್ 2ರಂದು ಆಚರಿಸಲಾಗುತ್ತಿದೆ. ಸಾರ್ವಜನಿಕರು, ವೃದ್ಧರು ಮತ್ತು ಅಂಗವಿಕಲರ ರಕ್ಷಣೆಗೆ ಪೊಲೀಸ್‍ ಇಲಾಖೆ ಶ್ರಮಿಸಬೇಕು' ಎಂದರು.

'ಪೊಲೀಸರು ಸಾರ್ವಜನಿಕ ಆಸ್ತಿ ಮತ್ತು ಪ್ರಾಣ ರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಪೊಲೀಸರು ಮೌಲ್ಯಾಧಾರಿತ ಜೀವನಕ್ಕೆ ಮುಂದಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಬೇಕು. ಪೊಲೀಸ್‍ ಇಲಾಖೆಯ ಎಲ್ಲ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪೊಲೀಸರು ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು' ಎಂದರು.

ಜಿಲ್ಲಾ ಪೊಲೀಸ್‍ ವರಿಷ್ಠಾಧಿಕಾರಿ ಡಾ.ಅನೂಪ್‍ ಎ.ಶೆಟ್ಟಿ ಮಾತನಾಡಿ, 'ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವಿಸುವುದು ಹಾಗೂ ಅವರ ಕಲ್ಯಾಣಕ್ಕೆ ಯೋಜನೆಗಳನ್ನು ಜಾರಿಗೊಳಿಸುವ ಕಾರ್ಯ ಮಾಡಲಾಗುತ್ತದೆ. ಅದರಂತೆ ಪೊಲೀಸ್‍ ಇಲಾಖೆಯಲ್ಲಿಯೂ ಸೇವೆ ಸಲ್ಲಿಸಿದವರಿಗೆ ಗೌರವಿಸಲು ಪೊಲೀಸ್‍ ಧ್ವಜ ದಿನಾಚರಣೆ ಆಚರಿಸಲಾಗುತ್ತದೆ. ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಎಪ್ರಿಲ್‍ 2ರಂದು ಆಚರಿಸಲಾಗುತ್ತದೆ' ಎಂದರು.

'ಈ ದಿನಾಚರಣೆಯನ್ನು ಮಾಡುವ ಉದ್ದೇಶ ಸಾರ್ವಜನಿಕರಿಗೆ ಪೊಲೀಸ್‍ ಇಲಾಖೆಯ ಅರಿವು ಮೂಡಿಸುವುದು. ನಿವೃತ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಯೋಗಕ್ಷೇಮ ಮತ್ತು ಕಲ್ಯಾಣಕ್ಕೆ ಯೋಜನೆ ರೂಪಿಸುವುದಾಗಿದೆ. ಪೊಲೀಸ್ ಕಲ್ಯಾಣ ನಿಧಿಯಲ್ಲಿ ಸಂಗ್ರಹಿಸಲಾದ ಹಣವನ್ನು ಪೊಲೀಸರ ಕಲ್ಯಾಣಕ್ಕಾಗಿಯೇ ಬಳಸಲಾಗುತ್ತದೆ. ಯೋಗಕ್ಷೇಮ ನಿಧಿಯಿಂದ ವೈದ್ಯಕೀಯ ಸೇವೆ ಸೇರಿದಂತೆ ಇನ್ನಿತರ ಸೇವೆಗಳಿಗೆ ₹ 3,40,306 ಹಣ ಸಂಗ್ರಹವಾಗಿತ್ತು. ಇದರಲ್ಲಿ ಇನ್ನೂ ₹ 1,10,500 ಜಮೆ ಇದೆ' ಎಂದರು.

ತೆರೆದ ವಾಹನದಲ್ಲಿ ನಿವೃತ್ತ ಆರಕ್ಷಕ ಉಪನಿರೀಕ್ಷಕ ವೀರಭದ್ರಪ್ಪ ಎಸ್‍.ಬನ್ನಟ್ಟಿ ಅವರು ಪೊಲೀಸ್‍ ಅಧಿಕಾರಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಪೊಲೀಸ್‍ ಅಧಿಕಾರಿ ನಿಂಗಪ್ಪ ಅವರ  ನೇತೃತ್ವದಲ್ಲಿ ಪಥಸಂಚಲನ ಕಾರ್ಯಕ್ರಮ ನಡೆಯಿತು. ಇದರಲ್ಲಿ 4 ಪೊಲೀಸ್‍ ತಂಡಗಳು ಭಾಗವಹಿಸಿದ್ದವು. ಡಿವೈಎಸ್‍ಪಿ ಎಸ್‍.ಎಂ.ಸಂದಿಗವಾಡ ಸ್ವಾಗತಿಸಿದರು. ಪೊಲೀಸ್ ಪೇದೆ ಕರಬಸಪ್ಪ ಕಲಕಬಂಡಿ ನಿರೂಪಿಸಿದರು. ಗ್ರಾಮೀಣ ಠಾಣೆಯ ಸಿಪಿಐ ಭೀಮಣ್ಣ ಸೂರೆ ವಂದಿಸಿದರು.

ಬೇಡಿಕೆ ಈಡೇರಿಕೆಗೆ ಒತ್ತಾಯ

'ಆರೋಗ್ಯ ಭಾಗ್ಯ ಸೇವೆಯನ್ನು ನಿವೃತ್ತ ಪೊಲೀಸರಿಗೂ ವಿಸ್ತರಿಸಬೇಕು. ಇದರಿಂದ ನಿವೃತ್ತಿಯ ನಂತರ ಪೊಲೀಸರಿಗೆ ಅನುಕೂಲ ಆಗಲಿದೆ. ಅಲ್ಲದೆ ನಿವೃತ್ತ ಪೊಲೀಸರಿಗೆ ಮನೆ ನಿರ್ಮಾಣಕ್ಕೆ ನಿವೇಶನ ಒದಗಿಸಬೇಕು. ಅದನ್ನು ಕೈಗೆಟುಕುವ ದರದಲ್ಲಿ ನೀಡಬೇಕು. ಈ ಕುರಿತು ಸರ್ಕಾರಕ್ಕೆ ಎಸ್‍ಪಿ ಅವರು ಮನವಿ ಸಲ್ಲಿಸಬೇಕು. ಪೊಲೀಸರ ಬೇಡಿಕೆಗಳನ್ನು ಈಡೇರಿಸಬೇಕು' ಎಂದು ನಿವೃತ್ತ ವೀರಭದ್ರಪ್ಪ ಬನ್ನಟ್ಟಿ ಒತ್ತಾಯಿಸಿದರು.

**

ಪೊಲೀಸರು ಸಾರ್ವಜನಿಕ ಆಸ್ತಿ ಮತ್ತು ಪ್ರಾಣ ರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಪೊಲೀಸರು ಮೌಲ್ಯಾಧಾರಿತ ಜೀವನಕ್ಕೆ ಮುಂದಾಗಬೇಕು – 
ವೀರಭದ್ರಪ್ಪ ಬನ್ನಟ್ಟಿ, ನಿವೃತ್ತ ಡಿವೈಎಸ್‌ಪಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT