ಬುಧವಾರ, ಜನವರಿ 29, 2020
24 °C

’ರಸ್ತೆ ಸುರಕ್ಷತಾ ನಿಯಮ ಪಾಲಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ರಸ್ತೆ ನಿಯಮ ಪಾಲನೆ ಮಾಡದವರ ವಾಹನ ವಶಕ್ಕೆ ಪಡೆದು ಪರವಾನಗಿ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಖಾಸಗಿ ವಾಹನಗಳಲ್ಲಿ ಮಿತಿಮೀರಿ ಪ್ರಯಾಣಿಕರನ್ನು ತುಂಬಿಕೊಂಡು ಸಾಗುತ್ತಿದ್ದಾರೆ. ಅಂತಹ ವಾಹನಗಳ ವೀಕ್ಷಣೆಗಾಗಿ ಪ್ರತಿ ವೃತ್ತದಲ್ಲಿಯೂ ಸಿಸಿ ಕ್ಯಾಮರಗಳು ಅಳವಡಿಸಿ, ಕ್ಯಾಮರಾಗಳು ಸೆರೆ ಹಿಡಿದ ದೃಶ್ಯಗಳನ್ನು ಒಂದು ತಿಂಗಳವರೆಗೂ ಸಂಗ್ರಹಿಸಿ ಇಡಬೇಕು. ಪದೇ ಪದೇ ರಸ್ತೆ ನಿಯಮಗಳನ್ನು ಯಾರು ಉಲ್ಲಂಘಿಸುತ್ತಾರೋ ಅವರ ವಾಹನವನ್ನು ವಶಕ್ಕೆ ಪಡೆದು ಪರವಾನಿಗೆ ರದ್ದು ಪಡಿಸಿ, ಮತ್ತೆ ಮರಳಿ ಮಾಲೀಕರಿಗೆ ವಾಹನ ಕೊಡಬಾರದು ಒಂದೆಡೆ ಸಂಗ್ರಹಿಸಿ ಇಡುವಂತೆ ಅಧಿಕಾರಿಗೆ ಸೂಚಿಸಿದರು.

ಎಲ್ಲಾ ಶಾಲೆಯ ಮುಖ್ಯಸ್ಥರಿಗೆ ಶಾಲೆಯ ಮುಂಭಾಗ ಕ್ಯಾಮರಾ ಅಳವಡಿಸುವಂತೆ ತಿಳಿಸಿ, ಶಾಲಾ ಮಕ್ಕಳ ವಾಹನಗಳಲ್ಲಿ ಆಸನಕ್ಕಿಂತಲೂ ಅಧಿಕ ಮಕ್ಕಳನ್ನು ತುಂಬಿಕೊಂಡು ಹೋಗುತ್ತಿದ್ದಾರೆ. ಅಂತಹ ವಾಹನಗಳ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ತಿಳಿಸಿದರು.

ರಸ್ತೆ ಸುರಕ್ಷತೆ ಜಾಗೃತಿ ಮೂಡಿಸಲು ಜನದಟ್ಟಣೆ ಪ್ರದೇಶದಲ್ಲಿ, ವೃತ್ತಗಳಲ್ಲಿ ರಸ್ತೆ ಸುರಕ್ಷತಾ ಫಲಕಗಳನ್ನು ಅಳವಡಿಸಿ, ಮತ್ತು ಜಿಲ್ಲಾ ಮಟ್ಟದಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗೆ ಸೂಚಿಸಿದರು.

ನಗರದ ಪ್ರಮುಖ ರಸ್ತೆಗಳಾದ ಚಂದ್ರ ಮೌಳೇಶ್ವರ ಸರ್ಕಲ್, ಮಾರುಕಟ್ಟೆ ಸೇರಿದಂತೆ ಇನ್ನಿತರ ಚೌಕ್ ಗಳಲ್ಲಿ ವಾಹನ ನಿಲುಗಡೆ ನಿಷೇಧ ಎಂಬ ನಾಮ ಫಲಕಗಳನ್ನು ಅಳವಡಿಸಲಾಗಿದೆ ಎಂದು ಸಾರಿಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಪ್ರತಿ ಅಂಬುಲೆನ್ಸ್‌ಗೆ ಜಿಪಿಆರ್‌ಎಸ್ ಅಳವಡಿಸಬೇಕು. ಆರೋಗ್ಯ ಇಲಾಖೆಯಡಿ ಅನುದಾನ ಬಳಸಿಕೊಂಡು ಶೀಘ್ರ ಅಳವಡಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು