ಸಿಂಧನೂರು: ನಗರದ ಬಸ್ ನಿಲ್ದಾಣದ ಎದುರು ಅಪೂರ್ಣಗೊಂಡಿರುವ ಸ್ತ್ರೀಶಕ್ತಿ ಭವನದ ಕಟ್ಟಡ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಸಿಂಧನೂರು ತಾಲ್ಲೂಕು ಇಂದಿರಾಗಾಂಧಿ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಒಕ್ಕೂಟ ಮಂಗಳವಾರ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಮನವಿ ಸಲ್ಲಿಸಿತು.
ರಾಜ್ಯದಲ್ಲಿ 1960ರ ಕಾಯ್ಡೆಯಡಿ 175 ತಾಲ್ಲೂಕು ಒಕ್ಕೂಟಗಳನ್ನು ಸರ್ಕಾರದ ಆದೇಶದಂತೆ 2006-07 ರಲ್ಲಿ ರಚನೆ ಮಾಡಲಾಗಿದೆ. ಆಗ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆಯಾಗಿದ್ದ ರಾಣಿ ಸತೀಶ್ ಅವರನ್ನು ಆಹ್ವಾನಿಸಿ ಸ್ತ್ರೀಶಕ್ತಿ ಒಕ್ಕೂಟದ ತರಬೇತಿ ಕಟ್ಟಡದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.
ಜನವರಿ 21, 2013ರಂದು ಅಪೂರ್ಣವಾದ ಈ ಕಟ್ಟಡವನ್ನು ಕೆಲವೊಂದು ನಿಬಂಧನೆಗಳೊಂದಿಗೆ ಒಕ್ಕೂಟದ ಅಧ್ಯಕ್ಷರ ಸ್ವಾಧೀನಕ್ಕೆ ಲಿಖಿತವಾಗಿ ನೀಡಲಾಗಿದೆ. ಮಹಿಳೆಯರ ಪರವಾಗಿ ಕೆಲಸ ನಿರ್ವಹಿಸಲು ಒಕ್ಕೂಟ ಶ್ರಮಿಸುತ್ತಿದೆ ಎಂದು ಸ್ತ್ರೀಶಕ್ತಿ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀದೇವಿ ಶ್ರೀನಿವಾಸ ವಿವರಿಸಿದರು.
ವಿವಿಧ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಿಗೆ ನಿಯಮಾನುಸಾರ ಒಕ್ಕೂಟದ ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ ನಿರ್ವಹಣೆ ವೆಚ್ಚವನ್ನು ಪಡೆದು ಕಟ್ಟಡದ ಬಳಕೆಗೆ ನೀಡಲಾಗುತ್ತಿದೆ. ಕಾರ್ಯಕ್ರಮಗಳಿಂದ ಸ್ವೀಕೃತವಾದ ಹಣವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲಧಿಕಾರಿಗಳ ಲಿಖಿತ ನಿರ್ದೇಶನಗಳಂತೆ ಪ್ರತ್ಯೇಕ ಬ್ಯಾಂಕ್ ಖಾತೆ ತೆಗೆದು ಖಾತೆಗೆ ಜಮಾ ಮಾಡಲಾಗುತ್ತಿದೆ. ಆದಾಗ್ಯೂ ಅಪೂರ್ಣವಾದ ಕಟ್ಟಡದಿಂದ ಸುರಕ್ಷತೆ ಇಲ್ಲದೆ ಇರುವುದರಿಂದ ಒಕ್ಕೂಟದ ಆಡಳಿತ ಮಂಡಳಿ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದೆ ಎಂದು ತಿಳಿಸಿದರು.
ಆದ್ದರಿಂದ ಈ ಕಟ್ಟಡಕ್ಕೆ ಸೂಕ್ತ ಅನುದಾನ ನೀಡಿ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಬೇಕು. ಈಗಾಗಲೇ ಎನ್‍ಆರ್‌ಎಲ್‍ಎಂ ಅಡಿಯಲ್ಲಿ ಅಕ್ಕ ಕೆಫೆ ಕ್ಯಾಂಟಿನ್, ಮಹಿಳಾ ಸೂಪರ್ ಮಾರ್ಕೆಟ್ ಮಾಡಲು ಸರ್ಕಾರ ಆದೇಶಿಸಿದ್ದು, ಮುಂಭಾಗದಲ್ಲಿ ಸ್ಥಳಾವಕಾಶ ನೀಡಲು ತಾ.ಪಂ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಚನೆಯಾದ ತಾಲ್ಲೂಕಿನ 1380 ಸ್ತ್ರೀಶಕ್ತಿ ಗುಂಪುಗಳು ಮತ್ತು ಎನ್‍ಆರ್‌ಎಲ್‍ಎಂ ಅಡಿ ರಚನೆಗೊಂಡ 1080 ಸಂಜೀವಿನಿ ಗುಂಪುಗಳು ಹಾಗೂ 30 ಜಿಪಿಎಲ್‍ಎಫ್‍ಗಳ ಸುಮಾರು 29520 ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿ, ಸರ್ಕಾರದ ಯೋಜನೆಗಳನ್ನು ಜಾರಿ ಮಾಡಲು ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು.
ಉಪಾಧ್ಯಕ್ಷೆ ಶಿವಲಿಂಗಮ್ಮ, ಕಾರ್ಯದರ್ಶಿ ಗೌರಮ್ಮ, ಖಜಾಂಚಿ ಲೂರ್ಧ ಮೇರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೌಶಲ್ಯ, ರೇಣುಕಮ್ಮ, ಅಕ್ಕಮ್ಮ, ಅನಂತಲಕ್ಷ್ಮಿ, ಲಕ್ಷ್ಮಿದೇವಿ, ವೀಣಾ, ಸತ್ಯವೇಣಿ ಸೇರಿದಂತೆ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಒಕ್ಕೂಟದ ಸಾಮಾನ್ಯ ಸಭೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.