ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಧಿವಿಜ್ಞಾನ ದಂತಶಾಸ್ತ್ರದಿಂದ ಸಾಕ್ಷಿ ಸಂಗ್ರಹ’

ನವೋದಯ ದಂತ ಮಹಾವಿದ್ಯಾಲಯದಿಂದ ರಾಷ್ಟ್ರೀಯ ಕಾರ್ಯಾಗಾರ ಆಯೋಜನೆ
Last Updated 25 ಜನವರಿ 2019, 12:26 IST
ಅಕ್ಷರ ಗಾತ್ರ

ರಾಯಚೂರು: ವಿಧಿವಿಜ್ಞಾನ ದಂತಶಾಸ್ತ್ರವು ಕಾನೂನು ಪರಿಭಾಷೆಯೊಂದಿಗೆ ವಿಶ್ಲೇಷಣೆ ಮಾಡುವ ದಂತ ವೈದ್ಯಕೀಯದ ಹೊಸ ವಿಭಾಗವಾಗಿದ್ದು, ಕೆಲವು ತನಿಖೆ ಪ್ರಕರಣಗಳನ್ನು ರುಜುವಾತು ಮಾಡುವುದಕ್ಕೆ ನಿಖರ ಸಾಕ್ಷಿ ಒದಗಿಸುವ ಮಟ್ಟಿಗೆ ಇದು ಬೆಳವಣಿಗೆಯಾಗಿದೆ ಎಂದು ಧಾರವಾಡದ ಎಸ್‌ಡಿಎಂ ದಂತ ಮಹಾವಿದ್ಯಾಲಯದ ದಂತ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಅಶೀತ್‌ ಬಿ. ಆಚಾರ್ಯ ಹೇಳಿದರು.

ನವೋದಯ ಶಿಕ್ಷಣ ಸಂಸ್ಥೆಯ ಬೆಳ್ಳಿ ಮಹೋತ್ಸವ ನಿಮಿತ್ತ ನವೋದಯ ದಂತ ಮಹಾವಿದ್ಯಾಲಯದಿಂದ ಡಾ.ಎಸ್‌.ಆರ್‌. ಹೆಗಡೆ ಸಿಲ್ವರ್‌ ಜುಬಿಲಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಧಿವಿಜ್ಞಾನ ದಂತಶಾಸ್ತ್ರ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಜನಸಾಮಾನ್ಯರಿಗೆ ಇದು ಅರ್ಥವಾಗುವುದಿಲ್ಲ. ವಿಧಿವಿಜ್ಞಾನ ದಂತಶಾಸ್ತ್ರವನ್ನು ಜೀವಂತ ವ್ಯಕ್ತಿ ಮತ್ತು ಮೃತ ವ್ಯಕ್ತಿ ಇಬ್ಬರಿಗೂ ಅನ್ವಯಿಸಿ ಅಧ್ಯಯನ ಮಾಡಬಹುದಾಗಿದೆ. ಯಾವುದೇ ಅಪರಾಧ ನಡೆದ ಸ್ಥಳದಲ್ಲಿ ಲಭ್ಯವಾಗುವ ಪ್ರಾಥಮಿಕ ಸಾಕ್ಷಿಗಳನ್ನು ಆಧರಿಸಿ ದಂತಶಾಸ್ತ್ರದ ಮೂಲಕ ತನಿಖೆ ಕೈಗೊಳ್ಳಬಹುದು. ಅಪರಾಧ ಸ್ಥಳದಲ್ಲಿ ಯಾವುದಾದರೂ ವಸ್ತು ಅಥವಾ ಆಹಾರ ಪದಾರ್ಥವನ್ನು ತಿಂದು ಬಿಸಾಕಿರುವುದು ಕಂಡುಬಂದಾಗ, ಅದನ್ನು ಆಧರಿಸಿ ಸಂಶಯಾಸ್ಪದ ವ್ಯಕ್ತಿಗಳಲ್ಲಿ ಅಪರಾಧಿ ಯಾರೆಂದು ವಿಧಿವಿಜ್ಞಾನ ದಂತಶಾಸ್ತ್ರದ ಮೂಲಕ ಪತ್ತೆ ಮಾಡಬಹುದಾಗಿದೆ ಎಂದರು.

ಬೆಂಕಿ ಅವಘಡದಲ್ಲಿ ಸುಟ್ಟುಹೋದ ಶರೀರ, ಕೊಳೆತ ಶವ ಹಾಗೂ ಅಸ್ಥಿಪಂಜರದಲ್ಲಿ ಕಂಡು ಬರುವ ದಂತಪಂಕ್ತಿ ಅಥವಾ ಹಲ್ಲು ಆಧರಿಸಿ ವಯಸ್ಸು, ಜನಾಂಗ ಹಾಗೂ ಲಿಂಗ ಪತ್ತೆ ಮಾಡಬಹುದಾಗಿದೆ. ಮನುಷ್ಯನ ದೇಹದಲ್ಲಿರುವ ಅಂಗಾಂಗಗಳಲ್ಲಿ ಹಲ್ಲು ಅತ್ಯಂತ ದೃಢವಾದ ಅಂಗವಾಗಿದೆ. ಹಲ್ಲಿನ ಸವೆತವನ್ನು ಅಳತೆ ಮಾಡಿ ವಯಸ್ಸು ಹೇಳುವುದಕ್ಕೆ ಸಾಧ್ಯ. ಇದಕ್ಕಾಗಿ ಹಿಸ್ಟೊಲಜಿ ಮತ್ತು ರೇಡಿಯೊಗ್ರಫಿ ನೆರವು ಬೇಕಾಗುತ್ತದೆ ಎಂದು ತಿಳಿಸಿದರು.

ಹಲ್ಲುಗಳನ್ನು ವಿಧಿವಿಜ್ಞಾನ ದಂತಶಾಸ್ತ್ರದ ಮೂಲಕ ಎರಡು ಬಗೆಯಲ್ಲಿ ಅಧ್ಯಯನ ಮಾಡಲು ಸಾಧ್ಯವಿದೆ. ಹೋಲಿಕೆ ಮಾಡಿ ಸಾಕ್ಷಿ ದೃಢೀಕರಿಸಬಹುದು ಅಥವಾ ಹಲ್ಲುಗಳ ರಚನೆ ಆಧರಿಸಿ ಸಾಕ್ಷಿ ಪತ್ತೆ ಹಚ್ಚಬಹುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನವೋದಯ ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸಂತೋಷ ಹುಣಸಗಿ ಮಾತನಾಡಿ, ‘ದೇಶದಲ್ಲಿ ವಿಧಿವಿಜ್ಞಾನ ದಂತಶಾಸ್ತ್ರದ ಬಗ್ಗೆ ಅಷ್ಟೊಂದು ವ್ಯಾಪಕತೆ ಇದ್ದಿರಲಿಲ್ಲ. ಡಾ.ಅಶಿತ್‌ ಅವರು ವಿಶೇಷ ಕಾಳಜಿ ವಹಿಸಿ, ಆಸ್ಟ್ರೇಲಿಯಾದಲ್ಲಿ ಅಧ್ಯಯನ ಮಾಡಿಕೊಂಡು ಬಂದಿದ್ದಾರೆ’ ಎಂದರು.

ಕಾರ್ಯಾಗಾರದ ಸಂಘಟನಾ ಅಧ್ಯಕ್ಷೆ ಡಾ.ವಾಣಿಶ್ರೀ ಎಂ. ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ಪ್ರಶಾಂತ್‌ ಬಿ.ಪಾಟೀಲ ವಂದಿಸಿದರು. ವೈದ್ಯಕೀಯ ಮೇಲ್ವಿಚಾರಕ ಡಾ.ಅಶೋಕ ಮಹೇಂದ್ರಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT