ಬುಧವಾರ, ಆಗಸ್ಟ್ 21, 2019
22 °C

ಎಫ್‌ಪಿಎ 70ನೇ ಸಂಸ್ಥಾಪನಾ ದಿನ ನಾಳೆ

Published:
Updated:

ರಾಯಚೂರು: ಭಾರತೀಯ ಕುಟುಂಬ ಯೋಜನಾ ಸಂಘ (ಎಫ್‌ಪಿಎ) ರಾಯಚೂರು ಶಾಖೆಯಿಂದ 70ನೇ ಸಂಸ್ಥಾಪನಾ ದಿನವನ್ನು ಆಗಸ್ಟ್ 14ರಂದು ಬೆಳಿಗ್ಗೆ 11ಗಂಟೆಗೆ ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಶಾಖೆಯ ಅಧ್ಯಕ್ಷ ಡಾ.ವಿ.ಎ.ಮಾಲಿಪಾಟೀಲ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಟುಂಬ ಯೋಜನೆ, ಆರೋಗ್ಯ ಜಾಗೃತಿ, ಹದಿಹರೆಯದವರ ಸಮಸ್ಯೆಗಳ ಜಾಗೃತಿ ಮೂಡಿಸುವ ಕೆಲಸ ಸಂಸ್ಥೆ ನಿರ್ವಹಿಸುತ್ತಿದ್ದು, ಇದಕ್ಕಾಗಿ ನಗರದ ಕುಲಸುಂಬಿ ಕಾಲೊನಿ, ಎಂ.ಎಂ.ಕಾಲೊನಿ, ನಂದೀಶ್ವರ ನಗರ, ಆಂದ್ರೂನ್ ಕಿಲ್ಲಾ, ಇಂದಿರಾ ನಗರ, ಎಲ್‌ಬಿಎಸ್ ನಗರ, ಆಶ್ರಯ ಕಾಲೊನಿ, ಜಲಾಲ್ ನಗರ ಹಾಗೂ ರಾಗಿಮಾನಗಡ್ಡೆ ಕೊಳಚೆ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

ಜೊತೆಗೆ ಗ್ರಾಮೀಣ ಪ್ರದೇಶಗಳಾದ ಹೊಸೂರು, ಮಮದಾಪುರ, ನೆಲಹಾಳ, ಅರಳಿಬೆಂಚಿ, ಆಶಾಪುರ, ಹಳೆ ಮಲಿಯಾಬಾದ್, ಹೊಸ ಮಲಿಯಾಬಾದ್, ಮಿಟ್ಟಿ ಮಲ್ಕಾಪುರ, ಗೋನವಾರ, ಮಂಜರ್ಲಾ, ರಾಂಪೂರ್, ಅಸ್ಕಿಹಾಳ, ಮನ್ಸಲಾಪುರ, ಉಟ್ಕೂರು ಹಾಗೂ ಕಡಗಂದೊಡ್ಡಿ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಂಸ್ಥೆಯಲ್ಲಿ ಪ್ರತಿದಿನವೂ ಗರ್ಭಿಣಿಯರಿಗೆ ಚಿಕಿತ್ಸೆ ಸೌಲಭ್ಯವಿದೆ. ರಕ್ತಪರೀಕ್ಷೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಇದುವರೆಗೆ ಬಾಡಿಗೆ ಕಟ್ಟಡದಲ್ಲಿ ಈ ಎಲ್ಲ ಚಟುವಟಿಕೆ ನಡೆಸಲಾಗುತ್ತಿದ್ದು, ಸಂಸ್ಥೆಗೆ ಕೃಷಿ ವಿವಿ ಹಿಂಭಾಗದಲ್ಲಿ ಸಿಎ ನಿವೇಶನ ಮಂಜೂರಾಗಿದ್ದು, ₹ 1.70 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿದೆ. ಮಾಜಿ ಸಂಸದ ಬಿ.ವಿ.ನಾಯಕ, ಶಾಸಕರಾದ ಎನ್.ಎಸ್.ಬೋಸರಾಜು, ಡಾ.ಶಿವರಾಜ ಪಾಟೀಲ ತಲಾ ₹5 ಲಕ್ಷ ನೀಡಿದ್ದು, ಇನ್ನಿತರ ಶಾಸಕರು ಕೂಡ ತಲಾ 5 ಲಕ್ಷದ ಆಶ್ವಾಸನೆ ನೀಡಿದ್ದಾರೆ ಎಂದರು.

ಕಟ್ಟಡ ನಿರ್ಮಾಣಕ್ಕೆ ಸಂಘ–ಸಂಸ್ಥೆ ಹಾಗೂ ದಾನಿಗಳಿಂದ ದೇಣಿಗೆ ಪಡೆಯಲಾಗುತ್ತಿದ್ದು, ₹ 1.5 ಲಕ್ಷದಿಂದ 10 ಲಕ್ಷದವರೆಗೆ ವಿವಿಧ ಘಟಕಗಳನ್ನು ವಿಂಗಡಿಸಲಾಗಿದ್ದು, ದೇಣಿಗೆ ನೀಡಿದವರ ಹೆಸರನ್ನು ಆಯಾ ಘಟಕಗಳಿಗೆ ಹಾಕಿಸಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಸಂಸದ ರಾಜಾ ಅಮರೇಶ್ವರ ನಾಯಕ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಶಾಸಕರಾದ ಡಾ.ಶಿವರಾಜ ಪಾಟೀಲ, ಎನ್.ಎಸ್.ಬೋಸರಾಜು, ಬಸವರಾಜ ಪಾಟೀಲ ಇಟಗಿ, ಬಸನಗೌಡ ದದ್ದಲ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಕೆ.ಎಸ್.ನಸೀರ ಪಾಲ್ಗೊಳ್ಳಲಿದ್ದಾರೆ ಎಂದರು.

ಸಿ.ಎನ್.ಕುಲಕರ್ಣಿ, ಹನುಮಂತಪ್ಪ, ಆಲಿಯಾ ಖಾನಂ, ಅಮರೇಗೌಡ, ಶರಣಬಸವ, ಈರಮ್ಮ, ಡಾ.ರಾಜೇಶ್ವರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Post Comments (+)