ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಶುದ್ಧನೀರು, ಊಟ ಸವಿದ ಭಾವಿ ಸೈನಿಕರು

ರಾಯಚೂರಿನ ಶ್ರೀ ಈಶ್ವರ ದೇವಸ್ಥಾನ ಸೇವಾ ಸಮಿತಿ ಕಾರ್ಯಕ್ಕೆ ಮೆಚ್ಚುಗೆ
Last Updated 11 ಡಿಸೆಂಬರ್ 2018, 13:02 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ 10 ದಿನಗಳ ಸೇನಾ ಭರ್ತಿ ರ್‍್ಯಾಲಿ ಮಂಗಳವಾರದಿಂದ ಆರಂಭವಾಗಿದ್ದು, ಸೈನಿಕನಾಗುವ ಆಸೆಯಿಂದ ಬರುವ ಯುವಕರಿಗಾಗಿ ಶ್ರೀ ಈಶ್ವರ ದೇವಸ್ಥಾನ ಸೇವಾ ಸಮಿತಿಯು ಉಚಿತ ಊಟ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಸೇನಾ ಭರ್ತಿಯ ಮೊದಲ ದಿನ ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಶ್ವವಿದ್ಯಾಲಯದ ಕ್ರೀಡಾ ಮೈದಾನಗೊಳಗೆ ಮುಖ್ಯರಸ್ತೆಗೆ ಹೊಂದಿಕೊಂಡು ದೇವಸ್ಥಾನ ಸಮಿತಿಯಿಂದ ಟೆಂಟ್‌ ನಿರ್ಮಿಸಿ ಊಟದ ವ್ಯವಸ್ಥೆ ಮಾಡಿತ್ತು. ನೂರಾರು ಯುವಕರು ಉಚಿತ ಊಟ ಸೇವಿಸಿ, ಶುದ್ಧ ನೀರು ಕುಡಿದು ಸಂತೋಷ ವ್ಯಕ್ತಪಡಿಸುತ್ತಿರುವುದು ಕಂಡುಬಂತು.

‘ಸೇನಾ ಭರ್ತಿ ರ್‍್ಯಾಲಿಗೆ ಮೊದಲ ದಿನ ಭಾಗವಹಿಸಿದ್ದ ಮೂರುವರೆ ಸಾವಿರ ಯುವಕರು, ಬಂದೋಬಸ್ತ್‌ಗಾಗಿ ಬಂದಿರುವ ಪೊಲೀಸರು ಹಾಗೂ ಸ್ವಯಂ ಸೇವಕರು ಸೇರಿದಂತೆ ನಾಲ್ಕು ಸಾವಿರ ಜನರು ಉಚಿತವಾಗಿ ಊಟ ಮಾಡಿದ್ದಾರೆ’ ಎಂದು ಸೇವಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪುರ ಅವರು ಮಾಹಿತಿ ನೀಡಿದರು.

‘ರ್‍್ಯಾಲಿ 10 ದಿನ ನಡೆಯಲಿದ್ದು, ಪ್ರತಿದಿನ ಉಚಿತವಾಗಿ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಊಟವನ್ನು ದೇವಸ್ಥಾನ ಸಮಿತಿಯಿಂದ ಹಂಚಲಾಗುವುದು. ಒಟ್ಟಾರೆ 40 ಸಾವಿರ ಊಟ ಕೊಡಬೇಕಾಗುತ್ತದೆ ಎನ್ನುವ ಅಂದಾಜಿದೆ. ಇದಕ್ಕಾಗಿ ಬೇಕಾಗುವ ನೆರವನ್ನು ವಿವಿಧ ಸಂಘ, ಸಂಸ್ಥೆಗಳು ನೀಡುತ್ತಿವೆ. ಈಗಾಗಲೇ ಶೇ 70 ರಷ್ಟು ಸಂಪನ್ಮೂಲ ಕ್ರೋಢೀಕರಣವಾಗಿದೆ. ಇನ್ನುಳಿದ ಸಹಾಯವು ಬರುತ್ತದೆ ಎನ್ನುವ ನಿರೀಕ್ಷೆ ಇದೆ’ ಎಂದರು.

ಸೈನಿಕನಾಗುವ ಆಸೆಯಿಂದ ಹುಕ್ಕೇರಿ ತಾಲ್ಲೂಕಿನ ಗೌಡಗಾಂವ ಗ್ರಾಮದಿಂದ ಬಂದಿದ್ದ ಪಿಯುಸಿ ಭರತ್‌ ಅವರು ರ್‍್ಯಾಲಿ ಕುರಿತು ಮಾತನಾಡಿ, ‘ಇವತ್ತು ಪಿಯುಸಿ ವಿಜ್ಞಾನ ಓದಿದವರನ್ನು ಕರೆದಿದ್ದರು. ದೈಹಿಕ ಪರೀಕ್ಷೆಯಲ್ಲಿ ಪಾಸಾಗಿದ್ದೇನೆ. ಬುಧವಾರ ಆರೋಗ್ಯ ಪರೀಕ್ಷೆ ನಡೆಸುವುದಾಗಿ ಸೇನಾ ಅಧಿಕಾರಿಗಳು ಹೇಳಿದ್ದಾರೆ. ಇಲ್ಲಿ ನಮಗೆ ಉಚಿತವಾಗಿ ರೈಸ್‌ ಪಲಾವ್‌, ಶಿರಾ ಊಟಕ್ಕೆ ಕೊಟ್ಟಿದ್ದರು. ಉಚಿತವಾಗಿ ವ್ಯವಸ್ಥೆ ಮಾಡಿರುವುದನ್ನು ನೋಡಿ ಖುಷಿಯಾಯಿತು’ ಎಂದರು.

‘ಉಚಿತ ಊಟದ ವ್ಯವಸ್ಥೆ ಇರುವುದು ಕೆಲವು ಯುವಕರಿಗೆ ಗೊತ್ತಾಗಿಲ್ಲ. ಹೀಗಾಗಿ ಬೀದಿ ಅಂಗಡಿಗಳಲ್ಲಿ ಕೆಲವರು ಊಟ ಮಾಡಿದ್ದಾರೆ. ಕೆಲವರು ಉಪಹಾರ ಸೇವಿಸಿದ್ದಾರೆ. ಇನ್ನು ಮೇಲೆ ಎಲ್ಲ ಯುವಕರು ಉಚಿತ ಊಟ ಪಡೆಯುವುದಕ್ಕೆ ಸೂಕ್ತ ರೀತಿಯಲ್ಲಿ ಮಾಹಿತಿ ಕೊಡುತ್ತೇವೆ. ಸಾಮಾನ್ಯವಾಗಿ ಬಡ, ಕೆಳ ಮಧ್ಯಮ ವರ್ಗದ ಯುವಕರು ಸೇನಾ ಭರ್ತಿಯಲ್ಲಿ ಪಾಲ್ಗೊಳ್ಳುತ್ತಾರೆ. ಪರೋಕ್ಷವಾಗಿ ಎಲ್ಲರಿಗೂ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಿದ್ದೇವೆ. ದೇಶದ ಯಾವುದೇ ಭಾಗದಲ್ಲಿ ಸೇನಾ ರ್‍್ಯಾಲಿಯಲ್ಲಿ ಉಚಿತ ಊಟ ಅಥವಾ ನೀರಿನ ವ್ಯವಸ್ಥೆ ಯಾರೂ ಮಾಡಿರಲಿಲ್ಲ ಎಂದು ಸೇನಾ ನೇಮಕಾತಿ ಅಧಿಕಾರಿಗಳು ಶ್ಲಾಘಿಸಿದ್ದಾರೆ’ ಎಂದು ಚಂದ್ರಶೇಖರ ಪಾಟೀಲ ಹೇಳಿದರು.

ಮಾಹಿತಿ ಕೊಡಲಿಲ್ಲ!
ಸೇನಾ ಭರ್ತಿಯಲ್ಲಿ ಪಾಲ್ಗೊಂಡ ಯುವಕರ ಛಾಯಾಚಿತ್ರ ಸೆರೆ ಹಿಡಿಯಲು ಮಾಧ್ಯಮಗಳಿಗೂ ಸೇನಾ ಅಧಿಕಾರಿಗಳು ಅವಕಾಶ ಕೊಡಲಿಲ್ಲ. ಈ ಬಗ್ಗೆ ಜಿಲ್ಲಾಡಳಿತದ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಲಿಲ್ಲ.

ಯಾವ ಜಿಲ್ಲೆಗಳಿಂದ ಯುವಕರು ಬಂದಿದ್ದಾರೆ. ಪ್ರತಿದಿನ ಎಷ್ಟು ಯುವಕರು ಪಾಲ್ಗೊಳ್ಳುತ್ತಾರೆ ಎನ್ನುವ ಮಾಹಿತಿಯೂ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT