ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿ: ಮಕ್ಕಳ ಕಲಿಕೆಗೆ ಹೆಲ್ಪಿಂಗ್ ಹ್ಯಾಂಡ್ಸ್,

Last Updated 19 ಡಿಸೆಂಬರ್ 2021, 13:01 IST
ಅಕ್ಷರ ಗಾತ್ರ

ಮಾನ್ವಿ: ತಾಲ್ಲೂಕಿನ ಪ್ರೌಢಶಾಲಾ ಹಂತದ ಮಕ್ಕಳು ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಪಡೆಯಲು ನೆರವಾಗುವ ನಿಟ್ಟಿನಲ್ಲಿ ಪಟ್ಟಣದ ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್ ಮುಂದಾಗಿದೆ.

ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್ ಕಳೆದ ಎರಡು ವರ್ಷಗಳಿಂದ ಮಾನ್ವಿ ಪಟ್ಟಣದಲ್ಲಿ ನಿರಂತರವಾಗಿ ಹಲವು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಈ ಬಾರಿ ಫೌಂಡೇಶನ್ ವತಿಯಿಂದ ಉಚಿತ ಶೈಕ್ಷಣಿಕ ತರಬೇತಿ ಹಮ್ಮಿಕೊಂಡಿರುವುದು ಸ್ಥಳೀಯರ ಪ್ರಶಂಸೆಗೆ ಕಾರಣವಾಗಿದೆ.

ಕೇಂದ್ರ ಸರ್ಕಾರ ಪ್ರತಿ ವರ್ಷ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳಿಗೆ ನ್ಯಾಶನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್‌ಶಿಪ್ (ಎನ್‌ಎಂಎಂಎಸ್) ಅರ್ಹತಾ ಪರೀಕ್ಷೆ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (ಎನ್‌ಟಿಎಸ್‌ಇ) ಆಯೋಜಿಸುತ್ತದೆ. ಈ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಉನ್ನತ ಶಿಕ್ಷಣ ಮುಗಿಯುವವರೆಗೂ ಪ್ರತಿ ತಿಂಗಳು ವಿದ್ಯಾರ್ಥಿವೇತನ ನೀಡಲಾಗುತ್ತದೆ.

ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದ 12ನೇ ತರಗತಿ (ದ್ವಿತೀಯ ಪಿಯುಸಿ)ವರೆಗೆ ಪ್ರತಿ ತಿಂಗಳು ₹ 1ಸಾವಿರ ಹಾಗೂ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (ಎನ್‌ಟಿಎಸ್‌ಇ)ಯಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಪಿಯುಸಿಯಿಂದ ಪದವಿ, ಸ್ನಾತಕೋತ್ತರ ಪದವಿ ಅಧ್ಯಯನ ಮುಗಿಯುವವರೆಗೆ ಪ್ರತಿ ತಿಂಗಳು ₹ 1,250 ರಿಂದ ₹ 2ಸಾವಿರದ ವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಎಂ.ಫಿಲ್/ಪಿಎಚ್‌.ಡಿ ಹಂತದಲ್ಲಿ ಯುಜಿಸಿ ನಿಯಮಾನುಸಾರ ಪ್ರೋತ್ಸಾಹ ಧನ ನೀಡಲಾಗುತ್ತದೆ. ಕಾರಣ ಈ ಪರೀಕ್ಷೆಗಳಲ್ಲಿ ಆಯ್ಕೆಯಾಗಲು ವಿದ್ಯಾರ್ಥಿಗಳಿಗೆ ತರಬೇತಿಯ ಅಗತ್ಯ ಇದೆ.

ಈ ನಿಟ್ಟಿನಲ್ಲಿ ಮಾನ್ವಿಯ ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್ ತಾಲ್ಲೂಕಿನ ವಿದ್ಯಾರ್ಥಿಗಳಿಗೆ 50 ದಿನಗಳ ಉಚಿತ ತರಬೇತಿ ಹಮ್ಮಿಕೊಂಡಿವೆ.

ಉಚಿತ ತರಬೇತಿಗೆ ಪ್ರೌಢಶಾಲೆಗಳ ತಾಲ್ಲೂಕು ಮಟ್ಟದ ಕಿರು ಪರೀಕ್ಷೆ ನಡೆಸಿ 150ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಫೌಂಡೇಶನ್ ವತಿಯಿಂದ ಉಚಿತವಾಗಿ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಗಿದೆ.

ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಎರಡು ತಾಸು ಪರೀಕ್ಷೆಗೆ ಸಂಬಂಧಿಸಿದ ವಿಜ್ಞಾನ, ಗಣಿತ ಸೇರಿ ಇತರ ಎಲ್ಲಾ ವಿಷಯಗಳನ್ನು ಉಪನ್ಯಾಸಕ ನಾಗರಾಜ್ ಕಟ್ಟಿಮನಿ ಮತ್ತಿತರ ನುರಿತ ವಿಷಯ ತಜ್ಞರು ಬೋಧಿಸುತ್ತಿದ್ದಾರೆ. ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ವಿಶೇಷ ಕಾಳಜಿವಹಿಸಿರುವ ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ ಪದಾಧಿಕಾರಿಗಳ ಬಗ್ಗೆ ಮಕ್ಕಳ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

**

ಎನ್‌ಟಿಎಸ್‌ಇ ಪರೀಕ್ಷೆಯ ಉಚಿತ ತರಬೇತಿಗೆ ಸೇರಿದ ನಂತರ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳು ಗಳಿಸುವ ಆತ್ಮವಿಶ್ವಾಸ ಹೆಚ್ಚಿಸಿದೆ. ಇಲ್ಲಿನ ಬೋಧನೆ ನಮ್ಮ ಕಲಿಕೆಗೆ ಉಪಯುಕ್ತವಾಗಿದೆ.

-ಅಪೂರ್ವ ಸಿ.ಕೆ, ವಿದ್ಯಾರ್ಥಿನಿ, ಮಾನ್ವಿ

***

ವಿದ್ಯಾರ್ಥಿಗಳ ಉತ್ತಮ ಶೈಕ್ಷಣಿಕ ಭವಿಷ್ಯಕ್ಕಾಗಿ ಉಚಿತ ತರಬೇತಿ ಹಮ್ಮಿಕೊಂಡಿರುವ ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್ ಪದಾಧಿಕಾರಿಗಳ ಸಾಮಾಜಿಕ ಕಳಕಳಿ ಶ್ಲಾಘನೀಯ.

-ಮಹ್ಮದ್ ಅಬ್ದುಲ್ ಯೂನುಸ್ , ಶಿಕ್ಷಣ ಸಂಯೋಜಕ, ಬಿಇಒ ಕಚೇರಿ ಮಾನ್ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT