ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯುತ ಗಣೇಶ ವಿಸರ್ಜನೆ

ಗಣೇಶ ವಿಸರ್ಜನೆಗೆ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ವ್ಯವಸ್ಥೆ
Last Updated 7 ಸೆಪ್ಟೆಂಬರ್ 2019, 13:23 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ಐದನೇ ದಿನಗಳ ಗಣೇಶ ವಿಸರ್ಜನೆಯು ಶುಕ್ರವಾರ ರಾತ್ರಿಯಿಡೀ ಶಾಂತಿಯುತವಾಗಿ ನೆರವೇರಿತು.

ಜಿಲ್ಲೆಯಲ್ಲಿ ಒಟ್ಟು 756 ಗಣೇಶ ವಿಗ್ರಹಗಳ ವಿಸರ್ಜನೆ ಆಗಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. ರಾಯಚೂರು ನಗರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಖಾಸಬಾವಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಬೃಹತ್‌ ಪ್ರತಿಮೆಗಳನ್ನು ವಿಸರ್ಜಿಸುವುದಕ್ಕಾಗಿ ಕ್ರೇನ್‌ ಯಂತ್ರಗಳನ್ನು ಇರಿಸಲಾಗಿತ್ತು. ಒಟ್ಟು ಮೂರು ಕ್ರೇನ್‌ಗಳ ಮೂಲಕ ನಗರಸಭೆ ಸಿಬ್ಬಂದಿಯು ವಿಸರ್ಜನೆ ಕಾರ್ಯ ಕೈಗೊಂಡಿದ್ದರು.

ರಾತ್ರಿಯುದ್ದಕ್ಕೂ ಗಣೇಶ ವಿಗ್ರಹಗಳ ಮೆರವಣಿಗೆ ವಿಶೇಷವಾಗಿತ್ತು. ಡಿ.ಜೆ. ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಿದ್ದರೂ ಕೆಲವು ಕಡೆಗಳಲ್ಲಿ ಯುವಕರು ಡಿ.ಜೆ. ಹಾಕಿಕೊಂಡು ನೃತ್ಯ ಮಾಡಿದರು. ಮೆರವಣಿಗೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸಹ ಭಾಗಿಯಾಗಿದ್ದರು. ‘ಗಣೇಶ ಬಪ್ಪ.. ಮೋರಯಾ...’ ಘೋಷಗಳು ಮೊಳಗಿದ್ದವು.

ಎಲ್ಲ ಕಡೆಗಳಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಬಂದೋಬಸ್ತ್‌ ಏರ್ಪಡಿಸಿದ್ದರು. ಅಗ್ನಿಶಾಮಕ ಸಿಬ್ಬಂದಿಯೂ ಸ್ಥಳದಲ್ಲಿದ್ದರು. ಖಾಸಬಾವಿ ಹತ್ತಿರ ಜನಸಂದಣಿ ಏರ್ಪಟ್ಟಿತ್ತು. ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನವರೆಗೂ ವಿಸರ್ಜನೆ ಕಾರ್ಯ ಮುಂದುವರಿದಿತ್ತು. ಮೆರವಣಿಗೆ ಮೂಲಕ ಬರುವ ಗಣೇಶ ವಿಗ್ರಹಗಳಿದ್ದ ವಾಹನಗಳನ್ನು ಸರದಿಯಲ್ಲಿ ನಿಲ್ಲಿಸಲಾಗಿತ್ತು. ಒಂದೊಂದಾಗಿ ಪೂಜೆ ನೆರವೇರಿಸಿದ ಬಳಿಕ ವಿಸರ್ಜನಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಏಳು ಮತ್ತು ಒಂಭತ್ತು ದಿನಗಳ ಗಣೇಶ ವಿಸರ್ಜನೆ ಕೂಡಾ ನಡೆಯಲಿದ್ದು, ಪೊಲೀಸರು ಈಗಾಗಲೇ ಮುನ್ನಚ್ಚರಿಕೆ ವಹಿಸಿದ್ದಾರೆ.

’ಮೆರವಣಿಗೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT