ಮಂಗಳವಾರ, ಸೆಪ್ಟೆಂಬರ್ 21, 2021
25 °C
ಇಂಡಿ: ಅಖಿಲ ಭಾರತ ಗಾಣಿಗ ಸಮಾಜದ ಜನಜಾಗೃತಿ ಸಮಾವೇಶ

‘ಮೀಸಲಾತಿಗೆ ಧಕ್ಕೆಯಾದರೆ ಹೋರಾಟ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇಂಡಿ: ಮೀಸಲಾತಿ ಬಗ್ಗೆ ಗಾಣಿಗ ಸಮುದಾಯ ಜಾಗೃತವಾಗಿರಬೇಕು ಎಂದು ಅಖಿಲ ಭಾರತ ಗಾಣಿಗ ಸಮಾಜದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅಭಿಪ್ರಾಯಪಟ್ಟರು.

ಭಾನುವಾರ ಇಂಡಿ ಪಟ್ಟಣದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ಗಾಣಿಗ ಸಮಾಜದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಇಂದು ಅನೇಕ ಸಮುದಾಯಗಳು ತಮ್ಮ ತಮ್ಮ ಸಮುದಾಯಕ್ಕೆ ಮೀಸಲಾತಿಗಾಗಿ ಹೋರಾಟದ ಹಾದಿ ಹಿಡಿದಿವೆ. ಸರ್ಕಾರಗಳು ಕೂಡಾ ಮೀಸಲಾತಿ ನೀಡುತ್ತಿರುವುದರಿಂದ ನಮ್ಮ ಗಾಣಿಗ ಸಮಾಜ ಕೂಡಾ ಸಂಘಟಿತರಾಗುವುದು ಅವಶ್ಯಕವಾಗಿದೆ, ಒಗ್ಗಟ್ಟಿನಲ್ಲಿ ಬಲವಿದೆ ಎಂದರು.

ಈ ಸಮಾವೇಶ ವೈಯಕ್ತಿಕ ಬೇಳೆ ಬೇಯಿಸಿಕೊಳ್ಳಲು ಅಲ್ಲ, ಇದು ಸಮಾಜದ ಏಳಿಗೆಗೆ ಎನ್ನುವದನ್ನು ಮರೆಯಬಾರದು. ಪ್ರಚಲಿತ ವಿದ್ಯಮಾನಗಳನ್ನು ನೋಡಿದರೆ ನಾವು ಸುಮ್ಮನೆ ಕುಳಿತುಕೊಳ್ಳಬಾರದು. ಸುಮ್ಮನೆ ಕುಳಿತರೆ ಸಮಾಜಕ್ಕೆ ಅನ್ಯಾಯವಾಗುತ್ತದೆ. ಇನ್ನೊಂದು ಸಮುದಾಯವನ್ನು ನೋಡಿ ಬೆಂಗಳೂರಿಗೆ ಹೋಗುವುದು ಬೇಡ. ನಮ್ಮ ಸಮಾಜ ಯಾವುದರಲ್ಲಿಯೂ ಕಡಿಮೆ ಇಲ್ಲ. ರಾಜ್ಯದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹೊಂದಿದೆ ಎಂದರು.

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡುವುದಾದರೆ ನಮ್ಮ ಅಭ್ಯಂತರವಿಲ್ಲ. ಆದರೆ ಅದರಿಂದ ನಮ್ಮ ಸಮುದಾಯಕ್ಕೆ ಇದರಿಂದ ಧಕ್ಕೆಯಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಯೋಗೆಪ್ಪ ನೇದಗಲಿ ಮಾತನಾಡಿ, ಗಾಣಿಗ ಸಮುದಾಯ ಒಗ್ಗಟಿನಿಂದ ಇದ್ದರೆ ನಮಗೆ ಸಿಕ್ಕಿರುವ 2ಎ ಮೀಸಲಾತಿ ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಸಮಾಜದಲ್ಲಿರುವ ಎಲ್ಲಾ ಸಮುದಾಯಗಳ ಜೊತೆಗೆ ಬಾಂಧವ್ಯದಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜಿ ಪಾಟೀಲ, ಬಿಜೆಪಿ ಜಿಲ್ಲಾ ಮುಖಂಡ ದಯಾಸಾಗರ ಪಾಟೀಲ, ಶರಣಬಸು ಅರಕೇರಿ ಮಾತನಾಡಿದರು.
ಗಾಣಿಗ ಗುರು ಪೀಠದ ಡಾ. ಜಯ ಬಸವಕುಮಾರ ಸ್ವಾಮೀಜಿ ಆಶೀರ್ವಚನ ನೀಡಿದರು. ಅಳೂರ ಗ್ರಾಮದ ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮೀಜಿ,  ಹಿರೇರೂಗಿ ಮುಕ್ತಿ ಮಂದಿರದ ಮಾತೋಶ್ರೀ
ಸುಗಲಾದೇವಿ ತಾಯಿ ಸಾನ್ನಿಧ್ಯ ವಹಿಸಿದ್ದರು. ಡಾ.ಶೇಖರ ಸಜ್ಜನ, ಜಿ.ಪಂ. ಸದಸ್ಯ ಮಹಾದೇವ ಗಡ್ಡದ, ಸುಭಾಷ ಕಲ್ಲೂರ, ಸಿದ್ಧಲಿಂಗ ಹಂಜಗಿ, ಶೀಲವಂತ ಉಮರಾಣಿ, ಭೀಮಾಶಂಕರ ಬಿರಾದಾರ, ನಿವೃತ್ತ ಡಿ.ವೈ.ಎಸ್.ಪಿ ಸರನಾಡಗೌಡ, ಎಸ್‌.ಜಿ ಪಾಟೀಲ, ಡಾ. ಅಶೋಕ ಪಾಟೀಲ, ಬಿ.ಎಂ. ಪಾಟೀಲ, ಎಸ್.ಎಸ್ ಚನಗೊಂಡ, ಇಂಡಿ ತಾಲ್ಲೂಕು ಗಾಣಿಗ ಸಮಾಜದ ಅಧ್ಯಕ್ಷ ಎ.ಎಸ್ ಗಾಣಿಗೇರ, ಯುವ ಘಟಕ ಅಧ್ಯಕ್ಷ ರಾಮಚಂದ್ರ ಯಂಕಂಚಿ, ಪಿ.ಎಸ್. ಐ.ಪರಶುರಾಮ ಮನಗೂಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು