ಭಾನುವಾರ, ಜನವರಿ 19, 2020
29 °C

ಸಾಮಾನ್ಯ ಜ್ಞಾನ ಇದ್ದರೆ ಯಶಸ್ಸು ಸಾಧ್ಯ: ಡಾ.ಸಿ.ಬಿ.ವೇದಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: 'ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಬರೀ ಪುಸ್ತಕಗಳನ್ನು ಓದಬೇಕು ಎನ್ನುವುದು ತಪ್ಪು ತಿಳಿವಳಿಕೆ. ಸುತ್ತಮುತ್ತಲಿನ ವಿಷಯಗಳನ್ನು ಗ್ರಹಿಸುವ ಸಾಮಾನ್ಯಜ್ಞಾನ ಇದ್ದರೂ ಯಶಸ್ಸು ಸಾಧ್ಯ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಹೇಳಿದರು.

‘ಕಾಲೇಜು ವಿದ್ಯಾಭ್ಯಾಸ ಸಮಯದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಗುರಿ ಇಟ್ಟುಕೊಂಡು ಓದಲಾರಂಭಿಸಬೇಕು. ಪ್ರತಿಯೊಂದು ಪುಸ್ತಕದಲ್ಲೂ ಗ್ರಹಿಸಲು ಅಗತ್ಯವಾದ ವಿಷಯ ಇದ್ದೇ ಇರುತ್ತದೆ. 7ನೇ ಇಯತೆಯಿಂದ 12 ರವರೆಗಿನ ಪಠ್ಯಪುಸ್ತಕಗಳನ್ನು ತೆಗೆದಿಟ್ಟುಕೊಳ್ಳಬೇಕು. ಪುನರ್‌ ಮನನ ಮಾಡಿಕೊಳ್ಳಬೇಕು’ ಎಂದರು.

‘ಕಲ್ಯಾಣ ಕರ್ನಾಟಕ ಭಾಗದವರಿಗೆ 371–ಜೆ ವರದಾನವಾಗಿದ್ದು, ವಿವಿಧ ಹುದ್ದೆಗಳಿಗೆ ಆಯ್ಕೆಯಾಗಬೇಕು ಎನ್ನುವ ಛಲ ಇಟ್ಟುಕೊಂಡು ಓದಬೇಕು. ಗರಿಷ್ಠ ಗುರಿ ಇಟ್ಟುಕೊಂಡು ಕಠಿಣ ಪರಿಶ್ರಮ ವಹಿಸಿದರೆ, ಯಾವುದಾದರೂ ಒಳ್ಳೆಯ ಹುದ್ದೆಗೆ ಆಯ್ಕೆಯಾಗುವುದು ಖಚಿತ. ಓದುವುದನ್ನು ಯಾವುದೇ ಕಾರಣಕ್ಕೂ ಸಿಮೀತ ಮಾಡಿಕೊಳ್ಳಬೇಡಿ’ ಎಂದು ಕಿವಿಮಾತು ಹೇಳಿದರು.

‘ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತರಬೇತಿ ಒದಗಿಸಲು ಸಮಾಜ ಕಲ್ಯಾಣ ಇಲಾಖೆಯು ಪ್ರತಿವರ್ಷ ಏಪ್ರಿಲ್‌ನಲ್ಲಿ ಅರ್ಜಿ ಆಹ್ವಾನಿಸುತ್ತದೆ. ಈ ಭಾಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕು. ಪರೀಕ್ಷೆ ಕುರಿತು ಗೊಂದಲ ಇದ್ದರೆ ನನ್ನ ಕಚೇರಿಗೆ ಬಂದರೆ, ಪರೀಕ್ಷೆ ಬರೆಯಲು ಅಗತ್ಯ ಸಹಾಯ ಮಾಡಲಾಗುವುದು’ ಎಂದು ತಿಳಿಸಿದರು.

‘ಮೊಬೈಲ್‌ ಇಂಟರ್‌ನೆಟ್‌ ಸೌಲಭ್ಯವನ್ನು ಬರೀ ಹರಟೆ, ಹಾಸ್ಯಗಳಿಗೆ ಸಿಮೀತ ಮಾಡಿಕೊಳ್ಳಬೇಡಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಮಾಹಿತಿ ಓದಿಕೊಳ್ಳಬೇಕು. ಕೆಪಿಎಸ್‌ಸಿ, ಯುಪಿಎಸ್‌ಸಿ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯು ಇಂಟರ್‌ನೆಟ್‌ನಲ್ಲಿ ಸಿಗುತ್ತದೆ’ ಎಂದು ಹೇಳಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು