ಭಾನುವಾರ, ಸೆಪ್ಟೆಂಬರ್ 19, 2021
30 °C
ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳಿಂದ ಪ್ರತಿಭಟನೆ: ಮನವಿ ಸಲ್ಲಿಕೆ

ಉಸ್ತುವಾರಿ ವಿರುದ್ಧ ‘ಗೋ ಬ್ಯಾಕ್’ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ನೀಡದೇ ಹೊರಗಿನವರಿಗೆ ಉಸ್ತುವಾರಿ ನೀಡಿರುವುದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರ ವಿರುದ್ಧ ‘ಗೋ ಬ್ಯಾಕ್ ಉಸ್ತುವಾರಿ’ ಎಂದು ಘೋಷಣೆ ಕೂಗಿ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ನಂಜುಂಡಪ್ಪ ವರದಿ ಪ್ರಕಾರ ಈ ಭಾಗಕ್ಕೆ 8 ಸಚಿವ ಸ್ಥಾನ ನೀಡಬೇಕು. ಆದರೆ ನೂತನ ಸಚಿವ ಸಂಪುಟದಲ್ಲಿ ಕೇವಲ 2 ಸಚಿವ ಸ್ಥಾನ ನೀಡಿ ಮಲತಾಯಿ ಧೋರಣೆ ಅನುಸರಿಸಲಾಗಿದೆ. ಕೊಪ್ಪಳ ಜಿಲ್ಲೆಗೆ ಸಚಿವ ಸ್ಥಾನ ನೀಡಿ ಹಾಲಪ್ಪ ಆಚಾರ್‌ಗೆ ಉಸ್ತುವಾರಿ ನೀಡಿ ಬೀದರ್‌ಗೆ ಪ್ರಭು ಚವ್ಹಾಣ್ ಅವರಿಗೆ ಸಚಿವ ಸ್ಥಾನ ನೀಡಿ ಉಸ್ತುವಾರಿ ನೀಡಿದ್ದು ಸರಿಯಲ್ಲ.

ಅಖಂಡ ಕರ್ನಾಟಕ ಬಯಸುವುದಾದರೆ ಕೊಪ್ಪಳ ಹಾಲಪ್ಪ ಆಚಾರರನ್ನು ಮೈಸೂರು ಜಿಲ್ಲೆಗೆ ಉಸ್ತುವಾರಿಯನ್ನಾಗಿ ಮಾಡಿ, ಬೀದರ್‌ ಜಿಲ್ಲೆಯ ಪ್ರಭು ಚವ್ಹಾಣ್ ಅವರನ್ನು ಹುಬ್ಬಳ್ಳಿ- ಧಾರವಾಡದ ಉಸ್ತುವಾರಿಯನ್ನಾಗಿ ಮಾಡಬೇಕಿತ್ತು.  ಎರಡನೇ ಹಂತದ ಸಚಿವ ಸಂಪುಟ ರಚನೆಯಲ್ಲಿ ಜಿಲ್ಲೆಗೆ ಸಚಿವ ಸ್ಥಾನ ನೀಡಿ ಪ್ರಾದೇಶಿಕ ಅಸಮಾನತೆ ನಿವಾರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕನ್ನಡಪರ ಸಂಘಟನೆಯ ಮುಖಂಡ ಆಶೋಕ ಕುಮಾರ ಜೈನ್, ಶಿವಕುಮಾರ ಯಾದವ, ಖಲೀಲ್ ಪಾಶಾ, ವೀರೇಶ ಹೀರಾ, ಸಾದಿಕ್ ಖಾನ್, ಎಂ.ಡಿ.ರಫೀಕ್, ವೀರೇಶ ಹಾಗೂ ರಾಮು ಇದ್ದರು.

ತರಕಾರಿ ಮಾರುಕಟ್ಟೆ ಸಂಘದಿಂದ ಪ್ರತಿಭಟನೆ: ಹಿಂದುಳಿದ ಜಿಲ್ಲೆಗೆ ಸಚಿವ ಸ್ಥಾನ ನೀಡದೇ ಅನ್ಯ ಜಿಲ್ಲೆಯ ವಿ. ಸೋಮಣ್ಣ ಅವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿರುವುದನ್ನು ಖಂಡಿಸಿ ರಾಯಚೂರು ನಗರದ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಪ್ರತ್ಯೇಕವಾಗಿ ಗೋ ಬ್ಯಾಕ್ ಚಳವಳಿ ನಡೆಸಿ ಮನವಿ ಸಲ್ಲಿಸಿದರು.

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದ ರಾಯಚೂರು ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ಶಾಸಕರಿದ್ದರೂ ಸಚಿವ ಸ್ಥಾನ ನೀಡದೇ ಸ್ಥಳೀಯರಿಗೆ ಅನ್ಯಾಯ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅನ್ಯಾಯ ಸರಿಪಡಿಸದಿದ್ದಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಸಂಘದ ಅಧ್ಯಕ್ಷ ಎನ್. ಮಹಾವೀರ, ಕಾರ್ಯದರ್ಶಿ ಪ್ರಭುನಾಯಕ, ಖಾಜಪ್ಪ, ರಮೇಶ ಬಳ್ಳಾರಿ, ತಿಮ್ಮಾರೆಡ್ಡಿ ಬಿ. ಯಂಕಣ್ಣ ಹಾಗೂ ಉದಯಕುಮಾರ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.