ಭಾನುವಾರ, ಏಪ್ರಿಲ್ 2, 2023
31 °C

ಮೇಕೆಗೂ ಕೃತಕ ಗರ್ಭಧಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ತಾಲ್ಲೂಕಿನ ಶಾಂತಿ ನಗರದ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಈರಪ್ಪ ಅವರು ಮೇಕೆಗಳಿಗೂ ಕೃತಕ ಗರ್ಭಧಾರಣೆ ಮಾಡಬಹುದು ಎಂಬ ಪ್ರಯೋಗದ ಮೂಲಕ ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಪಶು ವೈದ್ಯಕಿಯ ಇಲಾಖೆಯಿಂದ ಜಾನುವಾರುಗಳಿಗೆ ಮಾತ್ರ ಕೃತಕ ಗರ್ಭಧಾರಣೆ ಮಾಡಲಾಗುತ್ತಿತ್ತು. ಉಸ್ಮಾನಾಬಾದಿ ತಳಿಯ ವೀರ್ಯದಿಂದ ಕಳೆದ ಎರಡು ವರ್ಷದಿಂದ ಡಾ.ಈರಪ್ಪ ಅವರು ಕೃತಕ ಗರ್ಭಧಾರಣೆ ಮಾಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಉಸ್ಮಾನಾಬಾದಿ ತಳಿಯ ಮೇಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಆದ್ದರಿಂದ ಈ ತಳಿಯನ್ನು ಅಭಿವೃದ್ಧಿಗೊಳಿಸಲಾಗುತ್ತಿದ್ದು, ಮೇಕೆ ಸಾಕಾಣಿಕೆದಾರರು ಪ್ರಸ್ತುತ ತಳಿಯ ಬಗ್ಗೆ ಆಕರ್ಷಿತರಾಗಿದ್ದಾರೆ.

ಪ್ರಾರಂಭದಲ್ಲಿ ಶಾಂತಿನಗರ ದಲ್ಲಿಯೇ ಉಸ್ಮಾನಾಬಾದಿ ತಳಿಯ ವೀರ್ಯವನ್ನು ನಳಿಕೆಯಲ್ಲಿ ಸಂಗ್ರಹಿಸಿ, ನಂತರ ವೈಜ್ಞಾನಿಕ ವಿಧಾನದ ಮೂಲಕ ಆ ವೀರ್ಯವನ್ನು ಮೇಕೆಯ ಗರ್ಭದಲ್ಲಿ ಬಿಡಲಾಗುತ್ತದೆ. ಐದು ತಿಂಗಳ ಬಳಿಕ ಗರ್ಭಧಾರಣೆ ಯಶಸ್ವಿಯಾದರೆ ಮೇಕೆಯು ಮರಿ ಹಾಕುವಲ್ಲಿ ಯಶಸ್ವಿಯಾಗುತ್ತದೆಆಗ ಶೇ 100ರಷ್ಟು ಈ ಪ್ರಯೋಗ ಯಶಸ್ವಿಯಾದಂತಾಗುತ್ತದೆ ಎಂದು ಡಾ.ಈರಪ್ಪ ಹೇಳುತ್ತಾರೆ.

2 ವರ್ಷಗಳ ಹಿಂದೆ ಮುನಿರಾ ಬಾದ್‍ನಲ್ಲಿ ಪಶು ವಿಜ್ಞಾನ ಇಲಾಖೆ ಯಿಂದ ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಮೇಕೆಯ ಕೃತಕ ಗರ್ಭಧಾರಣೆ ಕುರಿತು ತಮಗೆ ತರಬೇತಿ ನೀಡಿರುವುದರಿಂದ ತಮ್ಮಿಂದ ಈ ಪ್ರಯೋಗ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು.

ದುಬಾರಿ ದರ: ಉಸ್ಮಾನಾಬಾದಿ ತಳಿಯ ಮೇಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ. ಹತ್ತು ತಿಂಗಳ ವಯಸ್ಸಿನ ಮೇಕೆಗೆ ಕನಿಷ್ಠ ₹ 15 ಸಾವಿರ ಮಾರುಕಟ್ಟೆ ದರ ಸಿಗುತ್ತದೆ. ಇದರಿಂದ ಸಾಕಾಣಿಕೆದಾರರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಆದಾಗ್ಯೂ ಈ ಭಾಗದಲ್ಲಿ ಈ ತಳಿಯ ಪರಿಚಯ ಇಲ್ಲದಿರುವುದರಿಂದ ಸಾಕಾಣಿಕೆದಾರರು ಮುಂದೆ ಬರುತ್ತಿಲ್ಲ. ಇನ್ನಾದರೂ ರೈತರು ಮತ್ತು ಇತರ ಸಾಕಾಣಿಕೆದಾರರು ಉಸ್ಮಾನಾಬಾದಿ ತಳಿಯ ಮೇಕೆಗಳನ್ನು ಸಾಕಾಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.