ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಉತ್ತಮ ಮಳೆ: ಸಂಚಾರಕ್ಕೆ ತೊಂದರೆ

ರಭಸವಾಗಿ ಸುರಿದ ಮಳೆ: ಕವಿತಾಳ, ಮಾನ್ವಿ, ಲಿಂಗಸೂಗೂರು, ಹಟ್ಟಿ ಪಟ್ಟಣದ ರಸ್ತೆಗಳಲ್ಲಿ ಹರಿದ ನೀರು
Last Updated 10 ಜುಲೈ 2021, 4:14 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ನಗರ ಸೇರಿದಂತೆ ಜಿಲ್ಲೆಯ ಕೆಲ ತಾಲ್ಲೂಕುಗಳಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ.

ಕವಿತಾಳ, ಮಾನ್ವಿ, ಲಿಂಗಸೂಗೂರು ಹಾಗೂ ಹಟ್ಟಿ ಪಟ್ಟಣದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ರಸ್ತೆಗಳು ಜಲಾವೃತ್ತವಾಗಿದ್ದವು. ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಮಾನ್ವಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನೀರು ಸಂಗ್ರಹವಾಗಿ ಕೆಸರು ಗದ್ದೆಯಂತಾಗಿದೆ. ಮಳೆಯಿಂದಾಗಿ ಹಟ್ಟಿಯ ಮಲ್ಲಾಪುರ ರಸ್ತೆ ಕೊಚ್ಚಿ ಹೋಗಿದೆ. ಕವಿತಾಳದಲ್ಲಿ ಮಳೆ ಜೋರಾಗಿ ಸುರಿದ ಪರಿಣಾಮ ಜನರ ಒಡಾಟಕ್ಕೆ ಸಮಸ್ಯೆಯಾಯಿತು. ದೇವದುರ್ಗ, ಜಾಲಹಳ್ಳಿ ಸೇರಿ ಜಿಲ್ಲೆಯ ವಿವಿಧೆಡೆ ಮಳೆ ಸುರಿಯಿತು.

ರಾಯಚೂರು ನಗರದಲ್ಲಿ ಗಂಜ್ ರಸ್ತೆ, ಮಹಾವೀರ್ ರಸ್ತೆ ಸೇರಿದಂತೆ ಕೆಲವೆಡೆ ನೀರು ಚರಂಡಿಗೆ ಹೊಗದೇ ರಸ್ತೆ ಮೇಲೆ ಹರಿಯಿತು. ರಸ್ತೆ ಬದಿಯ ವ್ಯಾಪಾರಿಗಳು ತೊಂದರೆ ಅನುಭವಿಸಿದರು.

ರಸ್ತೆಗಳು ಜಲಾವೃತ

ಲಿಂಗಸುಗೂರು: ಶುಕ್ರವಾರ ಮಧ್ಯಾಹ್ನ ಸುರಿದ ಮಳೆಯಿಂದಾಗಿ ಪಟ್ಟಣದ ಬಹುತೇಕ ಮುಖ್ಯ ರಸ್ತೆಗಳು ಜಲಾವೃತಗೊಂಡುನಾಗರಿಕರು ರಸ್ತೆ ದಾಟಲು ತೊಂದರೆ ಅನುಭವಿಸಿದರು.

ಪೊಲೀಸ್‍ ಠಾಣೆ, ಬಸ್‍ ನಿಲ್ದಾಣ, ಉಪ ವಿಭಾಗಾಧಿಕಾರಿ ಕಚೇರಿ, ಉಪ ಕಾರಾಗೃಹ ಸೇರಿದಂತೆ ಪ್ರಮುಖ ಕಚೇರಿ ಬಡಾವಣೆ ಸಂಪರ್ಕಿಸುವ ರಸ್ತೆಗಳಲ್ಲಿ ನೀರು ನಿಂತುಕೊಂಡಿದ್ದರಿಂದ ಕೆಲ ಸಮಯ ಸಂಚಾರದಲ್ಲಿ ವ್ಯತ್ಯಯ ಕಂಡುಬಂತು.

ಚರಂಡಿಗಳು ಮುಚ್ಚಿಕೊಂಡಿದ್ದು, ರಸ್ತೆಗಳಲ್ಲಿ ಆಳವಾದ ಗುಂಡಿಗಳು ಬಿದ್ದಿವೆ. ಚರಂಡಿ ಸ್ವಚ್ಛಗೊಳಿಸಲು, ಗುಂಡಿ ಮುಚ್ಚಿಸುವಲ್ಲಿ ಪುರಸಭೆ ಮುಂದಾಗದೆ ಹೋಗಿರುವುದು ರಸ್ತೆ ಜಲಾವೃತಕ್ಕೆ ಕಾರಣ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ಬಸ್ ನಿಲ್ದಾಣದಲ್ಲಿ ಮಳೆ ನೀರು‌

ಮಾನ್ವಿ: ಕೆಲ ದಿನಗಳಿಂದ ಸುರಿಯು ತ್ತಿರುವ ನಿರಂತರ ಮಳೆಯಿಂದಾಗಿ ಮಾನ್ವಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನೀರು ಸಂಗ್ರಹವಾಗಿ ಕೆಸರು ಗದ್ದೆಯಂತಾಗಿದೆ.

ಬಸ್ ನಿಲ್ದಾಣದ ಆವರಣದ ಮುಂಭಾಗದಲ್ಲಿ ತಗ್ಗು ಗುಂಡಿಗಳಿದ್ದು ಮಳೆ ಬಂದಾಗಲೆಲ್ಲಾ ನೀರು ಸಂಗ್ರಹವಾಗುವುದು ಸಾಮಾನ್ಯವಾಗಿದೆ.

ಗುರುವಾರ ಸುರಿದ ಧಾರಾಕಾರ ಮಳೆಯಿಂದ ತಗ್ಗು ಗುಂಡಿಗಳಲ್ಲಿ ನೀರು ಸಂಗ್ರಹವಾಗಿದ್ದು, ಬಸ್ ನಿಲ್ದಾಣ ಪ್ರವೇಶಿಸಲು ನಾಗರಿಕರು ಹರಸಾಹಸಪಡಬೇಕಾಗಿದೆ.

ಮಳೆ ಬಂದಾಗ ಕೇವಲ ಮರಂ ಹಾಕಿ ತಾತ್ಕಾಲಿಕವಾಗಿ ತಗ್ಗು ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಶಾಶ್ವತವಾದ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಾಳಜಿವಹಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ರಸ್ತೆಯಲ್ಲಿಯೇ ನಿಂತ ಮಳೆ ನೀರು

ಕವಿತಾಳ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಧಾರಾಕಾರ ಮಳೆ ಸುರಿದಿದೆ.

ರಭಸವಾಗಿ ಸುರಿದ ಮಳೆಯಿಂದ ಬಹುತೇಕ ಚರಂಡಿಗಳು ತುಂಬಿ ಹರಿದಿದ್ದು ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಯಿತು.

ಇಲ್ಲಿನ ಮುಖ್ಯ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ನಿಂತ ಪರಿಣಾಮ ಬೈಕ್‍ ಸವಾರರು ಪರದಾಡಿದರು.

ವಾಹನಗಳು ಸಂಚರಿಸಿದಂತೆಲ್ಲಾ ಬೈಕ್‍ ಸವಾರರು ಮತ್ತು ಪಾದಾಚಾರಿಗಳಿಗೆ ಗಲೀಜು ನೀರು ಸಿಡಿಯುವಂತಾಯಿತು. ಆನ್ವರಿ ಕ್ರಾಸ್‍ ಮತ್ತು ಸರ್ಕಾರಿ ಕಾಲೇಜು ಎದುರು ನೀರು ನಿಂತು ಗಲೀಜು ವಾತಾವರಣ ಉಂಟಾಗಿದೆ.

--

ಕಂಟ್ರೋಲ್ ರೂಂ ಸ್ಥಾಪನೆ

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಜುಲೈ 12 ರಿಂದ 15 ರವರೆಗೆ ಭಾರಿ ಮಳೆಯ ಕುರಿತು ವರದಿಯಾದ ಕಾರಣ ರಾಯಚೂರು ತಹಶೀಲ್ದಾರ್ ಕಚೇರಿಯಲ್ಲಿ ದಿನದ 24 ಗಂಟೆಗಳ ಕಾಲ ಕಂಟ್ರೋಲ್ ರೂಂ ತೆರೆದು 3 ಶಿಫ್ಟ್‌ನಲ್ಲಿ ಕಾರ್ಯ ನಿರ್ವಹಿಸಲು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ತಾಲ್ಲೂಕಿನ ಸಾರ್ವಜನಿಕರು ಮಾಹಿತಿಗಾಗಿ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ:08532-225629, 08532-226209ಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ತಹಶೀಲ್ದಾರ್ ಡಾ.ಹಂಪಣ್ಣ ಸಜ್ಜನ್ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT