ಮಂಗಳವಾರ, ಮಾರ್ಚ್ 9, 2021
29 °C
108 ಕಾಮಗಾರಿಗಳ ಉದ್ಘಾಟನೆ, ಭೂಮಿಪೂಜೆ ಕಾರ್ಯಕ್ರಮ

ದೇವದುರ್ಗ ಅಭಿವೃದ್ಧಿಗೆ ಸರ್ಕಾರ ಬದ್ಧ: ಡಿಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಾಜ್ಯದಲ್ಲಿ ಹಿಂದುಳಿದ ತಾಲ್ಲೂಕು ಎಂದು ಗುರುತಿಸುವ ದೇವದುರ್ಗದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಸುಕ್ಷೇತ್ರ ಗೂಗಲ್‍ನ ಶ್ರೀ ಅಲ್ಲಮಪ್ರಭು ದೇವಸ್ಥಾನ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ₹231 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈಗ ಅಭಿವೃದ್ದಿ ಶಕೆಯಲ್ಲಿ ದೇವದುರ್ಗ ದಾಪುಗಾಲಿಡುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ತಾಲ್ಲೂಕು ದೇವದುರ್ಗದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಒದಗಿಸಿರುವ ಅನುದಾನವನ್ನು ಶಾಸಕ ಶಿವನಗೌಡ ಅವರು ಸದ್ಬಳಕೆ ಮಾಡಿಕೊಂಡಿದ್ದು, ಇದಕ್ಕೆ ಬೆಂಬಲವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಇನ್ನಷ್ಟು ಆದ್ಯತೆ ನೀಡುತ್ತಿದೆ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಅತಿಹೆಚ್ಚು ಅನುದಾನ ಕ್ಷೇತ್ರಕ್ಕೆ ನೀಡಲಾಗಿದೆ. ಸಾರ್ವಜನಿಕ ಸೇವೆಯಲ್ಲಿರುವ ಜನಪ್ರತಿನಿಧಿಗಳು ಆಸ್ತಿ, ಅಂತಸ್ತು, ಅಧಿಕಾರ ಯಾವುದು ಶಾಶ್ವತವಲ್ಲ. ಅವರ ಅಧಿಕಾರ ಅವಧಿಯಲ್ಲಿ ಜನ ಪರವಾಗಿ ಮಾಡಿರುವ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ಈ ನಿಟ್ಟಿನಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಅವರು ಸಚಿವರಾಗಿ, ಶಾಸಕರಾಗಿ ಶಾಶ್ವತವಾದ ಜನಪರ ಅಭಿವೃದ್ಧಿ ಕಾರ್ಯಗಳನ್ನು ತಾಲ್ಲೂಕಿನಲ್ಲಿ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.

ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಡಾ.ನಂಜುಂಡಪ್ಪ ವರದಿ ಪ್ರಕಾರ ದೇವದುರ್ಗ ತಾಲ್ಲೂಕು ಅತಿ ಹಿಂದುಳಿದ ತಾಲ್ಲೂಕು ಎಂದು ಗುರುತಿಸಲಾಗಿತ್ತು. ಇದೀಗ ರಾಜ್ಯದಲ್ಲಿ ನಾಗಾಲೋಟದಲ್ಲಿ ಅಭಿವೃದ್ಧಿ ಆಗುತ್ತಿರುವ ಕ್ಷೇತ್ರವಾಗಿ ಗಮನ ಸೆಳೆಯುತ್ತಿದೆ ಎಂದು ತಿಳಿಸಿದರು.

108 ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿಪೂಜೆ ನಡೆಯುತ್ತಿದೆ. ಹೃದಯ ಶ್ರೀಮಂತಿಕೆ ಇರುವ ಶಾಸಕ ಶಿವನಗೌಡ ನಾಯಕ ಅವರು ಈ ಕ್ಷೇತ್ರದಲ್ಲಿದ್ದಾರೆ. ದೇವದುರ್ಗ ತಾಲ್ಲೂಕು ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಾಕಷ್ಟು ಅನುದಾನ ಕೊಡಲಿದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲೇ ಅಭಿವೃದ್ಧಿ ಹೊಂದಿದ ತಾಲ್ಲೂಕು ದೇವದುರ್ಗ ಆಗಲಿದೆ ಎಂದು ಹೇಳಿದರು.

ಅರಣ್ಯ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಈ ಹಿಂದೆ ಉನ್ನತ ಶಿಕ್ಷಣ ಸಚಿವನಾಗಿದ್ದಾಗ ದೇವದುರ್ಗ ಕ್ಷೇತ್ರಕ್ಕೆ ಎರಡು ಪಾಲಿಟೆಕ್ನಿಕ್‌ ಕಾಲೇಜುಗಳನ್ನು ಮಂಜೂರಿ ಮಾಡಿದ್ದೆ. ಸಚಿವ ಸ್ಥಾನ ವಹಿಸಿಕೊಂಡು ಅಲ್ಲಮಪ್ರಭು ದೇವರ ಸನ್ನಿಧಿ ಇರುವ ಗೂಗಲ್‌ ಗ್ರಾಮದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪಾಲ್ಗೊಂಡಿರುವುದು ಮೊದಲ ಸಭೆಯಾಗಿದೆ. ದೇವದುರ್ಗದಲ್ಲಿ ಕೃಷ್ಣಾನದಿ ಹರಿಯುತ್ತಿದ್ದು, ಸುತ್ತಮುತ್ತಲೂ ಅರಣ್ಯ ಬೆಳೆಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ದೇವದುರ್ಗ ತಾಲ್ಲೂಕಿನಲ್ಲಿ ‘ಸಾಲುಮರದ ತಿಮ್ಮಕ್ಕ ವನದ ಅಭಿವೃದ್ಧಿ’ ಮಾಡಲಾಗುವುದು. ಈ ಭಾಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಅದರಲ್ಲಿ ದೇವದುರ್ಗಕ್ಕೆ ಹೆಚ್ಚಿನ ಭಾಗ ಸಿಗಲಿದೆ ಎಂದರು.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಶಿವನಗೌಡ ನಾಯಕ ಪ್ರಸ್ತಾವಿಕವಾಗಿ ಮಾತನಾಡಿದರು.

ಅಡವಿಲಿಂಗ ಮಹಾರಾಜರು, ಜಾಲಹಳ್ಳಿಯ ಜಯಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ, ಮುಂಡರಗಿಯ ಶಿವಣ್ಣ ತಾತ ಪಟ್ಟದೇವರು, ಗಬ್ಬೂರಿನ ಮಹಾಸಂಸ್ಥಾನ ಮಠದ ಬೂದಿಬಸವ ಶಿವಾಚಾರ್ಯ ಮಹಾಸ್ವಾಮಿ, ಸುಲ್ತಾನಪುರದ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿ, ಸಾವಿರ ದೇವರ ಸಂಸ್ಥಾನ ಹೀರೆಮಠದ ವೀರತಪಸ್ವಿ ವೀರಭದ್ರ ಶಿವಾಚಾರ್ಯ ಅವರು ಸಾನಿಧ್ಯ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಪರಮೇಶಪ್ಪ, ದೇವರ್ದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹನುಮಂತ ಕಟ್ಟಿಮನಿ, ಎಪಿಎಂಸಿ ಅಧ್ಯಕ್ಷ ರಾಮನಗೌಡ್ಡ, ಜಿಲ್ಲಾ ಪಂಚಾಯಿತಿ ಸದಸ್ಯೆ ಬಸ್ಸಮ್ಮ ಲಿಂಗಣ್ಣಗೌಡ ದೊಡ್ಡಮನಿ, ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ತನ್ವೀರ್ ಶೇಖ್ ಅಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು