ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಓದಿಗೆ ಪ್ರೇರಕವಾದ ಸರ್ಕಾರಿ ಗ್ರಂಥಾಲಯ

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳ ದೊಡ್ಡ ಭಂಡಾರ, ಸಮರ್ಪಕವಾಗಿ ಮೂಲ ಸೌಕರ್ಯಗಳ ಅಭಿವೃದ್ಧಿ
Last Updated 21 ಆಗಸ್ಟ್ 2021, 14:23 IST
ಅಕ್ಷರ ಗಾತ್ರ

ರಾಯಚೂರು: ನಗರದ ಕೇಂದ್ರ ಗ್ರಂಥಾಲಯವು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಓದುವುದಕ್ಕೆ ನೆಚ್ಚಿನ ತಾಣವಾಗಿದೆ.

ಗ್ರಂಥಾಲಯವು ಬೆಳಿಗ್ಗೆ 8 ಗಂಟೆಗೆ ಬಾಗಿಲು ತೆರೆಯುವುದನ್ನು ವಿದ್ಯಾರ್ಥಿಗಳು ಕಾಯುತ್ತಾರೆ. ಬೆಳಗಿನಿಂದ ರಾತ್ರಿ 8 ಗಂಟೆಯವರೆಗೂ ವಿದ್ಯಾರ್ಥಿಗಳು ಬಂದು ಹೋಗುವುದು ನಿರಂತರವಾಗಿರುತ್ತದೆ. ಗ್ರಂಥಾಲಯದ ಒಳ ಆವರಣ ಹಾಗೂ ಹೊರ ಆವರಣದಲ್ಲಿಯೂ ಪುಸ್ತಕಗಳನ್ನು ಹಿಡಿದು ಕುಳಿತಿರುವವರನ್ನು ಕಾಣಬಹುದು. ಒಳಾಂಗಣದಲ್ಲಿ 200 ಕ್ಕೂ ಹೆಚ್ಚಿನ ಆಸನಗಳಿದ್ದರೂ ಸಾಕಾಗುತ್ತಿಲ್ಲ. ಹೀಗಾಗಿ ಗ್ರಂಥಾಲಯಕ್ಕೆ ಹೊಂದಿಕೊಂಡು ಮತ್ತೊಂದು ಕಟ್ಟಡ ನಿರ್ಮಿಸಲಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯಿಂದ ನೂತನ ಕಟ್ಟಡಕ್ಕಾಗಿ ₹ 50 ಅನುದಾನ ಒದಗಿಸಲಾಗಿದೆ.

ಪ್ರೌಢಶಾಲಾ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು, ಓದುವ ಆಸಕ್ತಿ ಇರುವವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುವರು, ಸಾಹಿತಿಗಳು, ಕವಿಗಳು ಹಾಗೂ ವಿವಿಧ ಮಾಹಿತಿ ಸಂಗ್ರಹಕ್ಕಾಗಿ ಬರುವವರು...

ಹೀಗೆ ಗ್ರಂಥಾಲಯವು ಯಾವಾಗ ನೋಡಿದರೂ ಕಾರ್ಯಚಟುವಟಿಕೆಯಿಂದ ಕೂಡಿರುವುದನ್ನು ಕಾಣಬಹುದು. ನೆಲಮಹಡಿ ಹಾಗೂ ಮೊದಲಮಹಡಿಗಳಲ್ಲಿ ಒಟ್ಟು 1.65 ಲಕ್ಷ ಪುಸ್ತಕಗಳ ದೊಡ್ಡ ಸಂಗ್ರಹವೇ ಇದೆ. ಮನೆಯಲ್ಲಿ ಓದುವುದಕ್ಕಾಗಿ ಪುಸ್ತಕಗಳ ಬಳಕೆದಾರರ ಸಂಖ್ಯೆ ಒಟ್ಟು 35 ಸಾವಿರ ಇದೆ.

ಸಾರ್ವಜನಿಕ ಉದ್ಯಾನ ಹಾಗೂ ತೋಟಗಾರಿಕೆ ಇಲಾಖೆಗೆ ಹೊಂದಿಕೊಂಡು ಗ್ರಂಥಾಲಯವಿದೆ. ಅಲ್ಲದೆ, ಗ್ರಂಥಾಲಯದ ಒಳ ಆವರಣವು ಸಂಪೂರ್ಣ ಹಸಿರಿನಿಂದ ಕಂಗೊಳಿಸುತ್ತಿದೆ. ಹುಲ್ಲುಹಾಸು ಹಾಗೂ ವಿವಿಧ ಮರಗಳು ಸದಾ ತಂಪು ಸೂಸುತ್ತವೆ. ವಾತಾವರಣವು ಓದುಗರ ಸ್ನೇಹಿ ಆಗಿರುವುದಕ್ಕೆ ವಿದ್ಯಾರ್ಥಿಗಳ ದಟ್ಟಣೆಯನ್ನು ನಿರ್ವಹಿಸುವುದಕ್ಕೆ ಗ್ರಂಥಾಲಯದಲ್ಲಿ ಒಟ್ಟು 20 ಸಿಬ್ಬಂದಿ ಇದ್ದಾರೆ.

ಓದುಗರು ಇ–ಗ್ರಂಥಾಲಯ ಬಳಕೆ ಮಾಡುವುದಕ್ಕೆ ಅವಕಾಶವಿದೆ. ಇಂಟರ್‌ನೆಟ್‌ ಬ್ರೌಸ್‌ ಮಾಡುವುದಕ್ಕೆ 12 ಕಂಪ್ಯೂಟರ್‌ಗಳು ಹಾಗೂ 8 ಟ್ಯಾಬ್‌ಗಳನ್ನು ಇಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಲು ಅಗತ್ಯವಾಗುವ ಪುಸ್ತಕಗಳ ರಾಶಿಯೇ ಇಲ್ಲಿದೆ. ಸರ್ಕಾರಿ ಮುದ್ರಣಾಲಯದಿಂದ ಹೊರಬರುವ ಪುಸ್ತಕಗಳು ಕೂಡಾ ಬಳಕೆಗೆ ಸಿಗುತ್ತವೆ. ಓದುಗರ ಅಭಿರುಚಿ ಮತ್ತು ಶೈಕ್ಷಣಿಕವಾಗಿ ಓದುವುದಕ್ಕೆ ಬೇಕಾಗುವ ಪುಸ್ತಕಗಳನ್ನು ಖರೀದಿಸಿ, ಗ್ರಂಥಾಲಯವನ್ನು ಓದುಗರ ಕೇಂದ್ರಿತವಾಗಿ ಇಟ್ಟುಕೊಳ್ಳಲಾಗಿದೆ.

‘ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಆಸನಗಳ ಕೊರತೆ ಆಗುವ ಕಾರಣಕ್ಕಾಗಿ ಕಟ್ಟಡಗಳನ್ನು ವಿಸ್ತರಣೆ ಮಾಡುತ್ತಿದ್ದೇವೆ. ಎಲ್‌ಕೆಜಿಯಿಂದ ಹಿಡಿದು ಪದವಿ ಹಂತದವರೆಗೂ ವಿದ್ಯಾರ್ಥಿಗಳಿಗೆ ಓದುವುದಕ್ಕೆ ಬೇಕಾಗುವ ಪುಸ್ತಕಗಳನ್ನು ಸಂಗ್ರಹಿಸಿದ್ದೇವೆ. ಕಳೆದ 14 ತಿಂಗಳುಗಳಿಂದ ‘ಇ–ಗ್ರಂಥಾಲಯ’ ಆರಂಭಿಸಿದ್ದು, ಒಳ್ಳೆಯ ಪ್ರತಿಕ್ರಿಯೆ ಇದೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಚಂದಾದಾರಾಗಿ, ಬಳಕೆ ಮಾಡುತ್ತಿದ್ದಾರೆ’ ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಪಾಲಕ ಎಂ.ಎಸ್‌. ರೆಬಿನಾಳ ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

ವ್ಯವಸ್ಥೆಗೆ ಸ್ಥಳೀಯರ ಮೆಚ್ಚುಗೆ

ಮಾನ್ವಿ: ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಉತ್ತಮ ಅಧ್ಯಯನ ಕೇಂದ್ರವಾಗಿದೆ.

ಗ್ರಂಥಾಲಯದಲ್ಲಿ ಓದುಗರಿಗೆ ಸುಸಜ್ಜಿತ ಆಸನಗಳು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಂಥಾಲಯದಲ್ಲಿ ಸಾಹಿತ್ಯಿಕ ಗ್ರಂಥಗಳ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ನೆರವಾಗುವ ಪುಸ್ತಕಗಳು, ನಿಯತಕಾಲಿಕೆಗಳು ಹಾಗೂ ಎಲ್ಲಾ ದಿನಪತ್ರಿಕೆಗಳ ಸೌಲಭ್ಯ ಇದೆ. ಸಂಪೂರ್ಣ ಡಿಜಿಟಲ್ ಸೌಲಭ್ಯ ಹೊಂದುವ ಮೂಲಕ ಇ-ಗ್ರಂಥಾಲಯವಾಗಿ ಓದುಗರಿಗೆ ನೆರವಾಗುತ್ತಿದೆ.

ಓದುಗರು ಇ-ಸಾರ್ವಜನಿಕ ಗ್ರಂಥಾಲಯ ಮೊಬೈಲ್ ಆ್ಯಪ್ ಮೂಲಕ 3,919 ಓದುಗರು ಆನ್‍ಲೈನ್ ಮೂಲಕ ಸದಸ್ಯತ್ವದ ನೋಂದಣಿ ಮಾಡಿಸಿದ್ದಾರೆ. ಓದುಗರು ಮೊಬೈಲ್ ಆ್ಯಪ್ ಮೂಲಕ ತಮ್ಮ ಗ್ರಂಥಾಲಯದ ಸ್ಥಳ ಹಾಗೂ ಅಗತ್ಯ ಪುಸ್ತಕಗಳ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ.

ಗ್ರಾಮೀಣ ಓದುಗರಿಗೆ ವರದಾನ

ಲಿಂಗಸುಗೂರು: 70ರ ದಶಕದಲ್ಲಿ ಪುರಸಭೆಯ ಚಿಕ್ಕ ಕೊಠಡಿಯಲ್ಲಿ ಆರಂಭವಾಗಿದ್ದ ಇಲ್ಲಿನ ಸಾರ್ವಜನಿಕ ಗ್ರಂಥಾಲಯ 2004ರ ಅವಧಿಯಲ್ಲಿ ಸ್ವತಂತ್ರ ಕಟ್ಟಡದೊಂದಿಗೆ ಜಿಲ್ಲೆಯಲ್ಲಿ ಅತಿಹೆಚ್ಚು ಓದುಗರನ್ನು ಹೊಂದಿದ ಗ್ರಂಥಾಲಯವಾಗಿ ಹೊರಹೊಮ್ಮಿದೆ.

ವಿವಿಧ ಬಗೆಯ ಕತೆ, ಕವನ, ಸಾಹಿತ್ಯ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳು ಸೇರಿದಂತೆ ಇತರೆ 42,596 ಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿದೆ. ಆನ್‍ಲೈನ್‍ ಆ್ಯಪ್‍ದಲ್ಲಿ 19 ಸಾವಿರ ಓದುಗರು ನೋಂದಣಿ ಮಾಡಿಕೊಂಡಿದ್ದಾರೆ. ಸ್ಥಳೀಯವಾಗಿ 1,296 ಓದುಗರು ನೋಂದಣಿ ಹೊಂದಿದ್ದು ಪುಸ್ತಕಗಳನ್ನು ಎರವಲು ಪಡೆಯುತ್ತಿದ್ದಾರೆ.

ರಾಷ್ಟ್ರೀಯ ಮತ್ತು ಸ್ಥಳೀಯ ದಿನ ಪತ್ರಿಕೆ, ವಾರಪತ್ರಿಕೆ, ಮಾಸಿಕ ಪತ್ರಿಕೆಗಳು ಲಭ್ಯವಿವೆ. ಸರ್ಕಾರಿ ರಜೆಗಳು ಹೊರತು ಪಡಿಸಿ ನಿತ್ಯ ಬೆಳಿಗ್ಗೆ 8.30 ರಿಂದ ರಾತ್ರಿ 8 ಗಂಟೆವರೆಗೆ ತರೆದುಕೊಂಡಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಅತಿಹೆಚ್ಚು ಗ್ರಾಮೀಣ ಪ್ರತಿಭೆಗಳು ಸದ್ಬಳಕೆ ಮಾಡಿಕೊಳ್ಳುತ್ತಿರುವುದು ವಿಶೇಷ.

ಓದುಗರ ಜ್ಞಾನ ದೀವಿಗೆ

ಸಿಂಧನೂರು: ನಗರದ ಪಂಡಿತ್‌ ಗುರುಪುಟ್ಟರಾಜ ಉದ್ಯಾನದಲ್ಲಿ ಇರುವ ಸಿಂಧನೂರು ಶಾಖಾ ಗ್ರಂಥಾಲಯವು ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹದ ಮೂಲಕ ಜ್ಞಾನದ ದೀವಿಗೆ ಬೆಳಗುತ್ತಿದೆ.

ಈ ಗ್ರಂಥಾಲಯದಲ್ಲಿ 54,452 ಪುಸ್ತಕಗಳಿವೆ. ಹಿಂಬದಿಯ ಹಳೆಯ ಗ್ರಂಥಾಲಯದಲ್ಲಿ ಸ್ಥಳೀಯ, ಪ್ರಾದೇಶಿಕ, ರಾಜ್ಯಮಟ್ಟದ ಪತ್ರಿಕೆಗಳ ಓದುವಿಕೆಗೆ ಅವಕಾಶ ಕಲ್ಪಿಸಲಾಗಿದೆ. ಈ ಗ್ರಂಥಾಲಯದಲ್ಲಿ ಸ್ಫರ್ಧಾತ್ಮಕ ಪರೀಕ್ಷೆಯ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳು ಲಭ್ಯ ಇವೆ. ನಿತ್ಯ ವಿದ್ಯಾರ್ಥಿಗಳು, ಓದುಗರು ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ.

‘ಸಿಂಧನೂರಿನಲ್ಲಿ ಯಾವುದೇ ಖಾಸಗಿ ಗ್ರಂಥಾಲಯಗಳು ಇಲ್ಲದೆ ಇರುವುದರಿಂದ ಸರ್ಕಾರದ ಈ ಗ್ರಂಥಾಲಯ ಅಕ್ಷರದ ಹಸಿವಿನಲ್ಲಿರುವವರಿಗೆ ಬಹುದೊಡ್ಡ ವರದಾನವಾಗಿದೆ’ ಎನ್ನುತ್ತಾರೆ ಉಪನ್ಯಾಸಕ ಡಾ.ಹುಸೇನಪ್ಪ ಅಮರಾಪು ಅವರು.

ಹಲವು ಸೌಲಭ್ಯಗಳು

ರಾಯಚೂರು ಕೇಂದ್ರ ಗ್ರಂಥಾಲಯದಲ್ಲಿ ಬಿಸಿ, ತಂಪು ಹಾಗೂ ಸಾಮಾನ್ಯ ತಾಪಮಾನ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಇದೆ. ಮಹತ್ವದ ವಿಷಯಗಳನ್ನು ಎರಡು ಪುಟ ಉಚಿತವಾಗಿ ಮುದ್ರಿಸಿಕೊಳ್ಳಲು ಅವಕಾಶವಿದೆ. ಹೆಚ್ಚು ಪುಟಗಳಿಗಾಗಿ ತಲಾ ₹1 ಶುಲ್ಕ ನಿಗದಿ ಮಾಡಲಾಗಿದೆ.

ಸುಸಜ್ಜಿತ ಗ್ರಂಥಾಲಯ

ಜಿಲ್ಲೆಯ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಒಂದು ಕೋಟಿ ವೆಚ್ಚದಲ್ಲಿ ಗ್ರಂಥಾಲಯಗಳನ್ನು ನಿರ್ಮಿಸಲಾಗುತ್ತಿದೆ. ಮುದಗಲ್‌, ಮಾನ್ವಿ, ಸಿಂಧನೂರು, ಲಿಂಗಸುಗೂರು, ಮಸ್ಕಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿವೆ. ರಾಯಚೂರು ನಗರವೊಂದರಲ್ಲೇ 19 ಗ್ರಂಥಾಲಯಗಳಿವೆ. ಸ್ಥಳೀಯ ಸಂಸ್ಥೆಗಳು ಗ್ರಂಥಾಲಯ ಅಭಿವೃದ್ಧಿಗೆ ತೆರಿಗೆ ಸಂಗ್ರಹಿಸಿ ಕೊಡುತ್ತಿರುವುದು ವಿಶೇಷ.

**

ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ಮತ್ತು ಅಗತ್ಯ ಪುಸ್ತಕಗಳೆಲ್ಲ ಲಭ್ಯವಾಗುವಂತೆ ಮಾಡಲಾಗಿದೆ. ಪ್ರತಿದಿನ ಎರಡು ಸಾವಿರ ಓದುಗರು ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ. ಈಚೆಗೆ ‘ಇ–ಗ್ರಂಥಾಲಯ’ ಹೆಚ್ಚು ಬಳಕೆ ಆಗುತ್ತಿದೆ.

- ಎಂ.ಎಸ್‌. ರೆಬಿನಾಳ, ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಪಾಲಕ ರಾಯಚೂರು

***

ಮಾನ್ವಿ ಪಟ್ಟಣದಲ್ಲಿರುವ ಸಾರ್ವಜನಿಕ ಗ್ರಂಥಾಲಯದಿಂದ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಅನುಕೂಲವಾಗಿದೆ. ಪ್ರತಿದಿನ ಗ್ರಂಥಾಲಯದಲ್ಲಿ ಅಧ್ಯಯನ ಮಾಡುವುದು ನಮಗೆ ಹವ್ಯಾಸವಾಗಿದೆ.

-ವಿಜಯಕುಮಾರ, ಬಿ.ಎ ವಿದ್ಯಾರ್ಥಿ, ಮಾನ್ವಿ

**

ಸಾರ್ವಜನಿಕ ಗ್ರಂಥಾಲಯ ಗ್ರಾಮೀಣ ಪ್ರತಿಭೆಗಳಿಗೆ ಆಪದ್ಭಾಂದವ. ಗ್ರಂಥಪಾಲಕರು ಪುಸ್ತಕಗಳನ್ನು ಸ್ವತಃ ಹುಡುಕಾಟ ನಡೆಸಿ ಓದಲು ಸ್ವತಂತ್ರ ನೀಡುತ್ತಾರೆ. ನೂರಾರು ಯುವಕರು ಈ ಗ್ರಂಥಾಲಯದಲ್ಲಿ ಓದಿ ಸಾಧನೆ ಮೆರೆದಿದ್ದಾರೆ.

-ಮಂಜುನಾಥ ಐದನಾಳ, ಓದುಗ, ಲಿಂಗಸುಗೂರು

***

ಕಾಲೇಜು ಪುಸ್ತಕಗಳ ಜತೆಗೆ ಸ್ಪರ್ಧಾತ್ಮಕ ಪುಸ್ತಕಗಳು ಸಿಂಧನೂರು ಶಾಖಾ ಗ್ರಂಥಾಲಯದಲ್ಲಿ ಲಭ್ಯವಿರುವುದರಿಂದ ಪರೀಕ್ಷೆಗಳಿಗೆ ಅಣಿಯಾಗಲು ಅನುಕೂಲವಾಗಿದೆ.

-ಹನುಮೇಶ, ಲಕ್ಷ್ಮಿಕ್ಯಾಂಪ್ ಸಿಂಧನೂರು

****

– ವರದಿಗಳು: ಬಸವರಾಜ ಭೋಗಾವತಿ, ಬಿ.ಎ.ನಂದಿಕೋಲಮಠ, ಡಿ.ಎಚ್‌.ಕಂಬಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT