ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಂದೂರು: ರಥೋತ್ಸವದ ಸಂಭ್ರಮ

ರಥ ಎಳೆದು ಸಂಭ್ರಮಸಿದ ಭಕ್ತ ಸಮೂಹ
Last Updated 23 ಏಪ್ರಿಲ್ 2018, 13:17 IST
ಅಕ್ಷರ ಗಾತ್ರ

ಬೈಂದೂರು: ಪುರಾಣ ಮತ್ತು ಚರಿತ್ರೆಯಲ್ಲಿ ಉಲ್ಲೇಖಗೊಂಡ, ವಿಶಿಷ್ಟ ಶಿಲ್ಪಕಲಾ ವೈಭವದಿಂದ ಗಮನ ಸೆಳೆಯುವ ಬೈಂದೂರಿನ ಗ್ರಾಮದೇವತೆ ಸೇನೇಶ್ವರ ದೇವರ ರಥೋತ್ಸವ ಜನರ ಸಂಭ್ರಮ, ಸಡಗರಗಳ ನಡುವೆ ಶನಿವಾರ ಮುಕ್ತಾಯವಾಯಿತು.

ಕ್ಷೇತ್ರದ ತಂತ್ರಿ ಕೃಷ್ಣ ಸೋಮಯಾಜಿ ಪ್ರಧಾನ ಆಚಾರ್ಯತ್ವದಲ್ಲಿ ದೇವರಿಗೆ ಬೆಳಿಗ್ಗಿನಿಂದ ನಿತ್ಯ ಬಲಿ, ಶತರುದ್ರಾಭಿಷೇಕ, ರಥ ಬಲಿ, ಕ್ಷೇತ್ರಪಾಲ ಬಲಿ, ಪಂಚಾಮೃತ ಅಭಿಷೇಕ, ವಿಶೇಷ ಭೂತ ಬಲಿ ನಡೆದ ಬಳಿಕ ಮಧ್ಯಾಹ್ನ ದೇವರ ಉತ್ಸವ ಮೂರ್ತಿಯ ರಥಾರೋಹಣ ನಡೆಯಿತು.ವಿವಿಧೆಡೆಯಿಂದ ಆಗ
ಮಿಸಿದ್ದ ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ನಡೆದ ನಗರೋತ್ಸವದಲ್ಲಿ ಭಕ್ತರು ಜಾತಿ, ಮತ ಬೇಧರಹಿತವಾಗಿ ರಥ ಎಳೆದು ಸಂಭ್ರಮಿಸಿದರು.

ಆ ಬಳಿಕ ದೇವರ ರಥಾವರೋಹಣ ವಿಧಿ ನೆರವೇರಿತು. ಬೆಳಿಗ್ಗಿನಿಂದ ಸಂಜೆಯ ವರೆಗೆ ಹರಿದುಬಂದ ಜನಸಾಗರ ಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಂಡಿತು. ಜಾತ್ರೆ ನಿಮಿತ್ತ ಠಿಕಾಣಿ ಹೂಡಿದ್ದ ತಿಂಡಿತಿನಿಸು, ಮಣಿಸರಕು, ಆಟಿಕೆಗಳ ಅಂಗಡಿಗಳಲ್ಲಿ ಭರಾಟೆ ವ್ಯವಹಾರ ನಡೆಯಿತು.

ದೇವಳ ಆಡಳತ ಸಮಿತಿ ಅಧ್ಯಕ್ಷ ಚೆನ್ನಕೇಶವ ಉಪಾಧ್ಯಾಯ, ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಊರ ಪ್ರಮುಖರು, ಅಧಿಕಾರಿ ವರ್ಗದವರು ಪಾಲ್ಗೊಂಡರು. ಚುನಾವಣಾ ಕಾವು ಮತ್ತು ನೀತಿ ಸಂಹಿತೆ ಜಾತ್ರಾ ಮಹೋತ್ಸವಕ್ಕೆ ಅಡ್ಡಿಯಾಗಲಿಲ್ಲ. ಪೊಲೀಸರು ಸುರಕ್ಷತಾ ಕ್ರಮ ಕೈಗೊಂಡಿದ್ದರು.

ಹಬ್ಬದ ಅಂಗವಾಗಿ ’ಸೆಲ್ ಇನ್ ಟೌನ್’ ಪ್ರಾಯೋಜಕತ್ವದಲ್ಲಿ ’ಅಮ್ಮನ ಜೊತೆಗೊಂದು ಸೂಪರ್ ಸೆಲ್ಫಿ-2018’ ಸ್ಪರ್ಧೆ ಆಯೋಜಿಸಲಾಗಿತ್ತು. ನೂರಾರು ಜನರು ಸೆಲ್ಫಿ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಆರ್‌. ಜೆ. ನಯನ ಶೆಟ್ಟಿ, ಕಟಕ ಚಲನಚಿತ್ರದ ಬಾಲನಟಿ ಶ್ಲಾಘಾ ಸಾಲಿಗ್ರಾಮ ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಂಜೆ ಶಾರದಾ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಮ್ಯೂಸಿಕಲ್ ಪಬ್ಲಿಸಿಟಿ ಬೈಂದೂರು ಇವರಿಂದ ಸಂಗೀತ ರಸಸಂಜೆ, ಶ್ಲಾಘಾ ಸಾಲಿಗ್ರಾಮ ಇವರಿಂದ ನೃತ್ಯ ವೈಭವ, ಡ್ರಾಮಾ ಜ್ಯೂನಿಯರ್ ಖ್ಯಾತಿಯ ಆರಾಧ್ಯ ಎಸ್. ಶೆಟ್ಟಿ ಕಳವಾಡಿ ಇವರಿಂದ ಡ್ರಾಮಾ ಜರುಗಿತು. ಭಾನುವಾರ ರಾತ್ರಿ ಅವಭ್ರತಸ್ನಾನದೊಂದಿಗೆ ರಥೋತ್ಸವಕ್ಕೆ ತೆರೆ ಬೀಳಲಿದೆ.

ಸೇನೇಶ್ವರ ದೇವಸ್ಥಾನದ ರಥೋತ್ಸವದ ಪೂರ್ವದಲ್ಲಿ ಮುಖ್ಯರಸ್ತೆಯಲ್ಲಿರುವ ಜಾಮೀಯಾ ಮಸೀದಿಗೆ ತೆರಳಿ ಮುಸ್ಲಿಂ ಬಾಂಧವರನ್ನು ಉತ್ಸವಕ್ಕೆ ಆಹ್ವಾನಿಸುವ ಹಾಗೂ ನಗರೋತ್ಸವದ ವೇಳೆ ಸ್ಥಳೀಯ ಠಾಣಾಧಿಕಾರಿಗಳನ್ನು ಕರೆತಂದು ಉತ್ಸವಕ್ಕೆ ಚಾಲನೆ ನೀಡುವ ಪರಂಪರೆಯನ್ನು ಅನುಸರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT