ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ವಸತಿಯಲ್ಲಿ ಅವಧಿ ಮೀರಿದವರ ವಿರುದ್ಧ ಪ್ರಕರಣ

ಸರ್ಕಾರಿ ವಸತಿ ಗೃಹಗಳ ಪರಿಶೀಲನಾ ಸಮಿತಿ ಸಭೆ
Last Updated 2 ಸೆಪ್ಟೆಂಬರ್ 2020, 15:51 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಸರ್ಕಾರಿ ವಸತಿ ಗೃಹಗಳಲ್ಲಿ ಅತಿಕ್ರಮವಾಗಿ ಹಾಗೂ ಅವಧಿಮೀರಿ ವಾಸಿಸುವವರನ್ನು ಮೂರು ದಿನದೊಳಗೆ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಬೇಕು. ವಸತಿ ಖಾಲಿ ಮಾಡದಿದ್ದರೆ ಅತಿಕ್ರಮಣ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್‌ ಅವರು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಚನ್ನಬಸಪ್ಪ ಮೆಕಾಲೆ ಅವರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸರ್ಕಾರಿ ವಸತಿ ಗೃಹಗಳ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗೊತ್ತುಪಡಿಸಿದ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾತ್ರ ವಸತಿಗೃಹಗಳನ್ನು ಹಂಚಿಕೆ ಮಾಡಬೇಕು. ಅರ್ಹತೆ ಇಲ್ಲದಿರುವವರು ಅಕ್ರಮ ವಾಸಮಾಡುತ್ತಿದ್ದರೆ, ಕೂಡಲೇ ತೆರವುಗೊಳಿಸಬೇಕು. ಹುದ್ದೆಗಳ ಆಧಾರದ ಮೇಲೆ ಮಾತ್ರ ವಸತಿ ಗೃಹಗಳ ಹಂಚಿಕೆ ಆಗಬೇಕು ಎಂದು ಹೇಳಿದರು.

ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರಿ ವಸತಿ ಗೃಹಗಳ ಪರಿಶೀಲನಾ ಸಭೆಯನ್ನು ಕಡ್ಡಾಯವಾಗಿ ಆಯೋಜಿಸಬೇಕು. ಈಗಾಗಲೇ ಹಂಚಿಕೆ ಮಾಡಲಾದ ವಸತಿ ಗೃಹಗಳು ಯಾವ ಆಧಾರದ ಮೇಲೆ ಹಂಚಿಕೆಯಾಗಿವೆ ಎಂಬ ಆದೇಶದ ಪ್ರತಿಗಳನ್ನು ಸಂಬಂಧಿಸಿದವರಿಂದ ಪಡೆಯಬೇಕು ಎಂದು ತಿಳಿಸಿದರು.

ನಗರದಲ್ಲಿರುವ ವಸತಿ ಗೃಹಗಳಲ್ಲಿ ರಾಯಚೂರು ಸುತ್ತಮುತ್ತ ವ್ಯಾಪ್ತಿಯಲ್ಲಿ ಸರ್ಕಾರಿ ಉದ್ಯೋಗ ಮಾಡುವವರಿಗೆ ಮಾತ್ರ ಅವಕಾಶ ನೀಡಬೇಕು. ಒಂದು ವೇಳೆ ಖಾಲಿ ಇದ್ದಲ್ಲೀ ಅರ್ಹರಿಗೆ ಹಂಚಿಕೆ ಮಾಡಲು ಅದನ್ನು ಸಮಿತಿಗೆ ಮಾಹಿತಿ ನೀಡಿ ಒಪ್ಪಿಗೆ ಪಡೆಯಬೇಕು ಎಂದು ತಾಕೀತು ಮಾಡಿದರು.

ಅವಧಿ ಮೀರಿದರೂ ವಾಸವಿರುವವರು:ರಾಯಚೂರಿನ ಸರ್ಕಾರಿ ಪದವಿ ಪುರ್ವ ಕಾಲೇಜಿನ ಮುಖ್ಯ ಪ್ರಾಧ್ಯಾಪಕ ಕುಂಟೆಪ್ಪ 12 ವರ್ಷ 9ತಿಂಗಳಿನಿಂದ ವಾಸವಿದ್ದು, ವಸತಿ ಗೃಹವನ್ನು ತೆರವುಗೊಳಿಸಲು ನೋಟಿಸ್ ನೀಡಿದ್ದರೂ ಇನ್ನೂ ತೆರವುಗೊಳಿಸಿಲ್ಲ. ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕೆ ಅಧಿಕಾರಿ ಸುರೇಶಕುಮಾರ್ 7 ವರ್ಷ ಐದು ತಿಂಗಳು, ವೈದ್ಯಾಧಿಕಾರಿ ಡಾ. ಸುರೇಶ ಕುಮಾರ್ 9 ವರ್ಷ ಒಂದು ತಿಂಗಳು, ಲೋಕಾಯುಕ್ತ ಕಚೇರಿಯ ವಿಜಯಕುಮಾರ್ 8 ವರ್ಷ ಮೂರು ತಿಂಗಳಿನಿಂದ ವಾಸವಿದ್ದಾರೆ.

ತೆರವುಗೊಳಿಸದವರು:ಶಿಕ್ಷಣ ಇಲಾಖೆಯ ರಾಯಚೂರಿನ ಗಿಲ್ಲೆಸೂಗೂರು ಪ್ರಾಥಮಿಕ ಶಾಲೆಯ ಶಿಕ್ಷಕ ಜೆ.ಎಂ ಹುಂಡೇಕರ್ 12 ವರ್ಷದಿಂದ, ಶಿಕ್ಷಣ ಇಲಾಖೆಯ ಅಮರೇಶ 19ವರ್ಷ, ಆಶಾಪೂರ ಶಾಲೆಯ ಸಹ ಶಿಕ್ಷಕಿ ಜಿ.ಸಂಗೀತ ಲಕ್ಷ್ಮೀ, ಅಬಕಾರಿ ಇಲಾಖೆಯ ಬೆರಳಚ್ಚುಗಾರ ಸುರೇಂದ್ರ ಕುಮಾರ್ 11 ವರ್ಷ 11 ತಿಂಗಳಿನಿಂದ ವಾಸವಿದ್ದು, ಇನ್ನೂ ತೆರವುಗೊಳಿಸಿಲ್ಲ.

ಬಾಡಿಗೆ ನೀಡಿದವರು:ಪ್ರಮುಖವಾಗಿ ಅಂದ್ರೂನ್ ಕಿಲ್ಲಾದ ಸರ್ಕಾರಿ ಉರ್ದು ಶಾಲೆಯ ಸಹ ಶಿಕ್ಷಕಿ ರಜಿನಿ 7 ವರ್ಷ 8 ತಿಂಗಳು ಹಾಗೂ ನ್ಯಾಯಾಂಗ ಇಲಾಖೆಯ ನರಸಿಂಹಲು 9 ವರ್ಷ ಮೂರು ತಿಂಗಳಿನಿಂದ ಸರ್ಕಾರಿ ವಸತಿ ಗೃಹ ಪಡೆದು, ಇವರಿಬ್ಬರು ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ.
ಜಿಲ್ಲಾ ಖಜಾನೆಯ ಬಸವರಾಜ ಹೂಸಮನಿ 17 ವರ್ಷ, ಶಿಕ್ಷಣ ಇಲಾಖೆಯ ಎಂ.ಎನ್.ಈರಣ್ಣ, 12 ವರ್ಷ 11 ತಿಂಗಳು, ಕಲಾತಲಾಬ್ ಪ್ರಾಥಮಿಕ ಶಾಲೆಯ ಶಿಕ್ಷಕಿ ವಿಜಯಲಕ್ಷ್ಮೀ 17 ವರ್ಷ 7 ತಿಂಗಳು ಕಳೆದಿದ್ದು, ಅವಧಿ ಮೀರಿದರೂ ಇನ್ನೂ ಕಟ್ಟಡದಲ್ಲಿಯೇ ನೆಲೆಸಿದ್ದಾರೆ, ಸರ್ಕಾರಿ ವಸತಿ ಗೃಹವನ್ನು ತೆರವುಗೊಳಿಸಲು ಅವರೆಲ್ಲರಿಗೂ ನೋಟಿಸ್ ನೀಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಚನ್ನಬಸವ ಮೆಕಾಲೆ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ದುರಗೇಶ, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT