ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಅಭಿವೃದ್ಧಿಯೆ ಸರ್ಕಾರದ ಧ್ಯೇಯ: ಲಕ್ಷ್ಮಣ ಸವದಿ

Last Updated 17 ಸೆಪ್ಟೆಂಬರ್ 2020, 11:21 IST
ಅಕ್ಷರ ಗಾತ್ರ

ರಾಯಚೂರು: ಈ ಭಾಗದ ಸಮಗ್ರ ಕಲ್ಯಾಣವೇ ಸರ್ಕಾರದ ಧ್ಯೇಯವಾಗಿದೆ. ಪ್ರಾದೇಶಿಕ ಅಸಮತೋಲನದ ನಿವಾರಣೆಯೇ ಮುಂದಿನ ಗುರಿಯಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನದಂದು ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

‘ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಎಂದು ನಾಮಕರಣ ಮಾಡಿದ ಐತಿಹಾಸಿಕ ಶ್ರೇಯಸ್ಸು ನಮ್ಮ ಸರ್ಕಾರದ್ದಾಗಿದೆ. ಬಹುವರ್ಷಗಳಿಂದ ಬಾಕಿಯಿದ್ದ ಬೇಡಿಕೆಗೆ ಸ್ಪಂದಿಸಿ ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಎಂದು ನಾಮಕರಣ ಮಾಡಿದ ಅಭೂತಪೂರ್ವ ನಿರ್ಧಾರ ಕೈಗೊಂಡಿದ್ದಕ್ಕೆ ವಿಶೇಷವಾಗಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತೇನೆ’ ಎಂದರು.

ಕೇಂದ್ರ ಗೃಹ ಸಚಿವರಾಗಿದ್ದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ ದಿಟ್ಟ ನಿರ್ಧಾರದಿಂದಾಗಿ 1948 ಸೆಪ್ಟೆಂಬರ್ 13 ರಂದು ನಿಜಾಮ್‌ ಆಡಳಿತದ ವಿರುದ್ಧ ಪೊಲೀಸ್‌ ಕಾರ್ಯಾಚರಣೆ ಕೈಗೊಳ್ಳಲಾಯಿತು. ಭಾರತದ ಸೇನೆ ಹೈದರಾಬಾದ್ ಪ್ರಾಂತ್ಯವನ್ನು ಮುತ್ತಿಗೆ ಹಾಕಿತು. ಕೇವಲ ನಾಲ್ಕು ದಿನಗಳಲ್ಲಿ ಸೈನ್ಯವು ಹೈದರಾಬಾದ್‌ಗೆ ಬಂದಾಗ ನಿಜಾಮರು ಶರಣಾದರು. ಅಂದು ಸೆಪ್ಟೆಂಬರ್ 17 ಆಗಿತ್ತು. ಮರುದಿನ ಸೆಪ್ಟೆಂಬರ್ 18ರಂದು ಹೈದರಾಬಾದ್ ಪ್ರಾಂತ್ಯವು ಭಾರತದಲ್ಲಿ ವಿಧಿವತ್ತಾಗಿ ವಿಲೀನವಾಯಿತು ಎಂದು ಇತಿಹಾಸ ಸ್ಮರಿಸಿದರು.

ಜಿಲ್ಲೆಯವರೇ ಆದ ಎಂ. ನಾಗಪ್ಪ, ಡಾ. ಬಿ.ಜಿ. ದೇಶಪಾಂಡೆ, ಜನಾರ್ದನರಾವ್ ‌ದೇಸಾಯಿ, ಗುಡಿಹಾಳ ಹನುಮಂತರಾವ್, ರಾಮಾಚರ‍್ಯ ಜೋಶಿ, ಎಲ್.ಕೆ.ಸರಾಫ್, ಗಾಣದಾಳನಾರಾಯಣಪ್ಪ, ಕಸಬೆ ಪಾಂಡುರಂಗರಾವ್, ಜಿ. ಮಧ್ವರಾಯರು ಸೇರಿದಂತೆ ಹಲವು ಹೋರಾಟಗಾರರ ತ್ಯಾಗ, ಬಲಿದಾನಗಳಿಂದಾಗಿ ಹೈದರಾಬಾದ್‌-ಕರ್ನಾಟಕ ವಿಮೋಚನಾ ಹೋರಾಟ ಈ ನಾಡಿನ ಭವ್ಯ ಇತಿಹಾಸವಾಗಿ ಉಳಿದಿದೆ ಎಂದರು.

ಹೆಮ್ಮೆಯಿಂದ ಕರೆಯುವ ಕಲ್ಯಾಣ ಕರ್ನಾಟಕ ಪ್ರದೇಶದ ಜನತೆಯ ದೇಶಪ್ರೇಮ ಮತ್ತು ಕೆಚ್ಚೆದೆಯನ್ನು ಬಿಂಬಿಸುವ ಸ್ವಾತಂತ್ರ್ಯ ಹೋರಾಟದ ರೋಚಕ ಇತಿಹಾಸ ಹಾಗೂ ಅದರ ಮಹತ್ವವನ್ನು ಎಲ್ಲರೂ ಅರಿತು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ, ಗೌರವಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಜಿಲ್ಲೆಗೆ ಇದುವರೆಗೆ ಒಟ್ಟು ₹1,039 ಕೋಟಿ ಅನುದಾನ ದೊರೆತಿದ್ದು, ಅದರಲ್ಲಿ 2,910 ಕಾಮಗಾರಿಗಳು ಮಂಜೂರಾಗಿವೆ. ಈ ಪೈಕಿ 2,290 ಕಾಮಗಾರಿಗಳು ಪೂರ್ಣಗೊಂಡಿವೆ. 447 ಕಾಮಗಾರಿಗಳು ಪ್ರಗತಿಯಲ್ಲಿವೆ. ಒಟ್ಟು ₹673 ಕೋಟಿ ಅನುದಾನ ಭರಿಸಲಾಗಿದೆ ಎಂದು ಹೇಳಿದರು.

ವಿವಿಧ ಮಾನದಂಡಗಳ ಆಧಾರದಲ್ಲಿ ಹಿಂದುಳಿದ ಜಿಲ್ಲೆಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಗೆ ರಾಯಚೂರು ಜಿಲ್ಲೆ ಆಯ್ಕೆಯಾಗಿರುವುದು ಸಂತೋಷದ ಸಂಗತಿಯಾಗಿದೆ ಎಂದು ತಿಳಿಸಿದರು.

ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ನಿವಾರಣೆಗೆ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ನೆರವಾಗಿದ್ದು, ಜಿಲ್ಲೆಯ ಹಲವು ಜಲಮೂಲಗಳು ಇದರಿಂದ ಮರುಜೀವ ಪಡೆದಿವೆ ಎಂದರು.

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದಾಗಿ ಈವರೆಗೆ 16 ಜನ ಮೃತಪಟ್ಟಿದ್ದು, ಮೃತಪಟ್ಟ ವಾರುಸುದಾರರಿಗೆ ತಲಾ ₹5 ಲಕ್ಷ ಗಳಂತೆ ಒಟ್ಟು ₹80 ಲಕ್ಷ ಪರಿಹಾರ ನೀಡಲಾಗಿದೆ. ಕಳೆದ ಏಪ್ರೀಲ್-ಮೇ ತಿಂಗಳಿನಲ್ಲಿ ಅಕಾಲಿಕ ಮಳೆಯಿಂದ ಹಾನಿಯಾದ 18,336 ರೈತರಿಗೆ ₹11.62 ಕೋಟಿ ಪರಿಹಾರ ನೀಡಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT