ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಥಮಿಕ ಶಾಲಾ ಶಿಕ್ಷಕರಿಂದ ಪ್ರತಿಭಟನೆ

ಬಂದ್‌ ಆಚರಿಸಿದ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳು
Last Updated 9 ಜುಲೈ 2019, 12:58 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರು ತರಗತಿಗಳನ್ನು ಬಹಿಷ್ಕರಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಶಿಕ್ಷಕರು ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ನಗರಸಭೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು.

ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಧರಣಿ ನಡೆಸಿದ ಶಿಕ್ಷಕರು, ಶಿಕ್ಷಣ ಇಲಾಖೆಯ ನಿರ್ದೇಶಕರು ಮೇ 13 ರಂದ ಹೊರಡಿಸಿದ ಆದೇಶವನ್ನು ಕೈಬಿಡಬೇಕು. 2014 ರ ಪೂರ್ವ ನೇಮಕವಾಗಿರುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಬೇಕು. 1 ರಿಂದ 5 ನೇ ತರಗತಿವರೆಗೂ ಮಾತ್ರ ಬೋಧಿಸಲು ಅವಕಾಶ ನೀಡಬೇಕು ಎನ್ನುವ ನಿಯಮ ತೆಗೆದುಹಾಕಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಅಗ್ರಹಿಸಿದರು.

ಶಿಕ್ಷಕರಿಗೆಲ್ಲ ವೇತನ ಶ್ರೇಣಿಯನ್ನು ನಿಗದಿಗೊಳಿಸಬೇಕು. ಪಿಂಚಣಿ ಯೋಜನೆಯನ್ನು ಮುಂದುವರಿಸಬೇಕು. ಮುರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಪುನಾ ಆರಂಭಿಸಬೇಕು. ರಾಜ್ಯದಾದ್ಯಂತ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

6ನೇ ವೇತನ ಆಯೋಗದ ಅಂತಿಮ ಶಿಫಾರಸಿನ ಪ್ರಕಾರ ಬಡ್ತಿ ಯೋಜನೆಯನ್ನು ಜಾರಿಗೊಳಿಸಬೇಕು. ಗ್ರಾಮೀಣ ಕೃಪಾಂಕ ಹಾಗೂ ಶಿಕ್ಷಕರ ವಜಾ ಸೇವೆಯನ್ನು ನಿರಂತರ ಸೇವೆ ಎಂದು ಪರಿಗಣಿಸಬೇಕು. ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕೂಡಾ ಉಪ ನಿರ್ದೇಶಕರ ಹುದ್ದೆಗೆ ಬಡ್ತಿ ನೀಡಬೇಕು ಎಂದರು.

ಶಿಕ್ಷಕರು ಎದುರಿಸುತ್ತಿರುವ ಬೇಡಿಕೆಗಳಿಗೆ ಸರ್ಕಾರವು ಸೂಕ್ತ ರೀತಿ ಸ್ಪಂದಿಸಬೇಕು. ಇಲ್ಲದಿದ್ದರೆ ಸೆಪ್ಟೆಂಬರ್‌ 5 ರಂದು ಶಿಕ್ಷಕರ ದಿನಾಚರಣೆಯನ್ನು ಬಹಿಷ್ಕರಿಸಲಾಗುವುದು. ವಿಧಾನಸೌಧ ಚಲೋ ಮಾಡಲಾಗುವುದು ಎಂದು ತಿಳಿಸಿದರು.

ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಪ್ಪ, ವಿನೋದಕುಮಾರ್‌, ಮುದ್ದಣಗೌಡ, ಅಶೋಕ ಗಾಜಿ, ಪ್ರಕಾಶ್‌, ರಂಗಯ್ಯ, ಬಸನಗೌಡ ಪಾಟೀಲ, ಹಂಪಣ್ಣ ಚಂಡೂರು, ತಿಮ್ಮಣ್ಣ ಬಲ್ಲಟಗಿ, ಭಾರತಿ, ಸುಧಾ, ಸೋನಮ್ಮ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT