ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆ: ದೇವಸೂಗೂರಿಗಿಲ್ಲ ಪಟ್ಟಣ ಪಂಚಾಯಿತಿ ಭಾಗ್ಯ

ಮೀಸಲಾತಿ ಪಟ್ಟಿ ಪ‍್ರಕಟ
Last Updated 23 ಸೆಪ್ಟೆಂಬರ್ 2020, 3:39 IST
ಅಕ್ಷರ ಗಾತ್ರ

ಶಕ್ತಿನಗರ: ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ದೇವಸೂಗೂರು ಗ್ರಾಮ ಪಂಚಾಯಿತಿಯಾಗಿಯೇ ಉಳಿದುಕೊಂಡಿದೆ. ಆದರೆ, ಈಚೆಗೆ ಜಿಲ್ಲಾಡಳಿತ, ದೇವಸೂಗೂರು ಗ್ರಾಮ ಪಂಚಾಯಿತಿಯ ವಿವಿಧ ವಾರ್ಡ್‌ಗಳಿಗೆ ಮೀಸಲಾತಿ ಘೋಷಣೆ ಮಾಡಿದ್ದಾರೆ. ಈ ಬಾರಿ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರುತ್ತದೆ ಎಂದು ಇಲ್ಲಿನ ಜನರ ಕನಸು ಕನಸಾಗಿಯೇ ಉಳಿದಿದೆ.

58 ಸದಸ್ಯರು ಇರುವ ದೇವಸೂಗೂರು ಗ್ರಾಮ ಪಂಚಾಯಿತಿ ರಾಯಚೂರು ಜಿಲ್ಲೆಯಲ್ಲಿಯೇ ಅತಿ ದೊಡ್ಡದು. ಪಟ್ಟಣ ಪಂಚಾಯಿತಿ ಘೋಷಿಸಬೇಕು ಎಂದು ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಇಲ್ಲಿನ ಜನ ಹೋರಾಟ ನಡೆಸಿದ್ದರು. ಆದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಸೇರಿ ಹಲವು ಕಾರಣಗಳಿಂದ ಪಟ್ಟಣ ಪಂಚಾಯಿತಿ ಸ್ಥಾನ ಕೈ ತಪ್ಪಿರಬಹುದು.

ದೇವಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2011ನೇ ಸಾಲಿನ ಜನಗಣತಿಯ ಪ್ರಕಾರ 23 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಪಂಚಾಯಿತಿಯ ಒಟ್ಟು ವಿಸ್ತೀರ್ಣ 19.61 ಚದರ ಕಿಲೋ ಮೀಟರ್ ಇದೆ. ಆಸ್ತಿಗಳು 8,500 ಇದ್ದು, ಪ್ರತಿ ವರ್ಷಕ್ಕೆ ₹30 ಲಕ್ಷ ಕರವಸೂಲಿಯಾಗುತ್ತಿದ್ದು ಗ್ರಾಮ ಪಂಚಾಯಿತಿಯು ಪಟ್ಟಣ ಅಥವಾ ಪುರಸಭೆಯನ್ನಾಗಿ ಮೇಲ್ದರ್ಜೆಗೆರಿಸುವಂತೆ ತಾಲ್ಲೂಕು ಮುಖ್ಯ ಕಾರ್ಯನಿರ್ವಹಕಾ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ದೇವಸೂಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ ಅವರು ಹೇಳಿದರು.

ಪಟ್ಟಣ ಪಂಚಾಯಿತಿಯಾಗಿ ದೇವಸೂಗೂರು ಬದಲಾದರೆ, ವಾರ್ಷಿಕ ₹ 5 ಕೋಟಿಯಷ್ಟು ಅನುದಾನ ಸಿಗಲಿದೆ. ಜೊತೆಗೆ ಪಟ್ಟಣ ವ್ಯಾಪ್ತಿಯಲ್ಲಿ ಪರಿಷ್ಕೃತ ಕರಗಳ ವಸೂಲಾತಿಯಿಂದ ಲಕ್ಷಗಟ್ಟಲೆ ಆದಾಯ ಸಿಗಲಿದೆ. ಸ್ಥಳೀಯ ಕಾಮಗಾರಿಗಳಿಗೆ ಮತ್ತು ಅಭಿವೃದ್ಧಿ ಹಣದ ಕೊರತೆ ಕಾಡುವುದಿಲ್ಲ ಎಂದು ದೇವಸೂಗೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುಭಾಷ ಅಭಿಪ್ರಾಯ ಪಡುತ್ತಾರೆ.

ದೇವಸೂಗೂರು ಗ್ರಾಮ ಪಂಚಾಯಿತಿಯು ಪಟ್ಟಣ ಹಾಗೂ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಎಲ್ಲ ಅರ್ಹತೆ ಹೊಂದಿದ್ದು , ಹತ್ತು ವರ್ಷ ಗತಿಸಿದರೂ ಸರ್ಕಾರದ ನಿರ್ಲಕ್ಷ್ಯದಿಂದ ಇಂದಿಗೂ ಗ್ರಾಮ ಪಂಚಾಯಿತಿಯಾಗಿಯೇ ಉಳಿದಿದೆ. ಪ್ರಸ್ತುತ ಸಾರ್ವತ್ರಿಕ ಗ್ರಾ.ಪಂ.ಚುನಾವಣೆ ನಡೆಸಲು ಮೀಸಲಾತಿ ಪ್ರಕಟಿಸಿದ್ದು , ಜಿಲ್ಲಾಡಳಿತ ಸದರಿ ಆದೇಶವನ್ನು ಹಿಂಪಡೆದು, ದೇವಸೂಗೂರು ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಅವರ ನಿಯೋಗ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.

ಈ ಸಲವೂ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಬೇಕಾದ ಅನಿವಾರ್ಯತೆ ಇದೆ. ಇನ್ನೊಂದು ತಿಂಗಳು ಕಳೆದರೆ, ಗ್ರಾ.ಪಂ.ಚುನಾವಣೆಯ ದಿನಾಂಕವೂ ಘೋಷಣೆ ಯಾಗುವ ಸಾಧ್ಯತೆ ಇದೆ. ಅಷ್ಟೊರೊಳಗೆ ದೇವಸೂಗೂರು ವನ್ನು ಪಟ್ಟಣ ಪಂಚಾಯಿತಿಯಾಗಿ ಘೋಷಣೆ ಮಾಡಿದರೆ, ಆಡಳಿತಾತ್ಮಕವಾಗಿ ಅನುಕೂಲ ಆಗುತ್ತದೆ ಎಂಬ ಅಭಿಪ್ರಾಯ ಬಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT