ಶುಕ್ರವಾರ, ಜುಲೈ 30, 2021
20 °C

ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಗ್ರಾಮ ಪಂಚಾಯಿತಿ ಕರವಸೂಲಿಗಾರ, ಗುಮಾಸ್ತ ಹುದ್ದೆಯಿಂದ ಗ್ರೇಡ್ 2 ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆ ಆಯ್ಕೆ ಮೂಲಕ ನೇರ ನೇಮಕಾತಿ ಆದೇಶವನ್ನು ಹಿಂಪಡೆದ ಸರ್ಕಾರದ ಕ್ರಮ ಖಂಡಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು ಸಂಯೋಜಿತ) ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಆನಂತರ ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮೂಲಕ‌ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು. ನೇರ ನೇಮಕಾತಿಗೆ ಆರ್ಥಿಕ ಇಲಾಖೆ ಸಹಮತ ನೀಡಿದೆ. ಅದರನ್ವಯ ಜುಲೈ 2ರಂದು ನೇಮಕಾತಿ ಆದೇಶ ನೀಡಿದ್ದ ಸರ್ಕಾರ, ಜುಲೈ 3ರಂದು ಆದೇಶ ಹಿಂಪಡೆದಿರುವುದು ಖಂಡನೀಯ ಎಂದರು.

ಸರ್ಕಾರದ ಕ್ರಮದಿಂದ ಮೂರು ದಶಕದಿಂದ ಕೆಲಸ ಮಾಡಿ ನಿವೃತ್ತಿ ಅಂಚಿನಲ್ಲಿರುವವರಿಗೆ ಅನ್ಯಾಯವಾಗಲಿದೆ. ಸರ್ಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಸಿಬ್ಬಂದಿಗೆ 10ರಿಂದ 15 ತಿಂಗಳು ವೇತನವಿಲ್ಲದೇ ಸಂಕಷ್ಟ ಸ್ಥಿತಿ ಎದುರಾದಾಗ 15ನೇ ಹಣಕಾಸಿನಲ್ಲಿ ಸಿಬ್ಬಂದಿಗೆ ವೇತನ ಪಾವತಿಸುವಂತೆ ಕಳೆದ ನವೆಂಬರ್ 25ರಂದು ಸರ್ಕಾರ ಆದೇಶ ಮಾಡಿದಾಗ ಸಂತಸದ ವಿಷಯವಾಗಿತ್ತು. ಆದರೆ, ಪಿಡಿಒಗಳು ವೇತನ ಪಾವತಿಸದಿರುವ ಬಗ್ಗೆ ತಾಲ್ಲೂಕು ಪಂಚಾಯಿತಿ ಇಒ, ಜಿಲ್ಲಾ ಪಂಚಾಯಿತಿ ಸಿಇಒಗೆ ದೂರು ನೀಡಿದರೂ  ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಶಾಸನಬದ್ಧ ಅನುದಾನದಲ್ಲಿ ಸಿಬ್ಬಂದಿ ವೇತನ ಜಮಾ ಮಾಡಬೇಕು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ 25ರಿಂದ 30 ವರ್ಷಗಳಿಂದ ಸೇವೆ ಮಾಡಿದ್ದರೂ ಯಾವುದೇ ಸೇವಾ ನಿಯಮಾವಳಿ ಇಲ್ಲ. ಅನಾರೋಗ್ಯಕ್ಕೆ ತುತ್ತಾದರೆ, ಅಕಾಲಿಕ ಮರಣ ಹೊಂದಿದರೆ ಯಾವುದೇ ಸೌಲಭ್ಯ ಸಿಗುವುದಿಲ್ಲ. ಆದೇಶ ಇದ್ದರೂ ಪಿಡಿಒಗಳು ಜಾರಿ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವಾಗ ಗ್ರಾಮ ಪಂಚಾಯಿತಿ ಸಿಬ್ಬಂದಿ ಒಳಪಡಿಸಬೇಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ 2017 ಅಕ್ಟೋಬರ್ 31ರವರೆಗೆ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಯನ್ನು ಇಎಫ್‍ಎಂಎಸ್‍ಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಅಶೋಕ ಧಣಿ, ಪ್ರಧಾನ ಕಾರ್ಯದರ್ಶಿ ಮೌನೇಶ, ಸಿಐಟಿಯು ಸಂಘಟನೆ ಮುಖಂಡ ಶರಣಬಸವ, ಮಲ್ಲಿಕಾರ್ಜುನ, ಕೆ.ಜಿ.ವೀರೇಶ, ವೀರೇಶಸ್ವಾಮಿ, ಹನುಮಂತಪ್ಪ ಬನ್ನಿಗೋಳ, ಯಮನೂರಪ್ಪ, ಷಣ್ಮುಖಪ್ಪ, ನಿತ್ಯಾನಂದ, ಶಿವರಾಜ ಸ್ವಾಮಿ, ರಮೇಶ ಪಾಟೀಲ, ವೆಂಕೋಬ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು