ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ‘ಅಧಿಕಾರಿಗಳ ವರ್ತನೆ ಖಂಡನೀಯ’

ಗ್ರಾ.ಪಂ ಸದಸ್ಯರ ಒಕ್ಕೂಟದಿಂದ ಮಿನಿವಿಧಾನಸೌಧ ಮುಂದೆ ಧರಣಿ
Last Updated 30 ಜೂನ್ 2022, 14:00 IST
ಅಕ್ಷರ ಗಾತ್ರ

ಸಿಂಧನೂರು: ತಾಲ್ಲೂಕು ವ್ಯಾಪ್ತಿಯ 30 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಇಒ ಸೇರಿದಂತೆ ಎಲ್ಲಾ ನೌಕರರು ಬೇಜವಾಬ್ದಾರಿಯಾಗಿ ವರ್ತನೆ ಮಾಡುತ್ತಾರೆ ಎಂದು ಆರೋಪಿಸಿ, ತಾಲ್ಲೂಕು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಗುರುವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿತು.

‘ಜನರಿಂದ ಮತ ಪಡೆದು ಆಯ್ಕೆಗೊಂಡ ತಾಲ್ಲೂಕು ವ್ಯಾಪ್ತಿಯ 626 ಜನ ಗ್ರಾ.ಪಂ ಸದಸ್ಯರಿಗೆ ಸರ್ಕಾರದ ಯೋಜನೆ ಮತ್ತು ಸೌಲಭ್ಯಗಳ ಕುರಿತು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಗ್ರಾ.ಪಂಗೆ ಗೈರು ಹಾಜರಾಗುತ್ತಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಅನೇಕ ಬಾರಿ ತಾ.ಪಂ ಇಒ ಅವರ ಗಮನಕ್ಕೆ ತಂದಾಗ್ಯೂ ಕ್ರಮ ಕೈಗೊಂಡಿಲ್ಲ. ಬದಲಿಗೆ ಪಿಡಿಒಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಸದಸ್ಯರ ಪರಿಸ್ಥಿತಿಯೇ ಹೀಗಾದರೆ ಇನ್ನೂ ಜನಸಾಮಾನ್ಯರ ಅಳಲು ಯಾರು ಕೇಳಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಮಹಾಂತೇಶ ಹಿರೇಗೌಡರ್ ಪ್ರಶ್ನಿಸುತ್ತಾರೆ.

ನರೇಗಾ ಕಾಮಗಾರಿಗಳ ಕ್ರಿಯಾ ಯೋಜನೆಗಳನ್ನು ಸರ್ಕಾರದ ಲೇಬರ್ ಬಜೆಟ್ ಪ್ರಕಾರ ಕಾಲಕಾಲಕ್ಕೆ ಅನುಮೋದನೆ ಕೊಡಬೇಕು. 15ನೇ ಹಣಕಾಸಿನಲ್ಲಿ ಬಳಕೆಯಾದ ಹಣವನ್ನು ಇ ಗ್ರಾಮ್ ಸ್ವರಾಜ್‍ನ ತಂತ್ರಾಂಶದಲ್ಲಿ ಪೇಮೆಂಟ್ ಒಚರ್‌ಗಗಳಲ್ಲಿ ಪ್ರಶ್ನೆ ಚಿಹ್ನೆ ಹಾಕುತ್ತಿದ್ದು, ಇದರ ಸ್ಪಷ್ಟ ಮಾಹಿತಿಯನ್ನು ಕನ್ನಡ ಮತ್ತು ಇಂಗ್ಲೀಷ್‍ನಲ್ಲಿ ನಮೂದಿಸಬೇಕು. 15ನೇ ಹಣಕಾಸಿನಲ್ಲಿ ಜೆಜೆಎಂಗೆ ಶೇ 15, ಎಸ್‍ಎಂಎಲ್‍ಡಬ್ಲ್ಯೂಗೆ ಶೇ 25 ರಷ್ಟು ಹಣ ವಂತಿಕೆ ರೂಪದಲ್ಲಿ ತೆಗೆದಿಡಬಾರದು ಎಂದು ಒತ್ತಾಯಿಸಿದರು.

ಧರಣಿ ಸ್ಥಳಕ್ಕೆ ಬಂದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಪವನಕುಮಾರ ಮನವಿ ಪತ್ರ ಸ್ವೀಕರಿಸಿ, ‘ಬೆಳಿಗ್ಗೆ 10.30 ರಿಂದ ಸಂಜೆ 5 ಗಂಟೆಯವರೆಗೆ ಪಿಡಿಒಗಳು ಪಂಚಾಯಿತಿಯಲ್ಲಿ ಇರಬೇಕು. ಬೇರೆಡೆ ತೆರಳಿದರೆ ಅಧ್ಯಕ್ಷರಿಗೆ ಮಾಹಿತಿ ನೀಡಬೇಕು. ಅಧ್ಯಕ್ಷರಿಗೆ ಮಾಹಿತಿ ಇಲ್ಲದೆ ಕ್ರಿಯಾ ಯೋಜನೆ ತಯಾರಿಸುವಂತಿಲ್ಲ. ಅಧ್ಯಕ್ಷರ ಸಮಕ್ಷಮದಲ್ಲಿ ಡೊಂಗಲ್ ಬಳಕೆ ಮಾಡುವಂತೆ ಪಿಡಿಒಗಳಿಗೆ ನಿರ್ದೇಶನ ನೀಡುವುದಾಗಿ’ ಭರವಸೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಮಾಜಿ ಸದಸ್ಯರಾದ ಬಸವರಾಜ ಹಿರೇಗೌಡರ್, ಎನ್.ಶಿವನಗೌಡ ಗೊರೇಬಾಳ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್.ಕಂಬಳಿ, ಸಮುದಾಯ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರಗೌಡ ಧರಣಿಗೆ ಬೆಂಬಲಿಸಿ ಭಾಗವಹಿಸಿದ್ದರು.

ಒಕ್ಕೂಟದ ರಾಜ್ಯ ಘಟಕದ ಉಪಾಧ್ಯಕ್ಷ ಪಂಪಯ್ಯ ಬಾಗೋಡಿ, ಗೌರವಾಧ್ಯಕ್ಷ ದುರುಗಪ್ಪ ದಢೇಸುಗೂರು, ಪ್ರಧಾನ ಕಾರ್ಯದರ್ಶಿ ರವಿಗೌಡ ಮಲ್ಲದಗುಡ್ಡ, ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT