ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಹಳೆಯ ಕಟ್ಟಡದಲ್ಲೇ ಗ್ರಾ.ಪಂ‌ ಆಡಳಿತ!

ಮಳೆ ಬಂದರೆ ಸೋರುವ ಸ್ಥಿತಿ: ಸಭೆ ಮಾಡಲು ಇಲ್ಲ ಜಾಗ
Last Updated 29 ಜನವರಿ 2023, 22:28 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಬಹಳಷ್ಟು ಗ್ರಾಮ ಪಂಚಾಯಿತಿ ಕಚೇರಿಗಳು ಹಳೇ ಕಟ್ಟಡಗಳಲ್ಲಿದ್ದು, ಸದಸ್ಯರು ಹಾಗೂ ಅಧಿಕಾರಿಗಳೆಲ್ಲ ಒಟ್ಟಿಗೆ ಕುಳಿತು ಸಭೆ ನಡೆಸಲು ಜಾಗ ಸಾಕಾಗುತ್ತಿಲ್ಲ ಎನ್ನುವ ಕೊರಗು ಜಿಲ್ಲೆಯಾದ್ಯಂತ ಮನೆ ಮಾಡಿದೆ.

ಸಭೆಗಳಲ್ಲಿ ನಡೆಯುವ ಚರ್ಚೆ ಆಲಿಸಲು ಅಥವಾ ಮಾಹಿತಿ ನೀಡುವುದಕ್ಕೆ ಬರುವ ಆಹ್ವಾನಿತರಿಗೆ, ಆಕಾಂಕ್ಷಿಗಳಿಗೆ, ಸರ್ಕಾರಿ ಇಲಾಖೆಗಳ ಇತರೆ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರು ಒಳಗೆ ಕಾಲಿಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಹಿರಿಯರಿಗೆ ಹಾಗೂ ಮಹಿಳೆಯರಿಗೆ ಜಾಗಬಿಟ್ಟು ಕಿರಿಯರು ನಿಂತುಕೊಂಡೇ ಸಭೆಯ ಚರ್ಚೆಗಳಲ್ಲಿ‌‌‌ ಭಾಗವಹಿಸುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಗ್ರಾಮಸಭೆಯನ್ನು ಕಚೇರಿಯ ಆವರಣದಲ್ಲಿಯೆ ನಡೆಸಿಕೊಂಡು ಬರಲಾಗುತ್ತಿದೆ. ಇದೇ ಕಾರಣದಿಂದ ಮಳೆಗಾಲಪೂರ್ತಿ ಕೆಲವು ಕಡೆ ಗ್ರಾಮಸಭೆಗಳೇ ನಡೆಯುವುದಿಲ್ಲ.

ಗ್ರಾಮ ಪಂಚಾಯಿತಿ ಕಚೇರಿಯ ಕೋಣೆಗಳು ಮೊದಲಿದ್ದಷ್ಟೇ ಇವೆ. ಅದರಲ್ಲಿ ಕಾರ್ಯನಿರ್ವಹಿಸುವವರ ಸಂಖ್ಯೆ ಹೆಚ್ಚಳವಾಗುತ್ತಾ ಬಂದಿದೆ. ಕಂಪ್ಯೂಟರ್ ಆಪರೇಟರ್, ಪಿಡಿಓ ಹೊಸ ಹುದ್ದೆಗಳು ಸೇರ್ಪಡೆಯಾಗಿವೆ. ಗ್ರಾಮಗಳ ಜನಸಂಖ್ಯೆ ಹೆಚ್ಚಳವಾದಂತೆ ಡಿ ಗ್ರೂಪ್ ಸಿಬ್ಬಂದಿ ಸಂಖ್ಯೆಯೂ ಅಧಿಕವಾಗಿದೆ.‌ ವಿವಿಧ ಅರ್ಜಿಗಳನ್ನು ಹಿಡಿದುಕೊಂಡು‌ ಬರುವ ಸಾಮಾನ್ಯ ಜನರು ಹೊರಗಡೆಯೆ ಕಾದು ನಿಲ್ಲಬೇಕಾಗಿದೆ. ಹೆಚ್ಚುವರಿ ಖುರ್ಚಿಗಳನ್ನು ಖರೀದಿಸಿಕೊಳ್ಳುವ ಅವಕಾಶವೂ ಇಲ್ಲದಾಗಿದೆ ಎಂದು ಕೆಲವು ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಇವೆಲ್ಲ‌ ಸಮಸ್ಯೆಗಳಿಗೆ ಪರಿಹಾರ ಜಿಲ್ಲಾ ಪಂಚಾಯಿತಿಯಲ್ಲಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಹೇಳುತ್ತಿದ್ದಾರೆ.

ಜಾಗ ಲಭ್ಯವಿದ್ದ ಕಡೆಗಳಲ್ಲಿ ನೂತನ ಗ್ರಾ.ಪಂ‌ ಕಚೇರಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಈಗಾಗಲೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನ ನೀಡಿದೆ. ಆದರೆ, ಜಾಗದ ಕೊರತೆ ಸಮಸ್ಯೆ ಎದುರಿಸುತ್ತಿರುವ ಹಾಗೂ ಹಳೇ ಕಟ್ಟಡದಲ್ಲೇ ಉಳಿಯುವ ಅನಿವಾರ್ಯತೆ ಸಾಕಷ್ಟು ಗ್ರಾಮ ಪಂಚಾಯಿತಿಗಳಿಗೆ ಇದೆ.

ರಾಯಚೂರು ತಾಲ್ಲೂಕಿನ ಪುರತಿಪ್ಲಿ, ಕಲ್ಮಲಾ ಗ್ರಾಮ ಪಂಚಾಯಿತಿ ಗಳು ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಕಚೇರಿ ಶಿಥಿಲ, ಕೊನೆಯಿಲ್ಲದ ಸಮಸ್ಯೆಗಳು!

ಸಿರವಾರ: ಸಿರವಾರ-ರಾಯಚೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ತಾಲ್ಲೂಕಿನ ಅತ್ತನೂರು ಗ್ರಾಮ ಪಂಚಾಯಿತಿ ಕಚೇರಿ ಶಿಥಿಲಾವಸ್ಥೆಯಲ್ಲಿದ್ದು, ಅಧಿಕಾರಿಗಳು, ಸಿಬ್ಬಂದಿ ಜೀವ ಭಯದಲ್ಲಿ ಕೆಲಸ ಮಾಡುವಂತಾಗಿದೆ. ಕಚೇರಿಯನ್ನು 20 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಇದೀಗ ಸಂಪೂರ್ಣವಾಗಿ ಶಿಥಿಲ ಗೊಂಡಿದೆ. ಮಳೆ ಬಂದರೆ ಸಾಕು ಮೇಲ್ಚಾವಣಿ ಸೋರುತ್ತದೆ. ಇದರಿಂದ ಮಳೆಗಾಲದಲ್ಲಿ ಸೋರಿದರೆ, ಇನ್ನುಳಿದ ದಿನಗಳಲ್ಲಿ ಮೇಲ್ಛಾಣಿಯ ಸಿಮೆಂಟ್ ಕಲ್ಲುಗಳು ಕೆಳಗೆ ಬೀಳುವುದು ಸಾಮಾನ್ಯವಾಗಿದೆ.

ಕಚೇರಿಯಲ್ಲಿ ಸಿಬ್ಬಂದಿಗೆ ಕೊಠಡಿ ಗಳ ಸಮಸ್ಯೆ ಹೆಚ್ಚಿದ್ದು, ಸಭೆ, ಜಯಂತಿ ಆಚರಣೆ ವೇಳೆ ಕೊಠಡಿಗಳ ಇಲ್ಲದೆ ಇರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ

ಮರೀಚಿಕೆಯಾದ ಸೌಲಭ್ಯಗಳು

ಲಿಂಗಸುಗೂರು: ಗ್ರಾಮ ಸ್ವರಾಜ್ಯ ಪರಿಕಲ್ಪನೆಯಡಿ ಅಧಿಕಾರ ವಿಕೇಂದ್ರೀಕರಣ ಮೂಲಕ ಸ್ಥಾಪಿತಗೊಂಡ ಗ್ರಾಮ ಪಂಚಾಯಿತಿಗಳಿಗೆ ಸುಸಜ್ಜಿತ ಕಟ್ಟಡ, ಅಗತ್ಯ ಸೌಲಭ್ಯಗಳಿಲ್ಲದೆ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರು ಪರದಾಡುವಂತಾಗಿದೆ.

ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳ ಪೈಕಿ 25 ಗ್ರಾಮ ಪಂಚಾಯಿತಿಗಳು ಸುಸಜ್ಜಿತ ಕಟ್ಟಡಗಳನ್ನು ಹೊಂದಿವೆ. ಇನ್ನುಳಿದ ದೇವರಭೂಪುರ, ಪೈದೊಡ್ಡಿ, ನರಕಲದಿನ್ನಿ, ಗುಂತಗೋಳ, ಗುರುಗುಂಟಾ, ಖೈರವಾಡಗಿ ಗ್ರಾಮ ಪಂಚಾಯಿತಿ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಅಗತ್ಯ ಸೌಲಭ್ಯಗಳು ಮರೀಚಿಕೆಯಾಗಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಪ್ರತ್ಯೇಕ ಕೊಠಡಿಗಳಿಲ್ಲ. ಸಭೆ ನಡೆಸಲು ವ್ಯವಸ್ಥಿತ ಆಸನಗಳು ಸೇರಿದಂತೆ ಸಭಾಂಗಣಗಳಿಲ್ಲ. ಪಂಚಾಯಿತಿಗೆ ಬಂದು ಹೋಗುವ ಪ್ರತಿನಿಧಿಗಳು, ಸಾರ್ವಜನಿಕರಿಗೆ ಬಹುತೇಕ ಕಡೆಗಳಲ್ಲಿ ಶುದ್ಧ ಕುಡಿವ ನೀರು, ಶೌಚಾಲಯ, ಮೂತ್ರಾಲಯಗಳ ವ್ಯವಸ್ಥೆ ಇಲ್ಲದಿರುವುದು ಆಡಳಿತ ವ್ಯವಸ್ಥೆ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

‘ಪಂಚತಂತ್ರ‘ ಆಧಾರದಲ್ಲಿ ಜನಸಾಮಾನ್ಯರಿಗೆ ಸರ್ಕಾರಿ ಯೋಜನೆ ಗಳನ್ನು ತಲುಪಿಸುವ ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸಲು ಹೆಣಗಾಡು ತ್ತಿರುವ ದೃಶ್ಯ ಸಾಮಾನ್ಯ. ಅಂತಹದ್ದಲ್ಲಿ 101 ಸೇವೆಗಳುಳ್ಳ ಬಾಪೂಜಿ ಸೇವಾ ಕೇಂದ್ರಗಳನ್ನು ಮಂಜೂರು ಮಾಡಿದ್ದು ಆಪರೇಟರ್‍, ಕಂಪ್ಯೂಟರ್‍, ಅಗತ್ಯ ಸೌಲಭ್ಯ ಕಲ್ಪಿಸದಿರುವುದು ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನ ಸವಾಲಾಗಿ ಪರಿಣಮಿಸಿದೆ.

ದೇವರಭೂಪುರ, ಗುಂತಗೋಳ, ಗುರುಗುಂಟಾದಲ್ಲಿ ಈಗಾಗಲೆ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯಿತಿ ನೂತನ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ. ಖೈಡರವಾಡಗಿ, ಪೈದೊಡ್ಡಿ, ನರಕಲದಿನ್ನಿ ಗಳಲ್ಲಿ ನಿರ್ಮಾಣಗೊಳ್ಳಬೇಕಿದ್ದು ಪ್ರತಿನಿಧಿಗಳ ತತ್ಸಾರ ಮನೋಭಾವದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.

‘ಆರು ದಶಕಗಳ ಹಿಂದೆ ನಿರ್ಮಾಣ ಗೊಂಡ ದೇವರಭೂಪುರ ಗ್ರಾಮ ಪಂಚಾಯಿತಿ ಕಟ್ಟಡ ಭಾಗಶಃ ಶಿಥಿಲಗೊಂಡಿದೆ. ನೂತನ ಕಟ್ಟಡ ನಿರ್ಮಾಣ ಹಂತದಲ್ಲಿದ್ದು ಕೆಲಸಕ್ಕೆ ಬಂದು ಹೋಗುವ ಸಾರ್ವಜನಿಕ ರಿಗೆ ಅಗತ್ಯ ಸೌಲಭ್ಯಗಳಲ್ಲಿ. ಚುನಾಯಿತ ಸದಸ್ಯರೆ ಪರದಾಡುವ ಸ್ಥಿತಿಯ ಲ್ಲಿದ್ದು ಸಾರ್ವಜನಿಕರ ಗೋಳು ಕೇಳುವವರಿ ಲ್ಲದಂತಾಗಿದೆ’ ಎಂದು ದುರುಗಪ್ಪ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಅಮರೇಶ ಮಾತನಾಡಿ, ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳಲ್ಲಿ ಬಹುತೇಕ ಕಡೆ ಕಟ್ಟಡ, ಅಗತ್ಯ ಸೌಲಭ್ಯಗಳಿವೆ. ಪೈದೊಡ್ಡಿ, ಖೈರವಾಡಗಿ, ನರಕಲದಿನ್ನಿಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ನಡೆದಿವೆ. ಬಾಪೂಜಿ ಸೇವಾ ಕೇಂದ್ರ ಅನುಷ್ಠಾನಕ್ಕೆ ಆಪರೇಟರ್‌ ಸಮಸ್ಯೆ ಮಾತ್ರ ಇದೆ’ ಎಂದರು.

ತಾಲ್ಲೂಕಿನಲ್ಲಿ ಒಂದೇ ಗ್ರಾ.ಪಂ ಸುಸ್ಥಿರ

ಮಾನ್ವಿ: ತಾಲ್ಲೂಕಿನ ಒಟ್ಟು 17 ಗ್ರಾಮ ಪಂಚಾಯಿತಿಗಳಲ್ಲಿ ಕಪಗಲ್ ಗ್ರಾಮ ಪಂಚಾಯಿತಿ ಕಟ್ಟಡ ಮಾತ್ರ ಸುಸ್ಥಿರವಾಗಿ ಇದೆ. ಸಾದಾಪುರ‌ ಮತ್ತು ಸಂಗಾಪುರ ಗ್ರಾಮ ಪಂಚಾಯಿತಿ ಕಟ್ಟಡಗಳು‌ ನಿರ್ಮಾಣ ಹಂತದಲ್ಲಿವೆ. ಇನ್ನುಳಿದ 14 ಗ್ರಾಮ ಪಂಚಾಯಿತಿ ಕಟ್ಟಡಗಳು ಶಿಥಿಲಗೊಂಡಿವೆ. ಗ್ರಾಮ ಪಂಚಾಯಿತಿ ಕಟ್ಟಡಗಳು ಶಿಥಿಲಗೊಂಡಿರುವ ಕುರಿತು ಜಿಲ್ಲಾ ಪಂಚಾಯಿತಿ ಸೇರಿದಂತೆ ಮೇಲಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಕೆಯಾಗಿದ್ದರೂ ಎಲ್ಲಾ ಕಟ್ಟಡಗಳ ಅಭಿವೃದ್ಧಿ ಅಥವಾ ಹೊಸದಾಗಿ ನಿರ್ಮಾಣಕ್ಕೆ ಕ್ರಮ ಕೈಗೊಂಡಿಲ್ಲ. ದಶಕಗಳ‌ ಹಿಂದೆ ನಿರ್ಮಾಣವಾದ ಕೆಲವು ಕಟ್ಟಡಗಳ ಮೇಲೆ ಕೆಲ ವರ್ಷಗಳ ಮೇಲ್ಮಹಡಿ ಕೊಠಡಿಗಳು, ಸಭಾಂಗಣಗಳನ್ನು‌ ನಿರ್ಮಿಸಲಾಗಿದೆ. ಆದರೆ ಮೂಲಸೌಕರ್ಯಗಳ ಕೊರತೆ ಇದೆ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಪೋತ್ನಾಳ ಗ್ರಾಮ ಪಂಚಾಯತಿ ಕಟ್ಟಡ ಕೊಠಡಿಯ ಮೇಲ್ಛಾವಣಿಯ ಶಿಥಿಲಗೊಂಡಿದೆ. ಮಳೆ ಬಂದಾಗ ರಸ್ತೆಯ ಮೇಲಿನ ನೀರು ಕಟ್ಟಡದ ಆವರಣಕ್ಕೆ ನುಗ್ಗುತ್ತದೆ.

ಉಟಕನೂರು ಗ್ರಾಮ ಪಂಚಾಯಿತಿ ಕಟ್ಟಡದ ಎರಡು ಕೊಠಡಿಗಳಲ್ಲಿ ಪಿಡಿಒ ಹಾಗೂ ಕಂಪ್ಯೂಟರ್ ಆಪರೇಟರ್ ಛೇಂಬರ್ ಇದ್ದು ಸಲಕರಣೆಗಳ ಸಂಗ್ರಹಕ್ಕೆ ಪ್ರತ್ಯೇಕ ಸ್ಟೋರ್ ರೂಮ್ ಇಲ್ಲ. ಕಟ್ಟಡ ಸಂಪೂರ್ಣ ಶಿಥಿಲಗೊಂಡಿರುವ ಕಾರಣ ಹೊಸದಾಗಿ ಸುಸಜ್ಜಿತ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣಕ್ಕೆ ₹32ಲಕ್ಷ ಮಂಜೂರಾಗಿ ಎಂಟು ವರ್ಷಗಳು ಕಳೆದಿವೆ. ಆದರೂ ಕಟ್ಟಡ ‌ನಿರ್ಮಾಣ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.

ಪೂರಕ ವರದಿಗಳು: ಬಿ.ಎ.ನಂದಿಕೋಲಮಠ, ಬಸವರಾಜ ಭೋಗಾವತಿ, ಕೃಷ್ಣಾ ಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT