ಭಾನುವಾರ, ಅಕ್ಟೋಬರ್ 20, 2019
21 °C

ಅತಿಥಿ ಉಪನ್ಯಾಸಕರಿಗೆ ವೇತನ ನೀಡದಿದ್ದರೆ ಪ್ರತಿಭಟನೆ

Published:
Updated:
Prajavani

ರಾಯಚೂರು: ಶೈಕ್ಷಣಿಕ ವ್ಯವಸ್ಥೆ ಸುಧಾರಿಸಲು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸರ್ಕಾರಿ ಶಾಲಾ– ಕಾಲೇಜುಗಳನ್ನು ಉನ್ನತೀಕರಿಸಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುಮತಿ ನೀಡಿದ್ದು, ಮೂರು ವರ್ಷಗಳ ನಿರ್ವಹಣೆ ಜವಾಬ್ದಾರಿಯೂ ವಹಿಸಿಕೊಂಡಿದೆ. ಆದರೆ, ಅತಿಥಿ ಉಪನ್ಯಾಸಕರಿಗೆ ಮೂರು ವರ್ಷಗಳಾಗುತ್ತಾ ಬಂದರೂ ವೇತನ ನೀಡಿಲ್ಲ. ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಮಂಡಳಿಯ ಕಚೇರಿಯ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಉ‍ಪಾಧ್ಯಕ್ಷ ರಜಾಕ್ ಉಸ್ತಾದ್ ಎಚ್ಚರಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 20 ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ 8ನೇ ತರಗತಿ, 14 ಎಂಟನೇ ತರಗತಿ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಹಾಗೂ 14 ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಿ ಕಟ್ಟಡ, ವೇತನ, ಭತ್ಯೆ ಹಾಗೂ ಮೂಲ ಸೌಕರ್ಯ ಒದಗಿಸಿ ಮೂರು ವರ್ಷಗಳ ನಂತರ ಇಲಾಖೆಗೆ ಹಸ್ತಾಂತರಿಸಲು ಮಂಡಳಿ ನಿರ್ಧಾರ ಕೈಗೊಂಡಿತ್ತು. ಆದರೆ, ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯ ಧೋರಣೆಯಿಂದ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ವೇತನ ನೀಡದೇ ದುಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಮಂಡಳಿಯು ಸರ್ಕಾರಕ್ಕೆ ಪದೇ ಪದೇ ಪತ್ರಗಳನ್ನು ಬರೆದು, ಹುದ್ದೆಗಳನ್ನು ಮಂಜೂರು ಮಾಡಿ ಆದೇಶಿಸಿದರೆ ವೇತನ ಬಿಡುಗಡೆ ಮಾಡುವುದಾಗಿ ಹೇಳುತ್ತಿದೆ. ಹುದ್ದೆಗಳ ಮಂಜೂರಾತಿ ನೀಡದೇ ವೇತನ ನೀಡಲು ಮಂಡಳಿ ಹಾಗೂ ಹುದ್ದೆಗಳನ್ನು ಮಂಜೂರು ಮಾಡಲು ಸರ್ಕಾರ ತಯಾರಿಲ್ಲ. ಹುದ್ದೆಗಳನ್ನು ಮಂಜೂರು ಮಾಡಿದರೆ ಸರ್ಕಾರವೇ ವೇತನ ನೀಡಲಿದ್ದು, ಮಂಡಳಿಯ ವೇತನ ಅವಶ್ಯಕತೆ ಇರುವುದಿಲ್ಲ. ಈ ಕನಿಷ್ಠ ತಿಳಿವಳಿಕೆಯಿಲ್ಲದೇ ಪತ್ರ ವ್ಯವಹಾರದ ಮೂಲಕ ಕಾಲಹರಣ ಮಾಡಲಾಗುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಸುಮಾರು 18 ಸಾವಿರ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, 3500 ಹುದ್ದೆಗಳು ಮಾತ್ರ ಮಂಜೂರಾಗಿವೆ. ಆದರೂ, ಮಂಜೂರಾತಿ ಇಲ್ಲದಿದ್ದರೂ ಸರ್ಕಾರವೇ ವೇತನ ನೀಡುತ್ತಿದೆ. ಆದರೆ, ಮಂಡಳಿ ಮಂಜೂರಾತಿ ಇಲ್ಲವೆಂದು ವೇತನ ನೀಡದೇ ದುಡಿಸಿಕೊಳ್ಳುತ್ತಿರುವುದು ಖಂಡನೀಯವಾಗಿದೆ ಎಂದರು.

ವೆಂಕಟೇಶ ಯಾದವ, ಮಹ್ಮದ ರಫಿ, ಅಶೋಕಕುಮಾರ ಜೈನ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Post Comments (+)