ಮಂಗಳವಾರ, ಅಕ್ಟೋಬರ್ 15, 2019
26 °C

ರಾಯಚೂರು: ಅರ್ಧಗಂಟೆ ಸುರಿದ ಮಳೆ: ಎಪಿಎಂಸಿಯಲ್ಲಿ ಹೊಳೆ!

Published:
Updated:
Prajavani

ರಾಯಚೂರು: ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಅರ್ಧಗಂಟೆ ಜೋರಾಗಿ ಸುರಿದ ಮಳೆಯಿಂದಾಗಿ ವಿವಿಧೆಡೆ ಅಧ್ವಾನಗಳು ನಡೆದವು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾರುಕಟ್ಟೆ ಪ್ಲಾಟ್‌ಗಳಲ್ಲಿ ನೀರು ಹೊಳೆಯಾಗಿ ಹರಿಯಿತು. ಯೋಗ್ಯ ದರಕ್ಕೆ ಈರುಳ್ಳಿ ಮಾರಾಟ ಮಾಡುವ ನಿರೀಕ್ಷೆಯಲ್ಲಿದ್ದ ರೈತರು ಮತ್ತೆ ಕಣ್ಣೀರು ಹಾಕುವಂತಾಯಿತು. ಮಾರಾಟಕ್ಕಾಗಿ ರೈತರು ರಾಶಿ ಹಾಕಿದ್ದ ಈರುಳ್ಳಿ ನೀರಿನಲ್ಲಿ ಕೊಚ್ಚಿಹೋಯಿತು.

ನೀರಿನಲ್ಲಿ ಹರಿದು ಹೋಗುತ್ತಿದ್ದ ಈರುಳ್ಳಿಯನ್ನು ಹಿಡಿದುಕೊಳ್ಳಲು ರೈತರು ತಾಪತ್ರಯ ಪಟ್ಟರು. ನೆನೆದಿರುವ ಈರುಳ್ಳಿ ವ್ಯಾಪಾರ ಆಗುತ್ತದೆಯೋ ಎಲ್ಲವೋ ಎನ್ನುವ ಚಿಂತೆಯಲ್ಲಿ ಮುಳುಗುವಂತಾಯಿತು. ಕೇಳಿದ ದರಕ್ಕೆ ಈರುಳ್ಳಿ ಮಾರಾಟ ಮಾಡಲು ರೈತರು ಕಾದು ಕುಳಿತಿದ್ದರು. ‘ಕೈಗೆ ಬಂದಿದ್ದ ತುತ್ತು ಬಾಯಿಗೆ ಬರಲಿಲ್ಲ’ ಎನ್ನುವ ಮಾತಿನಂತೆ ದಿಢೀರ್‌ ಸುರಿದ ಮಳೆಯಿಂದಾಗಿ ರೈತರು ಸಂಕಷ್ಟ ಅನುಭವಿಸಿದರು. ಎಪಿಎಂಸಿ ಆವರಣದಲ್ಲಿ ಸುರಿಯುವ ಮಳೆನೀರು ಹರಿದುಹೋಗಲು ಹೋಗಲು ಸಮರ್ಪಕ ವ್ಯವಸ್ಥೆಯಿಲ್ಲದ ಕಾರಣ, ಮಳೆ ಸುರಿದಾಗೊಮ್ಮೆ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ಮಳೆಕೊಯ್ಲು: ಬಸವೇಶ್ವರ ವೃತ್ತ, ಮಾರ್ಕೆಟ್‌ ಹಾಗೂ ನಗರದ ಬಡಾವಣೆ ರಸ್ತೆಗಳಲ್ಲಿ ಮಳೆ ನೀರು ಹೊಳೆಯಾಗಿ ಹರಿಯಿತು. ಈ ಮೊದಲು ಸುರಿದ ಮಳೆಯಿಂದ ನಿರ್ಮಾಣಗೊಂಡ ತಗ್ಗುಪ್ರದೇಶಗಳಲ್ಲಿ ನೀರು ಸಂಗ್ರಹವಾಗಿದ್ದು, ವಾಹನಗಳು ಮತ್ತು ಜನರ ಸಂಚಾರ ದುಸ್ತರವಾಗಿದೆ.

ಬಡಾವಣೆಯ ಕಚ್ಚಾರಸ್ತೆಗಳಲ್ಲಿ ನೀರು ಸಂಗ್ರಹವಾಗಿದ್ದು, ಮಳೆನೀರು ಕೊಯ್ಲಿಗಾಗಿ ಗುಂಡಿಗಳನ್ನು ನಿರ್ಮಾಣ ಮಾಡಿರುವಂತೆ ಗೋಚರಿಸುತ್ತಿವೆ.

Post Comments (+)