ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ, ಧರ್ಮಗಳ ಹೆಸರಿನಲ್ಲಿ ದ್ವೇಷ: ರಂಭಾಪುರಿ ಸ್ವಾಮೀಜಿ

ಧರ್ಮ ಜಾಗೃತಿ ಸಭೆಯ ಸಮಾರೋಪದಲ್ಲಿ ರಂಭಾಪುರಿ ಶ್ರೀ ಕಳವಳ
Last Updated 21 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವಲ್ಲಿ ಧರ್ಮದ ಆಚರಣೆಗಳು ಮಹತ್ವದ ಪಾತ್ರ ವಹಿಸುತ್ತ ಬಂದಿವೆ. ಆದರೆ, ಇತ್ತೀಚೆಗೆ ಜಾತಿ ಧರ್ಮಗಳ ಹೆಸರಲ್ಲಿ ದ್ವೇಷ, ಅಸೂಯೆ ಸಾಧನೆ ಮಾಡುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ’ ಎಂದು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಬೇಸರ ವ್ಯಕ್ತಪಡಿಸಿದರು.

ಗುರುವಾರ ಈಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಧರ್ಮ ಜಾಗೃತಿ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ‘ಪಂಚಪೀಠಗಳು, ಬಸವಾದಿ ಶರಣರು, ಸೋಫಿ ಸಂತರು ಭಾರತೀಯ ಸಂಸ್ಕೃತಿಗೆ ನೀಡಿದ ಕೊಡುಗೆ ಅಪಾರ. ಇಂತಹ ನೆಲದಲ್ಲಿ ಧರ್ಮ, ಜಾತಿ ಹೆಸರು ಹೇಳಿಕೊಂಡು ಸ್ವಾರ್ಥ ಸಾಧನೆ ಮಾಡಿಕೊಳ್ಳುತ್ತಿರುವವರ ವಿಚಾರಾಧಾರೆಗೆ ಕಿವಿಗೊಡದಿರಿ’ ಎಂದು ಸಲಹೆ ನೀಡಿದರು.

‘ವೀರಶೈವ ಪಂಚಪೀಠಗಳು ವಿಶ್ವದ ಇತರೆ ಧರ್ಮಗಳಲ್ಲಿ ಮಹಿಳೆಯರಿಗೆ ನೀಡದೆ ಇರುವಂತ ಸ್ವಾತಂತ್ರ್ಯವನ್ನು ಸಾವಿರಾರು ವರ್ಷಗಳ ಹಿಂದೆಯೆ ನೀಡಿವೆ. ಧರ್ಮ ಆಧಾರಿತ ಆಚಾರ, ವಿಚಾರಗಳು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಅನುಸರಿಸಿಕೊಂಡು ಬಂದಿವೆ. ಈ ನೆಪದಲ್ಲಿ ಮೌಢ್ಯತೆ, ಅಸ್ಪೃಶ್ಯತೆ ಆಚರಣೆ ಮಾಡುವುದು ಯಾರಿಗೂ ತರವಲ್ಲ. ಧರ್ಮದ ಅಸ್ಥಿತ್ವ ಉಳಿಸಿ ಬೆಳೆಸಲು ಯುವ ಸಮೂಹ ಮುಂದಾಗಬೇಕು’ ಎಂದು ಕರೆ ನೀಡಿದರು.

ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ‘ರೇಣುಕಾಚಾರ್ಯರಿಂದ ಸ್ಥಾಪಿತ ವೀರಶೈವ ಧರ್ಮ ಮಾನವ ಧರ್ಮದ ಒಳಿತೆಗೆ ಶ್ರಮಿಸುತ್ತ ಬಂದಿದೆ. ಇತ್ತೀಚಿನ ದಿನಗಳಲ್ಲಿ ವೀರಶೈವ ಲಿಂಗಾಯತ ಎಂಬುದು ದಾಖಲೆಗಳಲ್ಲಿ ಬರೆದುಕೊಳ್ಳಲು ಸೀಮಿತವಾಗಿದೆ. ಧರ್ಮದ ಆಚಾರ, ವಿಚಾರಗಳು ಕಣ್ಮರೆಯಾಗಿ ಹಿರಿಯ–ಕಿರಿಯರು, ಗುರುಗಳಿಗೆ ಗೌರವ ನೀಡುವುದು ಕ್ಷೀಣಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಸ್ಕಿ ವರರುದ್ರಮುನಿ ಶಿವಾಚಾರ್ಯರು, ತುರುವಿಹಾಳ ಅಮರುಗುಂಡ ಶಿವಾಚಾರ್ಯರು, ದೇವರಭೂಪುರ ಅಭಿನವ ಗಜದಂಡ ಶಿವಾಚಾರ್ಯರು ಮಾತನಾಡಿ, ‘ಸಂಸಾರಿಕ ಜಂಜಾಟದಲ್ಲಿ ಜಿಡ್ಡುಗಟ್ಟಿದ ಮನಸ್ಸುಗಳಲ್ಲಿ ಶಾಂತಿ ನೆಲೆಸಲು ಇಷ್ಟಲಿಂಗ ಪೂಜೆ ಮಹತ್ವವಾಗಿದೆ. ರಂಭಾಪುರಿ ಪೀಠವು 2021ಕ್ಕೆ ದಸರಾ ದರ್ಬಾರ್‌ ಉತ್ಸವ ನಡೆಸಲು ಘೋಷಣೆ ಮಾಡಿದ್ದು ಖುಷಿ ತಂದಿದೆ’ ಎಂದು ಹೇಳಿದರು.

ಇಷ್ಟಲಿಂಗ ಪೂಜೆ ಧರ್ಮದ ಅವಿಭಾಜ್ಯ ಅಂಗ:‘ವೀರಶೈವ ಧರ್ಮದ ಆಚರಣೆಗಳಲ್ಲಿ ಇಷ್ಟಲಿಂಗ ಪೂಜೆಗೆ ಸಾಕಷ್ಟು ಮಹತ್ವ ನೀಡಲಾಗಿದೆ. ಮನಷ್ಯನ ಮನಸ್ಸು ಶುದ್ಧೀಕರಣಗೊಳಿಸಿ, ಶಿವನ ಸಾಕ್ಷಾತ್ಕಾರ ಪಡೆದುಕೊಳ್ಳಲು ಇಷ್ಟಲಿಂಗ ಪೂಜೆ ಸಾಧನವಾಗಿದೆ’ ಎಂದು ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯರು ತಿಳಿಸಿದರು.

ಈಶ್ವರ ದೇವಸ್ಥಾನ ಸಮಿತಿ ಉಪಾಧ್ಯಕ್ಷ ಮಲ್ಲಣ್ಣ ವಾರದ ಅಧ್ಯಕ್ಷತೆ ವಹಿಸಿದ್ದರು. ಅಂಕಲಿಮಠದ ಫಕೀರೇಶ್ವರ ಸ್ವಾಮೀಜಿ, ಸಜ್ಜಲಗುಡ್ಡದ ದೊಡ್ಡಬಸವಾರ್ಯ ತಾತ, ಸಂತೆಕೆಲ್ಲೂರಿನ ಮರಿಮಹಾಂತ ದೇವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT