ಶುಕ್ರವಾರ, ಅಕ್ಟೋಬರ್ 18, 2019
23 °C

ಜಿಲ್ಲೆಯಾದ್ಯಂತ ರಭಸದ ಮಳೆ; ಅಸ್ತವ್ಯಸ್ತ

Published:
Updated:
Prajavani

ರಾಯಚೂರು: ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜಿಲ್ಲಾಯಾದ್ಯಂತ ಗುರುವಾರ ಮಳೆ ಬಿರುಸಿನಿಂದ ಸುರಿದಿದ್ದರಿಂದ, ವಿವಿಧೆಡೆ ಜನಜೀವನ ಅಸ್ತವಸ್ತವಾಯಿತು.

ಎರಡು ದಿನಗಳಿಂದ ಮೋಡಮುಸುಕಿದ ವಾತಾವರಣ ಮುಂದುವರೆದಿತ್ತು. ಜಿಲ್ಲೆಯಾದ್ಯಂತ  ಆಗೊಮ್ಮೆ-ಈಗೊಮ್ಮೆ ಮಳೆ ಬೀಳುತ್ತಿತ್ತು. ಗುರುವಾರ ಮಧ್ಯಾಹ್ನದಿಂದ ಮಳೆ ಬಿರುಸಾಯಿತು. ಸಿಂಧನೂರು, ಮಾನ್ವಿ, ಲಿಂಗಸುಗೂರು, ದೇವದುರ್ಗ, ಮಸ್ಕಿ, ಸಿರವಾರ, ರಾಯಚೂರು ತಾಲ್ಲೂಕುಗಳ ಎಲ್ಲಾ ಹೋಬಳಿಗಳಲ್ಲಿ ಮಳೆ ಆಗಿದೆ.

ಮುಂಗಾರು ಹಂಗಾಮಿನಲ್ಲಿ ತಡವಾಗಿ ಬಿದ್ದ ಮಳೆಯನ್ನು ನಂಬಿಕೊಂಡು ಬಿತ್ತನೆ ಮಾಡಿದ್ದ ರೈತರ ಬೆಳೆಗಳು ಒಣಗುವ ಸ್ಥಿತಿಯಲ್ಲಿದ್ದವು. ಈಗ ಶುರುವಾದ ಮಳೆಯಿಂದಾಗಿ ಜೀವ ಬಂದಂತಾಗಿದೆ. ಜಿಲ್ಲೆಯ ಕಾಲುವೆ ಕೊನೆ ಭಾಗದ ರೈತರು ನೀರಿಲ್ಲದೆ ಬಿತ್ತನೆ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಈಗ ತೇವಾಂಶ ಹೆಚ್ಚಳ ಆಗಿರುವುದರಿಂದ ಭತ್ತ ಬಿತ್ತನೆಗೆ ಅನುಕೂಲವಾಗಲಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡದೆ ಬಿಟ್ಟಿದ್ದ ರೈತರು ಹಿಂಗಾರಿ ಬೆಳೆ ಬೆಳೆಯುವುದಕ್ಕೆ ಅವಕಾಶ ಸಿಕ್ಕಂತಾಗಿದೆ.

ಜೋಳ, ಗೋಧಿ, ಕಡಲೆ, ಸೂರ್ಯಕಾಂತಿ, ಸಜ್ಜೆ ಹಾಗೂ ಸಿರಿಧಾನ್ಯ ಅಲ್ಪಾವಧಿ ಬೆಳೆ ಬೆಳೆಯುವ ರೈತರಿಗೆ ಭೂಮಿ ಹದವಾಗಿರುವುದು ನೆರವಾಗಬಹುದು. ಭೂಮಿಯಲ್ಲಿ ತೇವಾಂಶ ಇಲ್ಲದೆ ಬಣಗುಡುತ್ತಿದ್ದ ವಾತಾವರಣ ಇದೀಗ ತಂಪಿನಿಂದ ಆವರಿಸಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಜಾನುವಾರುಗಳಿಗೆ ಮೇವು ಬೆಳೆಯುವುದಕ್ಕೆ ಹಾಗೂ ಸಣ್ಣ ಪ್ರಮಾಣದ ಕೆರೆ-ಕುಂಟೆಗಳು ತುಂಬಲು ಎರಡು ದಿನದ ಸುರಿದ ಮಳೆ ಅನುಕೂಲ ಮಾಡಿದೆ.  ನಾರಾಯಣಪುರ ಬಲದಂಡೆ ಕಾಲುವೆ ಹಾಗೂ ತುಂಗಭದ್ರಾ ಎಡದಂಡೆ ಕಾಲುವೆಗಳಿಗೆ ನೀರು ಹರಿಯುತ್ತಿದ್ದು, ಇದೀಗ ಮಳೆ ಬೀಳುತ್ತಿರುವುದರಿಂದ ರೈತರು ನೀರನ್ನು ಬಳಸಿಕೊಳ್ಳುತ್ತಿಲ್ಲ. ಇದರಿಂದ ಕೆಲವು ಭಾಗದ ವಿತರಣಾ ಕಾಲುವೆಗಳು ಕೊಚ್ಚಿಹೋದ ಘಟನೆಗಳು ನಡೆದಿವೆ.

ಕೊನೆ ಭಾಗದ ರೈತರ ಹೋರಾಟ: ಟಿಎಲ್ ಬಿಸಿ ಕೊನೆ ಭಾಗದ ರೈತರು ನೀರಿಗಾಗಿ ನಿರಂತರ ಹೋರಾಟ ಆರಂಭಿಸಿದ್ದರು. ಇದೀಗ ಸುರಿದ ಮಳೆಯಿಂದಾಗಿ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪುವ ಸಾಧ್ಯತೆ ಇದೆ.

ಸಿಂಧನೂರು, ಮಾನ್ವಿ ಹಾಗೂ ರಾಯಚೂರು ತಾಲ್ಲೂಕುಗಳ ರೈತರು ಕಾಲುವೆಯಲ್ಲಿ ನೀರಿಲ್ಲದೆ ಹೋರಾಟ ಮಾಡುವ ಬಗ್ಗೆ ಯೋಜಿಸಿದ್ದರು. ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪುವ ನಿರೀಕ್ಷೆ ಹೆಚ್ಚಾಗಿದೆ.  

Post Comments (+)