ಭಾನುವಾರ, ಅಕ್ಟೋಬರ್ 20, 2019
27 °C

ಪೊಲೀಸರಿಂದ ‘ಹೆಲ್ಮೆಟ್‌ ದಿನಾಚರಣೆ’

Published:
Updated:

ರಾಯಚೂರು: ಮಹಾತ್ಮ ಗಾಂಧಿ ಜಯಂತಿಯನ್ನು ಜಿಲ್ಲಾ ಪೊಲೀಸರು ವಿಶಿಷ್ಟ ರೀತಿ ಹೆಲ್ಮೆಟ್‌ ದಿನವಾಗಿ ಆಚರಿಸುತ್ತಿದ್ದಾರೆ. ಕೇಂದ್ರ ಬಸ್‌ ನಿಲ್ದಾಣ ಪಕ್ಕದಲ್ಲಿರುವ ಡಾ.ಬಿ.ಆರ್‌. ಅಂಬೇಡ್ಕರ್‌ ಸರ್ಕಲ್‌, ಬಸವೇಶ್ವರ ವೃತ್ತ, ಚಂದ್ರಮೌಳೇಶ್ವರ ವೃತ್ತ, ಆರ್‌ಟಿಒ ಕಚೇರಿ ವೃತ್ತ ಸೇರಿದಂತೆ ವಿವಿಧೆಡೆ ಹೆಲ್ಮೆಟ್‌ ದಿನಾಚರಣೆ ಮಾಡಲಾಗುತ್ತಿದೆ.

ಏನಿದು ದಿನಾಚರಣೆ?

ಹೆಲ್ಮೆಟ್‌ ಹಾಕಿಕೊಳ್ಳದೆ ಬೈಕ್‌ ಸವಾರಿ ಮಾಡುತ್ತಿರುವವರನ್ನು ಪ್ರಮುಖ ವೃತ್ತಗಳಲ್ಲಿ ಒಂದೆಡೆ ನಿಲ್ಲಿಸಲಾಗುತ್ತದೆ. ರಸ್ತೆ ಸಂಚಾರ ನಿಯಮಗಳ ಪಾಲಿಸುವ ಕುರಿತು ಪೊಲೀಸರು ತಿಳಿವಳಿಕೆ ನೀಡಿ, ಆನಂತರ ಪ್ರತಿಜ್ಞಾವಿಧಿ ಬೋಧಿಸುತ್ತಿದ್ದಾರೆ. ಬೈಕ್‌ ಸವಾರರಿಂದ ತಲಾ ₹1 ಸಾವಿರ ದಂಡ ವಸೂಲಿ ಮಾಡಿ ರಸೀದಿ ನೀಡಲಾಗುತ್ತಿದೆ.

ಎಲ್ಲ ಸವಾರರಿಗೂ ಉಚಿತವಾಗಿ ಹೆಲ್ಮೆಟ್‌ವೊಂದನ್ನು ಪೊಲೀಸರು ನೀಡುತ್ತಿದ್ದಾರೆ. ಹೆಲ್ಮೆಟ್‌ ಪಡೆದವರೆಲ್ಲರ ಬೈಕ್‌ ಸಂಖ್ಯೆ ಹಾಗೂ ಇತರೆ ವಿವರಗಳನ್ನು ಸಂಗ್ರಹಿಸಿ, ಕಡ್ಡಾಯವಾಗಿ ಧರಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ, ಹೆಲ್ಮೆಟ್‌ ಧರಿಸದೆ ಮುಂದಿನ ದಿನಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ, ಮತ್ತೆ ದಂಡ ವಸೂಲಿ ಮಾಡುವುದಾಗಿ ಪೊಲೀಸರು ಮನವರಿಕೆ ಮಾಡುತ್ತಿದ್ದಾರೆ.

‘ಜಿಲ್ಲೆಯ ಪೊಲೀಸರು ಸ್ವಯಂ ಪ್ರೇರಣೆಯಿಂದ ದೇಣಿಗೆ ರೂಪದಲ್ಲಿ ಕೊಟ್ಟಿರುವುದನ್ನು ಸಂಗ್ರಹಿಸಿ ಹೆಲ್ಮೆಟ್‌ ಖರೀದಿಸಲಾಗಿದೆ. ಗಾಂಧಿ ಜಯಂತಿಯಂದು ಹೆಲ್ಮೆಟ್‌ ದಿನಾಚರಣೆ ಮಾಡಿ, 100 ಜನರಿಗೆ ಹೆಲ್ಮೆಟ್‌ ಉಚಿತವಾಗಿ ನೀಡಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ತಿಳಿಸಿದರು.

Post Comments (+)