ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರರಿಗೆ ಉಪಕಾರಿಗಳು ನಿಜವಾದ ಸಜ್ಜನರು’

ಶ್ರೀ ಮಾತಾ ಲಕ್ಷ್ಮಮ್ಮದೇವಿ ದೇವಸ್ಥಾನದ ಕಟ್ಟಡ ಲೋಕಾರ್ಪಣೆ, ಕಳಸಾರೋಹಣ
Last Updated 21 ಫೆಬ್ರುವರಿ 2019, 12:12 IST
ಅಕ್ಷರ ಗಾತ್ರ

ರಾಯಚೂರು: ಸಮಾಜದಲ್ಲಿ ಪರರ ಉಪಕಾರಕ್ಕಾಗಿ ಶ್ರಮಿಸುವವರು ನಿಜವಾದ ಸಜ್ಜನರು ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.

ನಗರದ ಗದ್ವಾಲ್‌ ಮಾರ್ಗದಲ್ಲಿ ಮುನ್ನೂರು ಕಾಪು ಸಮಾಜದಿಂದ ನೂತನವಾಗಿ ನಿರ್ಮಿಸಿರುವ ಶ್ರೀ ಲಕ್ಷ್ಮಮ್ಮದೇವಿ ದೇವಸ್ಥಾನದ ಲೋಕಾರ್ಪಣೆ, ಶ್ರೀ ಕಾಳಿಕಾದೇವಿ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಗೋಪುರದ ಕಳಸಾರೋಹಣವನ್ನು ಗುರುವಾರ ನೆರವೇರಿಸಿ ಮಾತನಾಡಿದರು.

ಗಿಡಗಳು, ನದಿಗಳು, ಗೋವುಗಳು ತಮಗಾಗಿ ಫಲಗಳನ್ನು ಬಳಸುವುದಿಲ್ಲ. ಪರರ ಶ್ರಯೋಭಿವೃದ್ಧಿಗಾಗಿ ಗಿಡಗಳು ಹಣ್ಣುಗಳನ್ನು ಕೊಡುತ್ತವೆ. ನದಿಗಳು ಪ್ರವಹಿಸಿ ನೀರು ಒದಗಿಸುತ್ತವೆ ಹಾಗೂ ಗೋವುಗಳು ಹಾಲು ಕೊಡುತ್ತವೆ ಎಂದು ಹೇಳಿದರು.

ಹಿಂದುಳಿದ ಜನಾಂಗದ ಪಟ್ಟಿಯಲ್ಲಿರುವ ಮುನ್ನೂರುಕಾಪು ಸಮಾಜದ ಅಭಿವೃದ್ಧಿಗಾಗಿ ಸರ್ಕಾರವು ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಇದನ್ನೆ ಸವಾಲಾಗಿ ಸ್ವೀಕರಿಸಿದ ಸಮಾಜವು ವ್ಯಾಪಾರ ಹಾಗೂ ಕೃಷಿಯಲ್ಲಿ ಉನ್ನತಿಯನ್ನು ಸಾಧಿಸಿ ಇತರೆ ಸಮಾಜಗಳಿಗೆ ಮಾದರಿಯಾಗಿದೆ. ಆದರೂ ಸರ್ವರಂಗಗಳಲ್ಲಿ ಮುನ್ನೂರುಕಾಪು ಸಮಾಜದ ಏಳಿಗೆಯಾಗಲು ಸರ್ಕಾರವು ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.

ಕೈವಾರ ಮಠದ ಧರ್ಮಾಧಿಕಾರಿ ಡಾ.ಎಂ.ಆರ್‌. ಜಯರಾಮ್‌ ಮಾತನಾಡಿ, ದೇಶದಲ್ಲಿ ಯಾವುದೇ ಸಮಾಜದ ಜನರು ಧರ್ಮ ಹಾಗೂ ಸಮಾಜಮುಖಿ ಕೆಲಸ ಮಾಡುವುದನ್ನು ಎಲ್ಲರೂ ಗೌರವಿಸುತ್ತಾರೆ. ಮುನ್ನೂರುಕಾಪು ಬಲಿಜ ಸಮಾಜವು ಧರ್ಮದ ತಳಹದಿಯಲ್ಲಿಯೇ ಸದಾ ಮುನ್ನಡೆಯುತ್ತಿದೆ. ಇದು ಪರಂಪರೆಯಿಂದ ಮುಂದುವರಿದುಕೊಂಡು ಬಂದಿದೆ. ಧರ್ಮದ ಚಿಂತನೆಯಿಂದಾಗಿ ಏಳಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಮಾಜದ ಮುಖಂಡ ಎ.ಪಾಪಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಮುನ್ನೂರು ಕಾಪು ಜನರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರಗತಿಯಾಗಲು ವ್ಯಾಪಾರ ಮತ್ತು ಕೃಷಿಯನ್ನು ಅವಲಂಬಿಸಿ ಬೆಳೆಯುತ್ತಿದೆ. ಸಮಾಜದ ಮುಖಂಡರು ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯವಾಗಿ ಸ್ಪರ್ಧಿಸಿ, ಆನಂತರ ಸಮಾಜದ ಅಭಿವೃದ್ಧಿಗಾಗಿ ಎಲ್ಲರೂ ನಿಂತುಕೊಳ್ಳುತ್ತಾರೆ ಎಂದು ಹೇಳಿದರು.

ಸಮಾಜದ ಮುಖಂಡ ಚಂದ್ರಮೌಳಿ ಗಂಪಾ ಮಾತನಾಡಿ, ಸಮಾಜದ ಪ್ರಗತಿಗಾಗಿ ಮಕ್ಕಳಿಗೆ ಶಿಕ್ಷಣ ಕೊಡಲು ಹೆಚ್ಚು ಮುತೂವರ್ಜಿ ವಹಿಸಬೇಕಿದೆ. ಚುನಾವಣೆಗಳು ಬಂದಾಗ ಮುಖಂಡರು ಬೇರೆ ಬೇರೆ ಪಕ್ಷಗಳಲ್ಲಿ ರಾಜಕೀಯ ಮಾಡಿಕೊಳ್ಳಲಿ. ಆದರೆ, ಸಮಾಜದ ಅಭಿವೃದ್ಧಿಯ ವಿಷಯದಲ್ಲಿ ಎಲ್ಲರೂ ಒಗ್ಗಟ್ಟಾಗಬೇಕು ಎಂದು ತಿಳಿಸಿದರು.

ಸಂಸದ ಬಿ.ವಿ.ನಾಯಕ ಮಾತನಾಡಿ, ಪ್ರತಿವರ್ಷ ಮುಂಗಾರು ಉತ್ಸವ ಆಯೋಜಿಸುವ ಮೂಲಕ ರೈತರಿಗೆ ಚೈತನ್ಯ ತುಂಬುವುದು ಮತ್ತು ಸಮಾಜಮುಖಿ ಚಟುವಟಿಕೆಗಳನ್ನು ಮಾಡುವ ಮೂಲಕ ಮುನ್ನೂರುಕಾಪು ಸಮಾಜವು ಇನ್ನುಳಿದ ಸಮಾಜಗಳಿಗೆ ಮಾದರಿಯಾಗಿದೆ. ರಾಜ ಮಹಾರಾಜರ ಕಾಲದಲ್ಲಿ ನಿರ್ಮಾಣವಾಗುತ್ತಿದ್ದ ಭವ್ಯ ಶಿಲ್ಪಕಲಾ ದೇವಸ್ಥಾನಗಳ ರೀತಿಯಲ್ಲಿ ಲಕ್ಷ್ಮಮ್ಮ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಸಮಾಜದ ಜನರ ಅವಿರತ ಪ್ರಯತ್ನದಿಂದ ಇಂತಹ ಸಾಧನೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜು, ಗುಂಟೂರು ದಾಸರಿ ರಾಮು ಮಾತನಾಡಿದರು. ದೇವಸ್ಥಾನದ ವಾಸ್ತುಶಿಲ್ಪ ಕಲೆಯ ಕುರಿತು ರಾಮಣ್ಣ ಹವಳೆ ಅವರು ಬರೆದ ಕಿರುಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ದೇವಸ್ಥಾನದ ಶಿಲ್ಪಿಗಳಾದ ವರದರಾಜು ಮತ್ತು ಉಚ್ಚೀರಪ್ಪ ಅವರನ್ನು ಸನ್ಮಾನಿಸಲಾಯಿತು.

ಧರ್ಮಾವರಂ ಶ್ರೀಕೃಷ್ಣ ಜ್ಯೋತಿಸ್ವರೂಪಾನಂದ ಸ್ವಾಮೀಜಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್‌, ಸಮಾಜದ ಮುಖಂಡರು ಇದ್ದರು.ವೆಂಕಟರೆಡ್ಡಿ ಸ್ವಾಗತಿಸಿದರು. ಮುರಳೀಧರ ಕುಲಕರ್ಣಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT