ಭಾನುವಾರ, ಸೆಪ್ಟೆಂಬರ್ 19, 2021
29 °C
ಸವಾರರಿಗೆ ತಪ್ಪದ ಕಿರಿ ಕಿರಿ, ಸಾರ್ವಜನಿಕರ ಬೇಡಿಕೆಗೆ ಸಿಗದ ಸ್ಪಂದನೆ: ಕೆಲವು ಕಡೆ ನನೆಗುದಿಗೆ ಬಿದ್ದ ರಸ್ತೆ ಮಧ್ಯೆದ ವಿದ್ಯುತ್‌ ಕಂಬ ಸ್ಥಳಾಂತರ ಕಾರ್ಯ

ರಾಯಚೂರು: ಸುಗಮ ಸಂಚಾರಕ್ಕೆ ತೊಡಕಾದ ಹೆದ್ದಾರಿ ವಿಭಜಕ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಅಪಘಾತಗಳನ್ನು ನಿಯಂತ್ರಿಸಿ ಸಂಚಾರಕ್ಕೆ ಅನುಕೂಲ ಆಗಿರಬೇಕಿದ್ದ ರಸ್ತೆ ವಿಭಜಕಗಳು, ಅವಘಡಗಳನ್ನು ಆಹ್ವಾನಿಸುತ್ತಿವೆ!

ಮೂಲಸೌಕರ್ಯಗಳ ವಿಷಯ ದಲ್ಲಿ ತಾಲ್ಲೂಕು ಕೇಂದ್ರಗಳಿಗೆ ಮಾದರಿಯಾಗಿರ ಬೇಕಿದ್ದ ರಾಯಚೂರು ನಗರದಲ್ಲೇ ರಸ್ತೆ ವಿಭಜಕಗಳನ್ನು ಕ್ರಮಬದ್ಧತೆ ಇಲ್ಲದೆ ನಿರ್ಮಿಸಲಾಗಿದೆ. ಇದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಸಂಚಾರ ನಿಯಮಗಳ ಪಾಲನೆ ಆಗುತ್ತಿಲ್ಲ. ಪಾದಚಾರಿ ಗಳು ಆತಂಕದಲ್ಲಿಯೇ ರಸ್ತೆ ದಾಟುವಂತಹ ಸ್ಥಿತಿ ಇದೆ.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಪ್ರತಿಯೊಂದು ನಿಯಮನುಸಾರ ಇರುವುದನ್ನು ಎಲ್ಲೆಡೆಯಲ್ಲೂ ಕಾಣಬಹುದು. ಆದರೆ, ರಾಯಚೂರು ನಗರ ಮಧ್ಯೆದಲ್ಲಿರುವ ಜಡ ಚರ್ಲಾ–ಹಗರಿ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 167) ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ. ಹೆದ್ದಾರಿಯ ಅಗಲ ಹಾಗೂ ವಿಭಜಕಗಳು ಅಸಮರ್ಪಕವಾಗಿ ನಿರ್ಮಾಣವಾಗಿವೆ. ನಗರ ವ್ಯಾಪ್ತಿಯ 5.5 ಕಿ.ಮೀ. ಹೆದ್ದಾರಿಯು ಪ್ರತಿ ಅರ್ಧ ಕಿಲೋ ಮೀಟರ್‌ನಲ್ಲಿ ಭಿನ್ನವಾಗಿದೆ.

ಟಿಪ್ಪು ಸುಲ್ತಾನ್‌ ವೃತ್ತದಿಂದ ಬಸವೇಶ್ವರ ವೃತ್ತ ಹಾಗೂ ಅಲ್ಲಿಂದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದವರೆಗೂ ವಿಶಾಲವಾಗಿರುವ ಹೆದ್ದಾರಿಗೆ ರಸ್ತೆ ವಿಭಜಕಗಳು ಸಮರ್ಪಕವಾಗಿದ್ದರೂ ಅದರಲ್ಲಿ ಬೆಳೆಸಿದ ಗಿಡಗಳು ಸಂಚಾರಕ್ಕೆ ಕಿರಿಕಿರಿಯನ್ನುಂಟು ಮಾಡುತ್ತಿವೆ. ಲಾರಿಯಂತಹ ಭಾರಿ ವಾಹನ ಚಾಲಕರಿಗೆ ರಸ್ತೆ ದಾಟುವವರು ಕಾಣಿಸುವುದೇ ಇಲ್ಲ. ವಿಭಜಕದಲ್ಲಿರುವ ಮರಗಳು ಕಣ್ಣಿಗೆ ಅಡ್ಡಲಾಗುತ್ತಿವೆ. ಇದ್ದಕ್ಕಿದ್ದಂತೆ ಜನರು ರಸ್ತೆ ದಾಟುವುದಕ್ಕೆ ಅಡ್ಡ ಬರುವುದರಿಂದ ವಾಹನ ಚಾಲಕರು ಆತಂಕಕ್ಕೀಡಾಗುತ್ತಿದ್ದಾರೆ.

ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಆಶಾಪುರ ಕ್ರಾಸ್‌ವರೆಗೂ ಹೆದ್ದಾರಿ ಅಗಲ ಕಡಿಮೆ ಇದ್ದು, ವಿಭಜಕಗಳನ್ನು ಇನ್ನೂ ಚಿಕ್ಕದಾಗಿ ನಿರ್ಮಿಸಲಾಗಿದೆ. ಆದರೆ, ದೊಡ್ಡ ಜಾಗ ಬಯಸುವ ಸಸಿಗಳನ್ನು ಬೆಳೆಸಲಾಗುತ್ತಿದೆ. ಹೀಗಾಗಿ ಮರಗಳು ವಾಹನಗಳಿಗೆ ಬಡಿದುಕೊಳ್ಳುತ್ತಿವೆ. ರಸ್ತೆ ವಿಭಜಕಗಳ ನಿರ್ವಹಣೆಗಾಗಿ ನಗರಸಭೆ ಸಿಬ್ಬಂದಿ ಹಲವು ವರ್ಷಗಳಿಂದ ಹರಸಾಹಸ ಪಡುತ್ತಿದ್ದಾರೆ. ಆದರೆ, ಶಾಶ್ವತ ಪರಿಹಾರ ಕಂಡುಕೊಳ್ಳಲು ನಗರಸಭೆ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.

ಆಶಾಪುರ ಕ್ರಾಸ್‌ನಿಂದ ಆರ್‌ಟಿಒ ವೃತ್ತದವರೆಗೂ ವಿಶಾಲವಾಗಿರುವ ಹೆದ್ದಾರಿಗೆ ಒಂದು ಅಡಿ ಅಗಲದ ವಿಭಜಕವಿದೆ. ಜನರು ಎಲ್ಲಿ ಬೇಕಾದಲ್ಲಿ ರಸ್ತೆ ದಾಟುವುದಕ್ಕೆ ಸಾಧ್ಯವಾಗುತ್ತದೆ. ಮಧ್ಯೆದಲ್ಲಿ ಕಡಿಮೆ ಅಂತರದ ವಿಭಜಕ ಇರುವುದರಿಂದ ಬೈಕ್‌ ಸವಾರರು ಕೂಡಾ ಆತಂಕಪಡುವಂತಾಗಿದೆ.

ಒಂದು ಪಥ ದಾಟಿದಾಗ ಇನ್ನೊಂದು ಪಥದಲ್ಲಿ ವಾಹನ ಬರುತ್ತಿದ್ದರೆ ಮಧ್ಯೆದಲ್ಲಿ ಸುರಕ್ಷಿತವಾಗಿ ನಿಂತುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಹಿಂದೆ, ಮುಂದೆ ಏಕಕಾಲದಲ್ಲಿ ವಾಹನಗಳು ನುಗ್ಗುವುದರಿಂದ ಗೊಂದಲಕ್ಕೀಡಾಗಿ ಅಪಘಾತಗಳು ಸಂಭವಿಸುತ್ತಿವೆ. ಐಡಿಎಸ್‌ಎಂಟಿ ಬಸ್‌ ನಿಲ್ದಾಣ ಪಕ್ಕದಲ್ಲಿ ಮತ್ತು ಆಕಾಶವಾಣಿ ಎದುರು ಮೇಲಿಂದ ಅಪಘಾತಗಳಾಗುತ್ತಿವೆ.

ರಸ್ತೆ ವಿಭಜಕಗಳನ್ನು ಮತ್ತು ರಸ್ತೆ ಉಬ್ಬುಗಳನ್ನು ಸಮರ್ಪಕವಾಗಿ ನಿರ್ಮಾಣ ಮಾಡಿ, ನಿರ್ವಹಣೆ ಮಾಡುವಂತೆ ಸಂಘ–ಸಂಸ್ಥೆಗಳು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ. ಆದರೆ, ಎನ್‌ಎಚ್‌ಎಐ ಹಾಗೂ ನಗರಸಭೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಅವೈಜ್ಞಾನಿಕ ವಿಭಜಕ

ಸಿಂಧನೂರು: ರಾಯಚೂರು-ಗಂಗಾವತಿ ಮುಖ್ಯ ರಸ್ತೆಯಲ್ಲಿ ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ವಿಭಜಕ ಕಿರಿದಾಗಿರುವುದರಿಂದ ಅಪಘಾತಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿವೆ.

‘ವಿಭಜಕಗಳನ್ನು ನಿರ್ಮಿಸುವ ಸಮಯದಲ್ಲಿ ಹಲವಾರು ಕಡೆ ಅನಗತ್ಯವಾಗಿ ರಾಜಕೀಯ ಪ್ರಭಾವಕ್ಕೆ ಒಳಗಾಗಿ ವಾಣಿಜ್ಯ ಮಳಿಗೆಗಳಿಗೆ, ಮನೆಗಳಿಗೆ ದಾರಿಗಳನ್ನು ಬಿಡಲಾಗಿದೆ. ದಾರಿ ಬಿಡಬೇಕಾದ ಅವಶ್ಯಕತೆ ಇದ್ದಲ್ಲಿ ಬಿಡದೆ ವಿಭಜಕ ಕಟ್ಟಲಾಗಿದೆ. ಈ ಕುರಿತು ಆ ಸಮಯದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರೂ ಪ್ರತಿಫಲ ಶೂನ್ಯವಾಯಿತು’ ಎಂದು ನಗರಾಭಿವೃದ್ಧಿ ಹೋರಾಟ ಸಮಿತಿಯ ಸಂಚಾಲಕ ಖಾನ್‍ಸಾಬ ಅಸಮಾಧಾನ ಹೇಳಿದರು.

ಸುಗಮ ಸಂಚಾರಕ್ಕೆ ಅಡ್ಡಿ

ಲಿಂಗಸುಗೂರು: ಪಟ್ಟಣದಲ್ಲಿ ಅವೈಜ್ಞಾನಿಕ ರಸ್ತೆ ವಿಭಜಕಗಳ ನಿರ್ಮಾಣದಿಂದ ಸುಗಮ ಸಂಚಾರ ಸವಾಲಾಗಿ ಪರಿಣಮಿಸಿದೆ.

ಬಸ್‍ ನಿಲ್ದಾಣ ಬಳಿ 600 ಮೀಟರ್‍ ಅವೈಜ್ಞಾನಿಕ ರಸ್ತೆ ವಿಭಜಕ ನಿರ್ಮಾಣ ಮಾಡಿದ್ದು ವಾಹನಗಳು ಡಿಕ್ಕಿಯಿಂದ ಮತ್ತಷ್ಟು ಅವ್ಯವಸ್ಥಿತವಾಗುತ್ತಿವೆ.

ರಸ್ತೆ ವಿಭಜಕಗಳನ್ನು ಕನಿಷ್ಠ ಒಂದು ಅಡಿ ಅಗಲ, 3 ಅಡಿ ಎತ್ತರ ನಿರ್ಮಿಸಬೇಕು. ಸದ್ಯಕ್ಕೆ ಜನರು ವಾಹನ ಲೆಕ್ಕಿಸದೆ ವಿಭಜಕ ದಾಟಿ ಓಡಾಡುತ್ತಾರೆ. ಹೀಗಾಗಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ವಿಭಜಕದಿಂದ ಅನುಕೂಲಕ್ಕಿಂತ ಅನಾನುಕೂಲಗಳೆ ಹೆಚ್ಚಾಗಿವೆ.

ಜಿಲ್ಲೆಯಲ್ಲೆ ಅತಿಹೆಚ್ಚು ಕ್ರಿಮಿನಲ್‍ ಪ್ರಕರಣಗಳು, ಜನದಟ್ಟಣೆ ಮತ್ತು ವಾಹನಗಳ ಸಂಚಾರ ದಟ್ಟನೆಯು ಲಿಂಗಸುಗೂರು ಪಟ್ಟಣದಲ್ಲಿದೆ ಎಂಬುದನ್ನು ಸಂಚಾರ ಸಂಬಂಧಿ ಇಲಾಖೆಗಳು ಗುರುತಿಸಿವೆ. ಸಂಚಾರಿ ಪೊಲೀಸ್‍ ಠಾಣೆ, ಪಟ್ಟಣ ಪೊಲೀಸ್‍ ಠಾಣೆ ಪ್ರತ್ಯೇಕ ಮಂಜೂರಿ ಹಾಗೂ ರಸ್ತೆಗಳ ಅತಿಕ್ರಮಣ ತೆರವು, ರಸ್ತೆ ಮಧ್ಯದಲ್ಲಿರುವ ವಿದ್ಯುತ್‍ ಕಂಬಗಳ ಸ್ಥಳಾಂತರ ಮಾಡುವ ಬೇಡಿಕೆಗಳು ನನೆಗುದಿಗೆ ಬಿದ್ದಿವೆ.

ಕಿರಿದಾದ ರಸ್ತೆ ಮಧ್ಯೆ ವಿಭಜಕ

ಮಾನ್ವಿ: ಪಟ್ಟಣದ ಬಸವ ವೃತ್ತದಿಂದ ಬಸ್ ನಿಲ್ದಾಣದ ಮೂಲಕ ತಹಶೀಲ್ದಾರ್ ಕಚೇರಿವರೆಗೆ ಕಡಿಮೆ ವಿಸ್ತಾರದ ರಸ್ತೆ ಇದೆ. ಸದಾ ಜನಜಂಗುಳಿ, ವಾಹನಗಳ ಸಂಚಾರ ದಟ್ಟಣೆ ಹೊಂದಿರುವ ರಸ್ತೆಯಾಗಿದೆ. ಈ ರಸ್ತೆಗೆ ವಿಭಜಕ ನಿರ್ಮಾಣ ಮಾಡಿದ ಸಮಸ್ಯೆ ಇಮ್ಮಡಿಸಿವೆ.

ಸುಮಾರು 30 ಅಡಿ ರಸ್ತೆಗೆ ವಿಭಜಕ ನಿರ್ಮಾಣ ಮಾಡಿರುವುದು ಅವೈಜ್ಞಾನಿಕ ಎಂಬುದು ಸ್ಥಳೀಯರ ಆರೋಪ. ರಸ್ತೆಯ ಎರಡೂ ಬದಿಗೆ ವಾಹನಗಳ ನಿಲುಗಡೆಗೆ ಸಮರ್ಪಕವಾದ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಿಲ್ಲ. ‘ವಿಭಜಕ ನಿರ್ಮಾಣಕ್ಕೆ ಮೊದಲು ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಕಂಡು ಬರುತ್ತಿರಲಿಲ್ಲ. ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಇತ್ತು’ ಎಂಬುದು ಇಲ್ಲಿನ ವರ್ತಕರ ಅಭಿಪ್ರಾಯ.

ಸೂಚನಾ ಫಲಕಗಳಿಲ್ಲ

ದೇವದುರ್ಗ: ಪಟ್ಟಣದ ಮುಖ್ಯರಸ್ತೆಗಳಲ್ಲಿ ಅಳವಡಿಸಿರುವ ರಸ್ತೆವಿಭಜಕ ಕಬ್ಬಿಣದ ಪೋಲ್‌ಗಳು, ಸೂಚನಾ ಫಲಕಗಳು ಕಿತ್ತುಹೋಗಿವೆ. ಆ ಜಾಗದಲ್ಲಿ ವಾಹನ ಅಡ್ಡಾದಿಡ್ಡಿಯಾಗಿ ತಿರುಗಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅದು ಬೇರೆ ವಾಹನ ಚಾಲಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

ವಾಹನಗಳ ಸಂಚಾರ ಹೆಚ್ಚಾಗುತ್ತಿದ್ದು ಯಾವುದೇ ಸೂಚನಾ ಫಲಕ, ರಸ್ತೆ ವಿಭಜಕಗಳು ಇಲ್ಲದೆ ಅಪಘಾತಗಳು ಹೆಚ್ಚಾಗುತ್ತಿವೆ.

ಬಸ್‌ ನಿಲ್ದಾಣದ ಬಳಿ, ಗಾಂಧೀ ವೃತ್ತ, ಹಳೆ ಬಸ್ ನಿಲ್ದಾಣ, ಕೋಪ್ಪರ ಕ್ರಾಸ್ , ಎಪಿಎಂಸಿ ರಸ್ತೆ ವಿಭಜಕದ ಕಬ್ಬಿಣದ ಪೋಲ್‌ಗಳು ಬಹುತೇಕ ಮುರಿದಿವೆ. ಈ ವೃತ್ತಗಳ ಆಸುಪಾಸು ಜನದಟ್ಟಣೆ ಇರುತ್ತದೆ. ರಸ್ತೆ ವಿಭಜಕಗಳ ನಡುವೆ ಏಕಾಏಕಿ ವಾಹನ ದಾಟಿಸುವುದರಿಂದ ಸಂಚಾರಕ್ಕೆ ತೊಡಕಾಗುತ್ತದೆ. ಅಪಘಾತಗಳಿಗೆ ಎಡೆ ಮಾಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು