ದಾಖಲೆ ನಿರ್ಮಿಸಿದ ಇಷ್ಟಲಿಂಗ ಪೂಜೆ

ಸೋಮವಾರ, ಮೇ 27, 2019
21 °C
ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ದರಾಮ ಶಿವಾಚಾರ್ಯ ಮಹಾ ಭಗವತ್ಪಾದರ ನುಡಿ

ದಾಖಲೆ ನಿರ್ಮಿಸಿದ ಇಷ್ಟಲಿಂಗ ಪೂಜೆ

Published:
Updated:
Prajavani

ದೇವದುರ್ಗ: ‘12ನೇ ಶತಮಾನದಲ್ಲಿ ಬಸವಣ್ಣನವರು ಕೈಗೊಂಡಿದ್ದರು ಎನ್ನಲಾದ 1.96 ಲಕ್ಷ ಗಣ ಇಷ್ಟಲಿಂಗ ಪೂಜೆಯ ನಂತರ ಮೂರನೇ ಬಾರಿಗೆ 21ನೇ ಶತಮಾನದಲ್ಲಿ ವೀರಗೋಟದಲ್ಲಿ ನಡೆದಿರುವ ಇಷ್ಟಲಿಂಗ ಪೂಜೆ ಇತಿಹಾಸದ ಪುಟದಲ್ಲಿ ಸೇರ್ಪಡೆಯಾಗಿದೆ’ ಎಂದು ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ದರಾಮ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ತಾಲ್ಲೂಕಿನ ಚಿಂಚೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಗೋಟೆ ಗ್ರಾಮದ ಆದಿ ಮೌನೇಶ್ವರ ತಪಸ್ಸಿನ ಸ್ಥಳ ಆಸನಕಟ್ಟೆಯಲ್ಲಿ ಸೋಮವಾರ ನಡೆದ ಗಣ ಇಷ್ಟ ಲಿಂಗ ಪೂಜೆಯ ಸಾನಿಧ್ಯ ವಹಿಸಿ ಮಾತನಾಡಿದರು.

‘ವೀರಶೈವ ಲಿಂಗಾಯತ ಧರ್ಮಕ್ಕೆ ಇಷ್ಟಲಿಂಗ ಪೂಜೆಯ ಮಹತ್ವ ಇದೆ. ಪೂಜೆಗೆ ನೀರು ಎಷ್ಟು ಮುಖ್ಯವೊ ಅಷ್ಟೇ ನೀನು ಮುಖ್ಯ, ಅಂದರೆ ಇಷ್ಟಲಿಂಗ ಪೂಜೆಯಲ್ಲಿ ನಿನ್ನನ್ನು ನೀನು ಅರಿತು ಲಿಂಗದಲ್ಲಿ ನಿನ್ನ ಧ್ಯಾನವನ್ನು ಇಟ್ಟು ಶಿವನಲ್ಲಿ ಭಕ್ತಿಯಲ್ಲಿ ಕೇಂದ್ರಿಕೃತನಾಗಲು ಇಷ್ಟಲಿಂಗ ಬಹುಮುಖ್ಯವಾಗಿದೆ’ ಎಂದರು.

‘ಪೂಜೆಗೆ ಏನು ಅರ್ಪಿಸುತ್ತೇನೆ ಎನ್ನುವುದು ಮುಖ್ಯವಲ್ಲ. ಪೂಜೆಗೆ ನಾನು ಎಷ್ಟು ನಿಷ್ಠೆ ಮತ್ತು ಭಕ್ತಿಯಿಂದ ಇದ್ದೇನೆ ಎನ್ನುವುದು ಮುಖ್ಯವಾಗಿದೆ’ ಎಂದರು.

‘ಲಿಂಗಧಾರಣೆ ಮಾಡುವುದರಿಂದ ನಮ್ಮ ಪಾಪಗಳು ದೂರವಾಗಿ ನಮಗೆ ಅಂಟಿಕೊಳ್ಳುವ ಪಾಪಗಳನ್ನು ಲಿಂಗವು ರಕ್ಷಣೆ ನೀಡುತ್ತದೆ ಮತ್ತು ಆರೋಗ್ಯವಂತರಾಗಿರುತ್ತಾರೆ. ಸಿದ್ದಗಂಗಾ ಮಠದ ಶಿವಕುಮಾರ ಮಹಾ ಸ್ವಾಮೀಜಿ ಅಷ್ಟು ದಿನಗಳ ಕಾಲ ಬದುಕುವುದಕ್ಕೆ ಅವರಿಗೆ ಇಷ್ಟಲಿಂಗವೇ ಕಾರಣವಾಗಿದೆ. ಅವರು ಎಂದೂ ಇಷ್ಟಲಿಂಗ ಪೂಜೆ ಇಲ್ಲದೆ ಇರುತ್ತಿರಲಿಲ್ಲ ಎಂದರು. 

ಲಿಂಗಧಾರಣೆಗೆ ಮಾಡುವುದಕ್ಕೆ ಯಾವುದೇ ಜಾತಿ ಧರ್ಮದ ಕಟ್ಟೆಳೆಗಳು ಇಲ್ಲ. ಪ್ರತಿಯೊಂದು ಜಾತಿಯವರು ದೇವರ ಸ್ಮರಣೆ ಮಾಡುವುದು ಮತ್ತು ದೇವರಲ್ಲಿ ತನ್ನನ್ನು ಕೇಂದ್ರೀಕರಿಸುವಂಥ ಕಾರ್ಯವಾಗಿರುವ ಲಿಂಗಪೂಜೆಗೆ ಯಾವುದೇ ತಾರತಮ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಾಮಾಜದಲ್ಲಿ ಮಹಿಳೆಯರಿಗೆ ಸ್ಥಾನಮಾನ ನೀಡಿರುವುದು ಯಾವುದಾದರೂ ಧರ್ಮ ಇದ್ದರೆ ಅದು ವೀರಶೈವ ಧರ್ಮವಾಗಿದೆ. 12ನೇ ಶತಮಾನದಲ್ಲಿ ಬಸವಣ್ಣನವರ ಕೈಗೊಂಡ ಇಷ್ಟಲಿಂಗ ಪೂಜೆಯ ನಂತರ ಎರಡನೇ ಬಾರಿಗೆ ಇಂಡಿ ತಾಲ್ಲೂಕು ಲಚ್ಯಾಣದಲ್ಲಿ ಕಳೆದ 50 ವರ್ಷಗಳ ಹಿಂದೆ ನಡೆದಿದ್ದ ಒಂದು ಲಕ್ಷದ ತೊಂಬತ್ತಾರು ಸಾವಿರ ಗಣ ಇಷ್ಟ ಲಿಂಗ ಪೂಜೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ತಾಲ್ಲೂಕಿನ ವೀರಗೋಟದ ಆಸನಕಟ್ಟೆಯಲ್ಲಿ ಮೂರನೇ ಬಾರಿಗೆ ನಡೆಯುತ್ತಿರುವುದು ಸಮಾಜಕ್ಕೆ ದೊಡ್ಡ ಸಂದೇಶವನ್ನು ನೀಡಿದಂತಾಗಿದೆ. ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ಅಡವಿಲಿಂಗ ಮಹಾರಾಜರ ಬೆಂಬಲಕ್ಕೆ ನಿಂತು ಕಾರ್ಯಕ್ರಮ ಯಶಸ್ವಿಗೊಳಿಸಿರುವ ಸಾವಿರಾರು ಜನ ಭಕ್ತಾದಿಗಳಿಗೆ ದೇವರು ಒಳ್ಳೆಯದನ್ನು ಕರುಣಿಸಲಿ ಎಂದರು.

ಆದಿ ಮೌನೇಶ್ವರ ಸಂಸ್ಥಾನದ ಅಡವಿಲಿಂಗ ಮಹಾರಾಜ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೊಟ್ಟರೂ ಸ್ವಾಮಿ ಮಠದ ನಿರಂಜನ ಜಗದ್ಗುರು ಡಾ. ಸಂಗನಬಸವ ಮಹಾ ಸ್ವಮೀಜಿ, ಬಂಥನಾಳದ ವೃಷಭಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳಿಮದ ಆಗಮಿಸಿದ್ದ ನೂರಾರು ಜನ ಮಠಾಧೀಶರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಸಂಸದ ಸಂಗಣ್ಣ ಕರಡಿ, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ, ಶಾಸಕರಾದ ಕೆ. ಶಿವನಗೌಡ ನಾಯಕ, ರಾಜೂಗೌಡ, ಪ್ರತಾಪಗೌಡ, ರಾಜಾ ವೆಂಕಟಪ್ಪ ನಾಯಕ ಇದ್ದರು.

‘ಪಾಪಿಗಳಿಗೆ ತಕ್ಕ ಉತ್ತರ’

ಭಾರತ ದೇಶಕ್ಕೆ ತನ್ನದೇ ಐತಿಹಾಸಿಕ ಹಿನ್ನೆಲೆ ಇದೆ. ಶಾಂತಿಯನ್ನೇ ಜಪಿಸುತ್ತಾ ಬಂದಿರುವ ದೇಶದ ಜನರಿಗೆ ಈಚೆಗೆ ನಡೆದಿರುವ ಯೋಧರ ಹತ್ಯೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಘಟನೆಯನ್ನು ವೇದಿಕೆಯ ಮೂಲಕ ಖಂಡಿಸಲಾಗುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ದರಾಮ ಶಿವಾಚಾರ್ಯ ಮಹಾ ಭಗವತ್ಪಾದರು ಹೇಳಿದರು.

ದೇಶಕ್ಕೆ ಅಗತ್ಯ ಎನಿಸಿದರೆ ಸನ್ಯಾಸಿಗಳು ಮತ್ತು ರೈತರು ಸೈನಿಕರಾಗಲು ಸಿದ್ಧ. ತಾಳ್ಮೆಗೆ ಮಿತಿ ಇರುತ್ತದೆ. ಅದು ಅತಿಯಾದರೆ ಅದಕ್ಕೆ ತಕ್ಕ ಪಾಠ ಕಲಿಸುವುದಕ್ಕೆ ಸರ್ಕಾರ ಹಿಂದೇಟು ಹಾಕಬಾರದು. ದೇಶದ ಜನತೆ ಸರ್ಕಾರದ ಬೆಂಬಲಕ್ಕೆ ನಿಂತುಕೊಳ್ಳಬೇಕು. ಕೇಂದ್ರ ಸರ್ಕಾರ ತನ್ನ ನಿರ್ಧಾರದಲ್ಲಿ ರಾಜೀ ಮಾಡಿಕೊಳ್ಳದಿರಲು ಆಗ್ರಹಿಸುತ್ತೇನೆ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !