ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಳಿ ಬಣ್ಣದ ವೈವಿಧ್ಯದಲ್ಲಿ ಮಿಂದೆದ್ದ ಜನರು

ಬಡಾವಣೆ ಬೀದಿಗಳಲ್ಲಿ ಮಕ್ಕಳು, ಯುವಕರ ಸಂಭ್ರಮ, ಸಡಗರ
Last Updated 21 ಮಾರ್ಚ್ 2019, 13:11 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ಹೋಳಿಹಬ್ಬವನ್ನು ಸಂಭ್ರಮ, ಸಡಗರ ಹಾಗೂ ಹೊಸ ಭರವಸೆಗಳೊಂದಿಗೆ ಗುರುವಾರ ಆಚರಿಸಲಾಯಿತು.

ಬರದ ವಾತಾವರಣ ಹಾಗೂ ಬೇಸಿಗೆ ಬಿಸಿಲಿನ ಮಧ್ಯೆಯೂ ಮಕ್ಕಳು ಮತ್ತು ಯುವಜನಾಂಗ ಬಣ್ಣಗಳ ವೈವಿಧ್ಯದಲ್ಲಿ ಮಿಂದೆದ್ದರು. ಬಡಾವಣೆಯ ಬೀದಿಗಳಲ್ಲಿ ಅಲ್ಲಲ್ಲಿ ನಿಂತಿದ್ದ ಯುವಕರ ಗುಂಪುಗಳು ಉತ್ಸಾಹದ ಚಿಲುಮೆಯಾಗಿದ್ದರು. ಗೆಳೆಯರನ್ನು ಬಣ್ಣದಲ್ಲಿ ಮುಳಗಿಸಿ ಪರಸ್ಪರ ಶುಭಾಶಯ ಕೋರಿದರು. ಮಹಿಳೆಯರು ಹಾಗೂ ಮಧ್ಯವಯಸ್ಸಿನ ಜನರು ಹೋಳಿ ಹಬ್ಬದಲ್ಲಿ ಈ ವರ್ಷ ಗಮನಾರ್ಹವಾಗಿ ಪಾಲ್ಗೊಳ್ಳಲಿಲ್ಲ. ಮಕ್ಕಳ ಸಂಭ್ರಮವನ್ನು ಕಣ್ತುಂಬಿಕೊಂಡು ಮನೆಗಳಲ್ಲಿಯೇ ಪಾಲಕರು ಉಳಿದುಕೊಂಡಿದ್ದರು.

ಈ ವರ್ಷ ಅಪಾಯಕಾರಿ ಬಣ್ಣಗಳ ಬದಲು ನೈಸರ್ಗಿಕ ಬಣ್ಣಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿರುವುದು ಕಂಡುಬಂತು. ಕೆಲವು ಬಡಾವಣೆಗಳಲ್ಲಿ ಎತ್ತರದಲ್ಲಿ ಕಟ್ಟಲಾಗಿದ್ದ ಮಣ್ಣಿನ ಮಡಿಕೆ ಒಡೆಯುವ ಸ್ಪರ್ಧೆಗಳು ನಡೆದವು. ಬಡಾವಣೆಯಿಂದ ಬಡಾವಣೆಗೆ ಬೈಕ್‌ಗಳ ಮೂಲಕ ಸಂಚರಿಸುತ್ತಿದ್ದ ಯುವಕರ ಗುಂಪುಗಳು ಮಧ್ಯಾಹ್ನದವರೆಗೂ ಬಣ್ಣದೋಕುಳಿ ಆಡಿದರು.

ಬರಗಾಲ ಛಾಯೆ: ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ನಿರಂತರ ಬರಗಾಲ ಆವರಿಸಿದೆ. ಈ ಹಿಂದೆ ನಡೆದ ಸಂಭ್ರಮದ ಹೋಳಿಹಬ್ಬಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಸಂಭ್ರಮ ಸಿಮೀತವಾಗಿತ್ತು. ಜನಜೀವನದ ಮೇಲೆ ಬರದ ಛಾಯೆ ದಟ್ಟವಾಗಿ ಆವರಿಸಿಕೊಂಡಿರುವುದು ಸ್ಪಷ್ಟವಾಗಿದೆ.

ಭತ್ತ, ಜೋಳ, ಶೇಂಗಾ ಹಾಗೂ ಹತ್ತಿ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳಬೇಕಿದ್ದ ರೈತರು ಈ ಸಲ ಕೈಕಟ್ಟಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಭಾಗದಲ್ಲಿ ಆವರಿಸಿದ ಆರ್ಥಿಕ ಮುಗ್ಗಟ್ಟು ನಗರದ ವ್ಯಾಪಾರ ವಹಿವಾಟಿನ ಮೇಲೂ ದುಷ್ಪರಿಣಾಮ ಬೀರಿದೆ. ಇದರಿಂದಾಗಿ ಈ ವರ್ಷ ಯಾವುದೇ ಹಬ್ಬಗಳು ಮೊದಲಿನಷ್ಟು ಸಂಭ್ರಮದಿಂದ ಆಚರಿಸಲಾಗುತ್ತಿಲ್ಲ. ಬರಗಾಲದ ಬವಣೆಯು ಹೋಳಿಹಬ್ಬದ ಸಂಭ್ರಮಕ್ಕೆ ಮಂಕು ಕವಿಯುವಂತೆ ಮಾಡಿತು.

ಬಿಸಿಲಿನ ಬೇಗೆ: ಮಾರ್ಚ್‌ನಲ್ಲಿಯೇ ತಾಪಮಾನ ಏರುಗತಿ ಪಡೆದಿರುವುದು ಕೂಡಾ ಹೋಳಿ ಹಬ್ಬದ ಸಂಭ್ರಮವು ಕಡಿಮೆಯಾಗುವಂತೆ ಮಾಡಿತು. ಗುರುವಾರ ಗರಿಷ್ಠ ತಾಪಮಾನ ಶೇ 39 ರಷ್ಟಿತ್ತು. ಬೆಳಿಗ್ಗೆ 7 ಗಂಟೆ ಹೊತ್ತಿಗೆ ಸೂರ್ಯನ ಪ್ರಖರತೆ ಹರಡಿಕೊಂಡಿತ್ತು. ತಾಪಮಾನಕ್ಕೆ ಹೆದರಿ ಅನೇಕ ಜನರು ಬೀದಿಗಳಿಗೆ ಬರಲು ಹಿಂದೇಟು ಹಾಕಿದರು.

ಬಡವ–ಬಲ್ಲಿದ ಎನ್ನುವ ಬೇಧವಿಲ್ಲದೆ ಪ್ರತಿವರ್ಷ ಎಲ್ಲರೂ ಮನೆಗಳ ಎದುರು ಮತ್ತು ಬೀದಿಗಳದ್ದಕ್ಕೂ ಹೋಳಿ ಹಬ್ಬದ ಬಣ್ಣವನ್ನು ಎರಚಿ ಸಂಭ್ರಮಿಸುತ್ತಿದ್ದರು. ಈ ಸಲ ಕೆಲವು ಸಂಘ– ಸಂಸ್ಥೆಗಳು ಮಾತ್ರ ಹೋಳಿ ಆಚರಿಸಲು ವಿಶೇಷ ತಯಾರಿ ಮಾಡಿಕೊಂಡಿದ್ದವು. ಬಡಾವಣೆಯ ಬೀದಿಗಳಲ್ಲಿ ಬಣ್ಣದೋಕುಳಿ ಅಪರೂಪವಾಗಿತ್ತು.

ವ್ಯಾಪಾರವೂ ಇಲ್ಲ: ಹೋಳಿ ಹಬ್ಬದಲ್ಲಿ ಸಾಕಷ್ಟು ಬಣ್ಣ ಮಾರಾಟ ಆಗಬಹುದು ಎನ್ನುವ ವ್ಯಾಪಾರಿಗಳ ನಿರೀಕ್ಷೆ ಸುಳ್ಳಾಯಿತು. ಮಕ್ಕಳೊಂದಿಗೆ ಬಣ್ಣದ ಪೊಟ್ಟಣಗಳನ್ನು ಖರೀದಿಸಿದ ಪಾಲಕರು, ಬಣ್ಣವಾಡಲು ಜೊತೆಯಾಗಲಿಲ್ಲ. ಸಂಗ್ರಹಿಸಿಕೊಂಡಿದ್ದ ಬಣ್ಣ ಹಾಗೂ ಇತರೆ ಸಾಮಗ್ರಿಗಳಲ್ಲಿ ಅರ್ಧದಷ್ಟು ಮಾರಾಟವಾಗಲಿಲ್ಲ ಎನ್ನುವ ನಿರಾಸೆಯ ಮಾತುಗಳನ್ನು ಮಳಿಗೆದಾರರಿಂದ ವ್ಯಕ್ತವಾಯಿತು.

‘ರೈತರು ಚೆನ್ನಾಗಿದ್ದರೆ ಮಾತ್ರ ಇನ್ನುಳಿದವರೆಲ್ಲರೂ ಚೆನ್ನಾಗಿರಲು ಸಾಧ್ಯ.ಹೋಳಿಹಬ್ಬ ಆಚರಿಸುವುದಕ್ಕೆ ಗ್ರಾಮೀಣ ಭಾಗದ ಜನರು ಈ ವರ್ಷ ಅಷ್ಟೊಂದು ಸಾಮಗ್ರಿಗಳನ್ನು ಖರೀದಿಸಿಕೊಂಡು ಹೋಗಿಲ್ಲ. ಗ್ರಾಮಗಳ ಪರಿಣಾಮವೇ ನಗರದ ಮೇಲೆಯೂ ಆಗಿದೆ. ಸಂಭ್ರಮ, ಸಡಗರ ಸಾಕಷ್ಟಿಲ್ಲ. ಈ ವರ್ಷವಾದರೂ ಚೆನ್ನಾಗಿ ಮಳೆ ಬರಬೇಕು. ಅದರಿಂದ ಮಾತ್ರ ಪರಿಸ್ಥಿತಿ ಸುಧಾರಿಸುತ್ತದೆ’ ಎಂದು ಕಿರಣಿ ವ್ಯಾಪಾರಿ ಚಂದ್ರಶೇಖರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT