ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್ಥಿಕ ಸಬಲತೆಗಾಗಿ ಜೇನು ಸಾಕಾಣಿಕೆ’

ಜೇನು ಸಾಕಾಣಿಕೆ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ
Last Updated 12 ನವೆಂಬರ್ 2019, 16:42 IST
ಅಕ್ಷರ ಗಾತ್ರ

ರಾಯಚೂರು: ಅಧುನಿಕ ಜೇನು ಸಾಕಾಣಿಕೆಯು ಪರಿಸರಕ್ಕೆ ಪೂರಕವಾಗಿದ್ದು, ರೈತರು ಜೇನು ಸಾಕಾಣಿಕೆಯಿಂದ ಪೂರಕವಾದ ಆದಾಯವನ್ನು ಪಡೆದು, ಆರ್ಥಿಕವಾಗಿ ಸಬಲರಾಗಬಹುದು ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಬಿ.ಎಂ. ಚಿತಾಪೂರ ತಿಳಿಸಿದರು.

ಜಿಲ್ಲಾ ತೋಟಗಾರಿಕೆ ಇಲಾಖೆ ಹಾಗೂ ರಾಯಚೂರು ಕೃಷಿ ವಿಜ್ಞಾನ ಕೇಂದ್ರದಿಂದ 2019–20 ನೇ ಸಾಲಿನ ತೋಟಗಾರಿಕೆ ಇಲಾಖೆಯ ಮಧುವನ ಮತ್ತು ಜೇನು ಸಾಕಾಣಿಕೆ ಅಭಿವೃದ್ದಿ ಯೋಜನೆಯಡಿಯಲ್ಲಿ ರೈತರಿಗಾಗಿ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತಿಚಿನ ದಿನಗಳಲ್ಲಿ ಜೇನು ಕೃಷಿಗೆ ಪೂರಕವಾದ ವಾತಾವರಣವಿದ್ದು, ಕಡಿಮೆ ಖರ್ಚಿನಲ್ಲಿ ವೈಜ್ಞಾನಿಕವಾಗಿ ಜೇನು ಸಾಕಾಣಿಕೆ ಮಾಡುವುದರಿಂದ ಅಧಿಕ ಲಾಭವಿದೆ. ತೋಟಗಾರಿಕೆ ಇಲಾಖೆಯ ಸಹಾಯ ಸೌಲಭ್ಯವನ್ನು ಪಡೆದುಕೊಂಡು ರೈತರು ಸಸಕ್ತರಾಗುವಂತೆ ಸಲಹೆ ನೀಡಿದರು.

ರಾಯಚೂರು ತಾಲ್ಲೂಕಿನಲ್ಲಿ ತೋಟಗಾರಿಕೆ ಬೆಳೆಗಳಾದ ಮಾವು, ತರಕಾರಿ, ಮೊಸಂಬಿ, ಬೆಳೆಗಳಿದ್ದು ಇವುಗಳಲ್ಲಿ ಜೇನು ಸಾಕಾಣಿಕೆ ಮಾಡಬಹುದಾಗಿದೆ. ಇದಕ್ಕೆ ಇಲಾಖೆಯ ಸಹಾಯಧನ ನೀಡಲಾಗುತ್ತಿದೆ. ಪ್ರತಿ ಫಲಾನುಭವಿಗೆ ಎರಡು ಜೇನು ಪೆಟ್ಟಿಗೆಗಳನ್ನು ಖರೀದಿಸಲು ಅವಕಾಶವಿದೆ. ಶೇ 75 ರಷ್ಟು ಸಹಾಯಧನ ಲಭ್ಯವಿದೆ. ಭೂಮಿ ಹೊಂದಿರುವ ರೈತರು ಹಾಗೂ ನಗರ ಪ್ರದೇಶದ ಹವ್ಯಾಸಿ ಜೇನು ಸಾಕಾಣಿಕೆದಾರರು ಇದರ ಲಾಭ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಮ್ಮದ್ ಅಲೀ ಮಾತನಾಡಿ, ಜೇನು ಸಾಕಾಣಿಕೆ ಮಾಡುವುದರಿಂದ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳಲ್ಲಿ ಇಳುವರಿ ಹೆಚ್ಚಾಗುವುದರ ಜೊತೆಗೆ ರೈತರಿಗೆ ಪೂರಕ ಉದ್ಯೋಗ ದೊರಕುತ್ತದೆ. ಮಧುವನ ಹಾಗೂ ಜೇನು ಸಾಕಾಣಿಕೆಯಲ್ಲಿ ಇಲಾಖೆಯ ಸಹಾಯ ಸೌಲಭ್ಯವನ್ನು ಪಡೆದುಕೊಳ್ಳಲು ತಿಳಿಸಿದರು.

ಜೇನು ಕೃಷಿ ತಜ್ಞ ಡಾ. ಸಂಗಣ್ಣ ಎಂ. ಸಜ್ಜನರ್ ಅವರು ರೈತರಿಗೆ ಜೇನು ಸಾಕಾಣಿಕೆಯ ಕುರಿತು ತಾಂತ್ರಿಕ ಮಾಹಿತಿ ನೀಡಿ, ಜೇನಿನ ತಳಿಗಳು ಸಾಕಾಣಿಕೆ ವಿಧಾನ, ಪರಿಕರಗಳ ಮಾಹಿತಿ ಹಾಗೂ ಪ್ರಾತ್ಯಕ್ಷತೆಯನ್ನು ನೀಡಿ ರೈತರೊಂದಿಗೆ ಜೇನು ಕೃಷಿ ಕುರಿತು ಸಂವಾದ ನಡೆಸಿದರು.

ರಾಯಚೂರು, ದೇವದುರ್ಗ ಹಾಗೂ ಮಾನ್ವಿ ತಾಲ್ಲೂಕುಗಳ ರೈತರು ಭಾಗವಹಿಸಿದ್ದರು.

ರಾಯಚೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಜಿ.ಎಸ್.ಯಡಹಳ್ಳಿ ಸ್ವಾಗತಿಸಿದರು. ಕೀಟ ವಿಜ್ಞಾನಿ ಡಾ. ಶ್ರೀವಾಣಿ ಜೆ.ಎನ್. ಅಕಾಶವಾಣಿ ರಾಯಚೂರು ಕೇಂದ್ರದ ಕೃಷಿ ಕಾರ್ಯಕ್ರಮದ ನಿರ್ವಾಹಕ ಡಾ. ವಿ.ಜಿ ಬಾವಲತ್ತಿ ಇದ್ದರು.

ತೋಟಗಾರಿಕೆ ಇಲಾಖೆಯ ಹಾರ್ಟಿಕ್ಲಿನಿಕ್ ವಿಭಾಗದ ವಿಷಯ ತಜ್ಞ ಅಮರೇಶ ಅಶಿಹಾಳ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT