ಸೋಮವಾರ, ಅಕ್ಟೋಬರ್ 21, 2019
25 °C
₹71 ಕೋಟಿ ಅನುದಾನ ಒದಗಿಸುವಂತೆ ಕೇಂದ್ರಕ್ಕೆ ಮನವಿ

ಆಸ್ಪತ್ರೆಗಳ ಸುಧಾರಣೆಯತ್ತ ರಾಯಚೂರು ಜಿಲ್ಲಾಡಳಿತದ ಚಿತ್ತ

Published:
Updated:
Prajavani

ರಾಯಚೂರು: ಕೇಂದ್ರದ ನೀತಿ ಆಯೋಗವು ಸಿದ್ಧಪಡಿಸಿದ ‘ಮಹತ್ವಾಕಾಂಕ್ಷಿ ಜಿಲ್ಲೆಗಳ ಪಟ್ಟಿ’ಯಲ್ಲಿ ಸ್ಥಾನ ಪಡೆದಿರುವ ರಾಯಚೂರು ಜಿಲ್ಲೆಯಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸಲು ಆರೋಗ್ಯ ಕ್ಷೇತ್ರದಲ್ಲಿ ಸೌಲಭ್ಯಗಳನ್ನು ಒದಗಿಸಬೇಕಿದ್ದು, ಅನುದಾನದ ಅಗತ್ಯವಿದೆ ಎಂದು ಜಿಲ್ಲಾಡಳಿತವು ಕೇಂದ್ರಕ್ಕೆ ಮನವಿ ಮಾಡಿದೆ.

ಜಿಲ್ಲೆಯಲ್ಲಿರುವ ನಾಲ್ಕು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳು ಮತ್ತು ಆರು ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)ಗಳಲ್ಲಿ ಸೌಲಭ್ಯಗಳನ್ನು ಒದಗಿಸಬೇಕಿದೆ. ಪ್ರತಿ ತಾಲ್ಲೂಕು ಆಸ್ಪತ್ರೆಗೆ ₹50 ಸಾವಿರ ವೆಚ್ಚದ ಮೂರು ಹೈಡ್ರಾಲಿಕ್‌ ಹೆರಿಗೆ ಹಾಸಿಗೆ, ₹50 ಸಾವಿರ ವೆಚ್ಚದ ಮೂರು ಬೇಬಿ ವಾರ್ಮರ್, ₹1 ಲಕ್ಷ ವೆಚ್ಚದ ಫೋಟೊ ಥೆರಪಿ, ₹8 ಲಕ್ಷ ವೆಚ್ಚದ 2ಡಿ ಕಲರ್‌ ಡಾಪ್ಲರ್‌, ₹5 ಲಕ್ಷ ವೆಚ್ಚದ ಸಿಬಿಸಿ ಯಂತ್ರ, ₹30 ಲಕ್ಷ ವೆಚ್ಚದ ಎಎಲ್‌ಎಸ್‌ ಅ್ಯಂಬುಲನ್ಸ್‌, ₹5 ಲಕ್ಷ ವೆಚ್ಚದ ಥಾಯರೈಡ್‌ ತಪಾಸಣಾ ಯಂತ್ರ ಸೇರಿದಂತೆ 23 ವಿಧದ ಪರಿಕರಗಳನ್ನು ಒದಗಿಸಬೇಕಿದೆ. ಒಂದು ತಾಲ್ಲೂಕು ಆಸ್ಪತ್ರೆಗೆ ಒಟ್ಟು ₹71.85 ಲಕ್ಷ ಅನುದಾನದ ಅಗತ್ಯವಿದೆ. ನಾಲ್ಕು ತಾಲ್ಲೂಕು ಆಸ್ಪತ್ರೆಗಳಿಗೆ ಒಟ್ಟು ₹2.87 ಕೋಟಿ ಅನುದಾನ ಬೇಕಾಗುತ್ತದೆ.

ಅದೇ ರೀತಿ, ಜಿಲ್ಲೆಯಲ್ಲಿರುವ ಒಟ್ಟು ಆರು ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)ಗಳನ್ನು ಕೂಡಾ ಸುಧಾರಿಸಬೇಕಿದೆ. ಒಂದು ಆಸ್ಪತ್ರೆಗೆ ₹53.65 ಲಕ್ಷ ಅನುದಾನದಲ್ಲಿ 19 ಪರಿಕರಗಳನ್ನು ಖರೀದಿಸಬೇಕಾಗಿದೆ. ಅವುಗಳಲ್ಲಿ ಮುಖ್ಯವಾಗಿ ₹30 ಲಕ್ಷ ವೆಚ್ಚದ ಎಎಲ್‌ಎಸ್‌ ಆ್ಯಂಬುಲೆನ್ಸ್‌, ₹5 ವೆಚ್ಚದ ಯುಎಸ್‌ಜಿ ಸ್ಕ್ಯಾನಿಂಗ್‌ ಯಂತ್ರಗಳು ಪಟ್ಟಿಯಲ್ಲಿವೆ.

₹71 ಕೋಟಿ ಬೇಡಿಕೆ: ಜಿಲ್ಲೆಯ ಸುಸ್ಥಿರ ಅಭಿವೃದ್ಧಿಗಾಗಿ ಆರೋಗ್ಯ, ಪೌಷ್ಟಿಕ ಆಹಾರ, ಶಿಕ್ಷಣ, ಕೌಶಲ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಸುಧಾರಣಾ ಕ್ರಮಗಳನ್ನು ಜರುಗಿಸಬೇಕಿದೆ. ಇದಕ್ಕಾಗಿ ಆರೋಗ್ಯ ಕ್ಷೇತ್ರಕ್ಕಾಗಿ ₹7 ಕೋಟಿ ಅನುದಾನ ಸೇರಿದಂತೆ ಒಟ್ಟು ₹71 ಕೋಟಿ ಅನುದಾನದ ನೆರವನ್ನು ಜಿಲ್ಲೆಗೆ ಒದಗಿಸುವುದಕ್ಕೆ ಸೂಕ್ತ ಕ್ರಮ ವಹಿಸುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದಗೌಡರಿಗೆ ಈಚೆಗೆ ಮನವಿ ಸಲ್ಲಿಸಲಾಗಿದೆ.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಈಚೆಗೆ ಏರ್ಪಡಿಸಿದ್ದ ‘ಮಹತ್ವಾಕಾಂಕ್ಷಿ ಜಿಲ್ಲೆಗಳ ಅಭಿವೃದ್ಧಿಗಾಗಿ ತಾಂತ್ರಿಕ ನೆರವು’ ಕುರಿತ ಕಾರ್ಯಾಗಾರದಲ್ಲಿ ಹಲವು ಯೋಜನೆ ಸಿದ್ಧಪಡಿಸಲಾಗಿದೆ. ಈ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಕಂಪೆನಿಗಳ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ಅನುದಾನ ಪಡೆಯುವ ಬಗ್ಗೆ ರಾಜ್ಯ ಯೋಜನಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರ ನೇತೃತ್ವದಲ್ಲಿ ರೂಪುರೇಷೆಯನ್ನು ಅಧಿಕಾರಿಗಳು ಮಾಡಿಕೊಂಡಿದ್ದಾರೆ.

Post Comments (+)