ಭಾನುವಾರ, ನವೆಂಬರ್ 27, 2022
20 °C

ಐಸಿಸಿ ಸಭೆಯ ನಿರ್ಣಯ ಮರುಪರಿಶೀಲಿಸಿ: ಚಾಮರಸ ಮಾಲಿಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೊಪ್ಪಳದ ಮುನಿರಾಬಾದ್‌ನಲ್ಲಿ ಬುಧವಾರ ನಡೆದ ನೀರಾವರಿ ಸಲಹಾ ಸಮಿತಿಯ (ಐಸಿಸಿ) ಸಭೆಯಲ್ಲಿ ರೈತ ಮುಖಂಡರನ್ನು, ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಹೊರಗಿಟ್ಟು ಸಭೆ ಮಾಡಿ ರೈತ ವಿರೋಧಿ ನಿರ್ಣಯ ಕೈಗೊಂಡಿದ್ದು ಮರುಪರಿಶೀಲನೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಒತ್ತಾಯಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಶಾಸಕರು, ಸಂಸದರು ನಡೆಸಿದ್ದಾರೆ. ಸಭೆಯ ತೀರ್ಮಾನದಂತೆ ನವೆಂಬರ್ 23ರಿಂದ ಡಿಸೆಂಬರ್ 12ರವರೆಗೆ ನೀರಾವರಿಗೆ ನೀರು ಸ್ಥಗತಗೊಳಿಸಲು ನಿರ್ಣಯಿಸಿದ್ದು ಖಂಡನೀಯ. 19 ದಿನಗಳ ಕಾಲ ನೀರು ಇಲ್ಲದ ಕಾರಣ ನೀರಾವರಿ ವ್ಯಾಪ್ತಿಯಲ್ಲಿ ಸಕಾಲಕ್ಕೆ ಮೆಣಸಿನಕಾಯಿ ಬೆಳೆಗೆ ನೀರು ಸಿಗದೇ ಒಣಗುವ ಸಂಭವವಿದೆ. ಲಿಂಗಸೂಗೂರು ಹಾಗೂ ದೇವದುರ್ಗ ತಾಲ್ಲೂಕಿನಲ್ಲಿ ಹೆಚ್ಚು ಮೆಣಸಿನಕಾಯಿ ಬೆಳೆಯಲಾಗಿದ್ದು ಬೆಳೆಗೆ ನೀರಿನ ಹೆಚ್ಚು ಅಗತ್ಯವಿದೆ ಎಂದು ಹೇಳಿದರು.  

ತಕ್ಷಣವೇ ಐಸಿಸಿ ಸಭೆಯ ನಿರ್ಣಯ ಮರುಪರಿಶೀಲಿಸಿ ಮತ್ತೊಮ್ಮೆ ರೈತ ಮುಖಂಡರ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ವಸ್ತುಸ್ಥಿತಿಯ ಮೇಲೆ ನಿರ್ಣಯ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮೂರು ದಿನಗಳ ನಂತರ ದೇವದುರ್ಗದಲ್ಲಿ ಬೃಹತ್ ಮಟ್ಟದ ಹೋರಾಟ ನಡೆಸಲು ತೀರ್ಮಾನಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಭತ್ತ ಬೆಳೆದ ರೈತರಿಗೆ ಭದ್ರತೆಯಿಲ್ಲ. ಮಧ್ಯವರ್ತಿಗಳು(ಬ್ರೋಕರ್ಸ್)ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಿಸದೇ ಕಡಿಮೆ ದರದಲ್ಲಿ ಮಾರಾಟ ಮಾಡಿಸಿ ಕಮಿಶನ್ ಪಡೆಯುತ್ತಿದ್ದಾರೆ. ಬಿಳಿ ಚೀಟಿಯ ಮೇಲೆ ವ್ಯವಹಾರ ನಡೆಯುತ್ತಿದ್ದು ರೈತರಿಗೆ ವಂಚನೆ ಹೆಚ್ಚಾಗುತ್ತಿದೆ. ಕೂಡಲೇ ಜಿಲ್ಲಾಡಳಿತದಿಂದ ಮಧ್ಯವರ್ತಿಗಳ, ರೈತರ ಹಾಗೂ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ ಶಿಸ್ತುಬದ್ಧ ವ್ಯಾ‍ಪಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ, ಸಂಜೀವಗೌಡ, ರಮೇಶ, ಮಲ್ಲಯ್ಯ ಪುಜಾರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು