ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾರ್ಥ ತೆಗೆದಿಟ್ಟರೆ ಪ್ರಗತಿ ಸಾಧ್ಯ: ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ

ಸೌಹಾರ್ದ ಸಹಕಾರಿ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಆಡಳಿತ ತರಬೇತಿ
Last Updated 28 ಜನವರಿ 2020, 12:24 IST
ಅಕ್ಷರ ಗಾತ್ರ

ರಾಯಚೂರು: ಸಹಕಾರಿ ಸಂಸ್ಥೆಗಳಲ್ಲಿ ಜವಾಬ್ದಾರಿ ಸ್ಥಾನ ವಹಿಸಿಕೊಂಡವರು ಸ್ವಾರ್ಥವನ್ನು ತೆಗೆದಿರಿಸಿದರೆ ಖಂಡಿತವಾಗಿಯೂ ಪ್ರಗತಿ ಸಾಧ್ಯವಾಗುತ್ತದೆ ಎಂದು ಮಾನ್ವಿ ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ಕೃಷಿ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸೌಹಾರ್ದ ಸಹಕಾರಿ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಆಡಳಿತ ತರಬೇತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಯಾವುದೇ ಕಾರಣಕ್ಕೂ ಹೂಡಿಕೆದಾರರು ಸಹಕಾರಿ ಪದಾಧಿಕಾರಿಗಳ ಮೇಲೆ ಸಂಶಯ ಪಟ್ಟುಕೊಳ್ಳಬಾರದು. ಸಹಕಾರದಲ್ಲಿ ನಿರ್ವಹಣೆ ಸಮಸ್ಯೆ ಉಂಟಾದಾಗ ಮಾತ್ರ ಅಭಿವೃದ್ಧಿ ಕುಂಠಿತಗೊಂಡು ನಷ್ಟ ಅನುಭವಿಸಬೇಕಾಗುತ್ತದೆ. ಆಡಳಿತಾತ್ಮಕ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಸಿಂಧನೂರಿನ ಸಿಂಧು ಕ್ರೆಡಿಟ್ ಸೌಹಾರ್ದ ಸಹಕಾರಿ ಅಧ್ಯಕ್ಷ ರಾಜಶೇಖರ್ ಬಿ.ಮಾತನಾಡಿ, ಕಾಲಕ್ಕೆ ತಕ್ಕಂತೆ ಸೌಹಾರ್ದ ಸಹಕಾರಿ ಸಂಸ್ಥೆಗಳ ಮುಖ್ಯಸ್ಥರು ಹೊಸ ಕಾಯಿದೆಗಳನ್ನು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ಸಂಸ್ಥೆಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದರು.

ಸೌಹಾರ್ದ ಸಹಕಾರಿಗಳಲ್ಲಿ ಸದ್ಯ ಮುಖ್ಯವಾಗಿ ಸಂವಹನ ಸಮಸ್ಯೆ ಕಾಡುತ್ತಿದೆ. ಆಡಳಿತದ ಬಗ್ಗೆ ಕೊನೆಯ ವ್ಯಕ್ತಿಗೆ ಮಾಹಿತಿ ಸಿಗುವುದೇ ಕಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರು ಎಲ್ಲವನ್ನು ತಿಳಿದುಕೊಂಡಿದ್ದರೆ, ಸುಲಭವಾಗಿ ಸಮಸ್ಯೆ ಪರಿಹಾರ ಮಾಡಬಹುದಾಗಿದೆ. ಇದಕ್ಕಾಗಿ ಇಂತಹ ತರಬೇತಿ ಅಗತ್ಯವಾಗಿದೆ ಎಂದು ತಿಳಿಸಿದರು.

ಎಂತಹದ್ದೆ ಬಲಿಷ್ಠ ಸಂಸ್ಥೆಯಾಗಿದ್ದರೂ ಲೆಕ್ಕಪತ್ರಗಳನ್ನು ನಿಭಾಯಿಸಲು ಹೊಸ ಕಾನೂನು ಕ್ರಮಗಳನ್ನು ಅನುಸರಿಸದಿದ್ದರೆ ಆದಾಯ ತೆರಿಗೆ ಸಮಸ್ಯೆ ಎದುರಾಗುತ್ತದೆ. ಕೆಲವು ಸೌಹಾರ್ದ ಸಂಸ್ಥೆಗಳಲ್ಲಿ ಲೋಪಗಳಿದ್ದು, ಅವುಗಳಿಂದಾಗಿ ಇತರರಿಗೂಉ ಸಮಸ್ಯೆ ಆಗುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ನಿರ್ದೇಶಕ ತಿಮ್ಮಯ್ಯ ಶೆಟ್ಟಿ ಮಾತನಾಡಿ, ನಮಗೆ ವಹಿಸಿದ ಜವಾಬ್ದಾರಿ ನಿಭಾಯಿಸುವುದಷ್ಟೇ ಕೆಲಸ. ಬೈಲಾ ಓದದೆ ಯಾವುದೇ ಕೆಲಸ ಮಾಡಬಾರದು. ಕಾನೂನು ಸರಿಯಾಗಿ ಪಾಲಿಸದ ಕಾರಣ ಅನೇಕ ಸಂಸ್ಥೆಗಳು ನಷ್ಟಕ್ಕೆ ಸಿಲುಕಿವೆ ಎಂದರು.

ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಜಿಲ್ಲಾ ಕೇಂದ್ರ ಸಹಕಾರಿ ನಿರ್ದೇಶಕ ವಿಶ್ವನಾಥ ಪಾಟೀಲ ತೋರಣದಿನ್ನಿ, ಕಲಬುರ್ಗಿ ಪ್ರಾಂತೀಯ ವ್ಯವಸ್ಥಾಪಕ ರಾಜಶೇಖರ್ ಎಚ್., ಜಿಲ್ಲಾ ಸಂಯೋಜಕ ವೆಂಕಟೇಶ ರಾಠೋಡ, ಡಾ.ಡಿ.ಎಂ.ಚಂದರಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT