ಶುಕ್ರವಾರ, ಜನವರಿ 28, 2022
25 °C
ಜಿಲ್ಲಾಡಳಿತದ ವಿರುದ್ಧ ಪ್ರಗತಿಪರ ಸಂಘಟನೆಗಳ

ಪಡಿತರ ಅಕ್ಕಿ ಅಕ್ರಮ ಮಾರಾಟ: ಕಡಿವಾಣಕ್ಕೆ ವಿಫಲ- ಹೋರಾಟಕ್ಕೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನ್ವಿ: ‘ಜಿಲ್ಲೆಯಾದ್ಯಂತ ನಡೆಯುತ್ತಿರುವ ಪಡಿತರ ಅಕ್ಕಿ ಅಕ್ರಮ ಮಾರಾಟ ದಂಧೆಗೆ ಕಡಿವಾಣ ಹಾಕುವಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಅಂಬಣ್ಣ ಅರೋಲಿಕರ್ ದೂರಿದರು.

ಗುರುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಪ್ರಭಾವಿ ವ್ಯಕ್ತಿಗಳು ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ. ಈ ಅಕ್ರಮದ ಕುರಿತು ಪ್ರಶ್ನಿಸುವವರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಲಾಗುತ್ತಿದೆ. ಈ ಕುರಿತು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇಂತಹ ಕಳ್ಳ ದಂಧೆಯಲ್ಲಿ ಶಾಮೀಲಾಗಿರುವ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಮಾನ್ವಿ ಪಟ್ಟಣದಲ್ಲಿ ಕಳೆದ ತಿಂಗಳು ಅ.28ರಂದು ಅಕ್ಕಿ ಲಾರಿ ಕುರಿತು ಮಾಹಿತಿ ಕೊಟ್ಟಿದ್ದಕ್ಕೆ ಜನಪರ ಸಂಘಟನೆ ಮುಖಂಡ ಬಸವರಾಜ ನಕ್ಕುಂದಿ ಅವರ ಮೇಲೆ ಮಾರಣಾಂತಕ ಹಲ್ಲೆ ಮಾಡಲಾಗಿದೆ. ಕೆಲವು ಸಂಘಟನೆಯ ಮುಖಂಡರ ಮೇಲೆ ದೂರು ದಾಖಲಿಸಲಾಗಿದೆ. ಮಾನ್ವಿಯಲ್ಲಿ ಅಕ್ರಮ ಅಕ್ಕಿ ಸಾಗಣೆಯಲ್ಲಿ ತೊಡಗಿರುವ ಆಲ್ದಾಳ್ ವೀರಭದ್ರಪ್ಪ ಅವರನ್ನು ಬಂಧಿಸಿ ಗಡಿಪಾರು ಮಾಡಬೇಕು. ಸಂಘಟಕರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದುಪಡಿಸಬೇಕು. ಅಕ್ರಮ ಅಕ್ಕಿ ಮಾರಾಟ ದಂಧೆಗೆ ಕಡಿವಾಣ ಹಾಕಬೇಕು. 15 ದಿನಗಳ ಒಳಗೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮಾನ್ವಿಯಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಜೆ.ಬಿ.ರಾಜು, ರವಿಂದ್ರನಾಥ ಪಟ್ಟಿ, ಎಂ.ಆರ್.ಬೇರಿ, ರಾಘವೇಂದ್ರ, ಶ್ರೀನಿವಾಸ್, ಪ್ರಭುರಾಜ್ ಕೊಡ್ಲಿ, ಸುಂದರ್ ಕಪಗಲ್, ಯಲ್ಲಪ್ಪ ಬಾದರದಿನ್ನಿ, ಹನುಮಂತ ಕೋಟೆ, ಮರಿಸ್ವಾಮಿ, ಎಂ.ವಸಂತಕುಮರ, ಯೇಸು, ಪ್ರದೀಪ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು