ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನಾತಕೋತ್ತರ ಆಯುರ್ವೇದ ಶಿಕ್ಷಣ ತಿದ್ದುಪಡಿ ಅಧಿಸೂಚನೆ ಹಿಂಪಡೆಯಲು ಒತ್ತಾಯ

Last Updated 3 ಫೆಬ್ರುವರಿ 2021, 13:06 IST
ಅಕ್ಷರ ಗಾತ್ರ

ರಾಯಚೂರು: ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಷಿನ್( ಸಿಸಿಐಎಂ) ನಡೆಯಿಂದ ದೇಶದ ಆಧುನಿಕ ವೈದ್ಯಕೀಯ ವೃತ್ತಿ ಸಂಕಷ್ಟಕ್ಕೆ ಒಳಗಾಗಿದೆ. ಸ್ನಾತಕೋತ್ತರ ಆಯುರ್ವೇದ ಶಿಕ್ಷಣ ತಿದ್ದುಪಡಿ ನಿಯಾಮಾವಳಿಗಳ ಅಧಿಸೂಚನೆ ಹಿಂಪಡೆಯಬೇಕು ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಆನಂತರ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಸಿಸಿಐಎಂ ಅಧಿಸೂಚನೆ ಪ್ರಕಾರ ಎಂಎಸ್ ಶಲ್ಯತಂತ್ರ, ಎಂಎಸ್ ಶಾಲಕ್ಯ ತಂತ್ರ ಎಂಬ ಸ್ನಾತಕೋತ್ತರ ಕೋರ್ಸ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಈ ಎರಡು ವಿಷಯಗಳಲ್ಲಿ ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳ ದೀರ್ಘ ಪಟ್ಟಿಯನ್ನು ಸೇರಿಸಲಾಗಿದೆ.

ಆಗಿನ ಭಾರತೀಯ ವೈದ್ಯಕೀಯ ಮಂಡಳಿಯ ಶಿಫಾರಸಿನಂತೆ ಎಲ್ಲಾ ಶಸ್ತ್ರಚಿಕಿತ್ಸೆಗಳು ಆಧುನಿಕ ವೈದ್ಯಕೀಯ ಶಾಸ್ತ್ರದ ಪರಿಮಿತಿಯೊಳಗೆ ಬರುತ್ತವೆ. ಆಧುನಿಕ ಬೆಳವಣಿಗೆಗಳು ಮನಕುಲದ ಒಂದು ಸಾಮಾನ್ಯ ಪರಂಪರೆಯಾಗಿದ್ದರಿಂದ ಈ ಎಲ್ಲಾ ಶಸ್ತ್ರ ಚಿಕಿತ್ಸೆಗಳನ್ನು ಆಯುರ್ವೇದದಲ್ಲಿ ಸೇರಿಸಬಹುದು ಎಂದು ಆಯುಷ್ ಸಚಿವಾಲಯದ ಸ್ಪಷ್ಟನೆ ನೀಡುತ್ತಿರುವುದು ವಿಚಿತ್ರವಾಗಿದೆ ಎಂದು ಆರೋಪಿಸಿದರು.

ದೇಶದ 600 ವೈದ್ಯಕೀಯ ಕಾಲೇಜುಗಳಿಂದ 2030ರ ವೇಳೆಗೆ ಖಿಚಡಿ ವೈದ್ಯಕೀಯ ಪದ್ದತಿಯ ಹೈಬ್ರೀಡ್ ವೈದ್ಯರು ಹೊರಬರುವ ನಿರೀಕ್ಷೆ ಇದೆ. ಇದು ಬರಿ ವೃತ್ತಿಯ ವಿಷಯವಲ್ಲ. ಆರೋಗ್ಯ ರಕ್ಷಣಾ ಮತ್ತು ವಿತರಣಾ ವ್ಯವಸ್ಥೆಯ ಮೇಲೆ ಗಂಭೀರವಾದ ದುಷ್ಪರಿಣಾಮ ಉಂಟು ಮಾಡುತ್ತದೆ. ಅಲ್ಲದೇ ರೋಗಿಗಳ ರಕ್ಷಣಾ ಮಾಪನ ಬದಲಾಗಲಿದೆ. ಇದನ್ನು ಅರಿಯುವ ಹಕ್ಕು ದೇಶದ ಪ್ರಜೆಗಳಿಗೆ ಇದೆ. ಈ ಅಧಿಸೂಚನೆಯಿಂದಾಗಿ ತನಗಿಷ್ಟವಾದ ಔಷಧ ಪದ್ದತಿಯನ್ನು ಆಯ್ಕೆ ಮಾಡಿಕೊಳ್ಳುವ ರೋಗಿಯ ಹಕ್ಕು ಕಸಿಯಲಾಗುತ್ತಿದೆ. ಎಲ್ಲಾ ವ್ಯವಸ್ಥೆಗಳನ್ನು ಮಿಶ್ರಗೊಳಿಸುವ ಅರ್ಥಹೀನ ಪ್ರಯತ್ನ ಆಯುಷ್ ಸಚಿವಾಲಯವಾಲಯದ್ದಾಗಿದೆ.ಇದರ ವಿರುದ್ಧ ದೀರ್ಘಕಾಲಿನ ಹೋರಾಟಕ್ಕಾಗಿ ವೈದ್ಯಕೀಯ ಸಂಘ ಸಿದ್ದವಾಗಿದೆ ಎಂದು ತಿಳಿಸಿದರು.

ಈ ಹಿಂದೆ ವೈದ್ಯಕೀಯ ಸಂಘದಿಂದ ಕಪ್ಪುಪಟ್ಟಿ ಧರಿಸಿ ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಫೆಬ್ರುವರಿ 1ರಿಂದ 14ರವರೆಗೆ ದೇಶದಾದ್ಯಂತ ಸರಣಿ ಉಪವಾಸ ಸತ್ಯಗ್ರಹ ಹಮ್ಮಿಕೊಂಡಿದ್ದು ರಾಜ್ಯ ಶಾಖೆಯಿಂದ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ ಎಂದು ತಿಳಿಸಿದರು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಕೆ. ರಾಮಪ್ಪ, ಗೌರವ ಕಾರ್ಯದರ್ಶಿ ಡಾ. ನಾಗರಾಜ ಭಾಲ್ಕಿ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT