ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು: ಆರೋಪಿಗಳ ಪತ್ತೆಗೆ ಒತ್ತಡ

ವಿವಿಧೆಡೆ ಸಂಘ–ಸಂಸ್ಥೆಗಳಿಂದ ಪ್ರತಿಭಟನೆ, ಸಾಮಾಜಿಕ ಜಾಲತಾಣದಲ್ಲೂ ಚರ್ಚೆ
Last Updated 20 ಏಪ್ರಿಲ್ 2019, 18:30 IST
ಅಕ್ಷರ ಗಾತ್ರ

ರಾಯಚೂರು: ನಗರದಲ್ಲಿ ಈಚೆಗೆ ನಡೆದ ಎಂಜಿನಿಯರಿಂಗ್‌ ವಿದ್ಯಾರ್ಥಿನಿಯ ಶಂಕಿತ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲು ಒತ್ತಡ ಹೆಚ್ಚಾಗಿದ್ದು, ಶನಿವಾರವೂ ವಿವಿಧ ವಿದ್ಯಾರ್ಥಿ ಸಂಘಟನೆಗಳು, ಸಂಘ–ಸಂಸ್ಥೆಗಳು ಪ್ರತಿಭಟನೆ ನಡೆಸಿದವು.

ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ, ನಿರ್ದೇಶಕ ಯೋಗರಾಜ್‌ ಭಟ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್‌ ವಿದ್ಯಾರ್ಥಿನಿಯ ಮನೆಗೆ ತೆರಳಿ ಪೋಷಕರಿಗೆ ಸಾಂತ್ವನ ಹೇಳಿದರು.

ಬೆಂಗಳೂರಿನಿಂದ ಬಂದಿದ್ದ ಸತ್ಯಶೋಧನಾ ತಂಡದ ಸದಸ್ಯರು, ಮಾನವ ಹಕ್ಕುಗಳ ಸಂಘದ ಸದಸ್ಯರು ಹಾಗೂ ಜನಶಕ್ತಿ ಮಹಿಳಾ ಸಂಘಟನೆ ಸದಸ್ಯರು ನಗರದಲ್ಲಿ ಬಳ್ಳಾರಿ ವಲಯದ ಐಜಿಪಿ ಎಂ.ನಂಜುಂಡಸ್ವಾಮಿ ಅವರನ್ನು ಭೇಟಿ ಮಾಡಿ ಸಮಗ್ರ ತನಿಖೆಗೆ ಒತ್ತಾಯಿಸಿದರು.

ಶಕ್ತಿನಗರದಲ್ಲಿ ವಿವಿಧ ಸಂಘ–ಸಂಸ್ಥೆಗಳ ಸದಸ್ಯರು ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್‌ ಮಾಡಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದರು. ಸಿರವಾರದಲ್ಲಿ ವಿದ್ಯಾರ್ಥಿಗಳು ಮೇಣದಬತ್ತಿ ಬೆಳಗಿಸಿ ಮೃತಳ ಆತ್ಮಕ್ಕೆ ಶಾಂತಿ ಕೋರಿದರು.

ಪಾಲಕರ ದೂರು ಆಧರಿಸಿ ಪೊಲೀಸರು ಕೂಡಲೇ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಶೋಧ ಮಾಡಬೇಕು ಎಂದು ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್‌ಒ ಸಂಘಟನೆಗಳು ಒತ್ತಾಯಿಸಿದವು.

ಸ್ಥಳ ಸಾಕ್ಷಿ ಆಧರಿಸಿ ತನಿಖೆ: ‘ವಿದ್ಯಾರ್ಥಿನಿಯ ಶಂಕಿತ ಆತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಸ್ಥಳದಲ್ಲಿ ಸಿಕ್ಕಿರುವ ಸಾಕ್ಷ್ಯಗಳನ್ನು ಆಧರಿಸಿ ಹಲವು ಆಯಾಮಗಳಲ್ಲಿ ತನಿಖೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಹೇಳಿದರು.

‘ಎಫ್‌ಐಆರ್‌ ದಾಖಲಿಸಿಕೊಂಡು ಶಂಕಿತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರ ಮಾಡಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಸತ್ಯಾಂಶ ಹೊರ ಬರಲಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮರಣೋತ್ತರ ಪರೀಕ್ಷಾ ವರದಿ ಮತ್ತು ಡೆತ್‌ನೋಟ್‌ನ ವಿಧಿವಿಜ್ಞಾನ ವರದಿ (ಎಫ್‌ಎಸ್‌ಎಲ್‌) ಇನ್ನೂ ಬರಬೇಕಿದೆ. ಮೃತಳ ಮನೆ ಇರುವ ಬಡಾವಣೆ, ಕಾಲೇಜು ಆವರಣದ ಸಿಸಿಟಿವಿಗಳು ಮತ್ತು ಮೊಬೈಲ್‌ ಕರೆಗಳ ಮಾಹಿತಿ ಕಲೆ ಹಾಕಿ ತನಿಖೆ ಮಾಡಲಾಗುತ್ತಿದೆ’ ಎಂದರು.

‘ಪ್ರಕಟಿಸಬೇಡಿ’: ಇಂತಹ ಪ್ರಕರಣಗಳಲ್ಲಿ ಮೃತಳ, ಸಂಬಂಧಿಕರು ಹಾಗೂ ಸಂಸ್ಥೆಯ ಹೆಸರು ಪ್ರಕಟಿಸಬಾರದು ಎನ್ನುವುದು ಕಾನೂನಾತ್ಮಕ ಮತ್ತು ನೈತಿಕತೆಯಿಂದ ಕೂಡಿದ ವಿಚಾರ. ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಊಹಾಪೋಹದ ವಿಚಾರಗಳು ಹರಿದಾಡುತ್ತಿವೆ. ಈ ತಪ್ಪನ್ನು ಜವಾಬ್ದಾರಿಯುತ ಮಾಧ್ಯಮಗಳು ಮಾಡಬಾರದು ಎಂದು ಬಳ್ಳಾರಿ ವಲಯದ ಐಜಿಪಿ ಎಂ.ನಂಜುಂಡಸ್ವಾಮಿ ಮನವಿ ಮಾಡಿದರು.

ಪಾಲಕರ ಆಗ್ರಹ:‘ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವಳನ್ನು ಕೊಲೆ ಮಾಡಲಾಗಿದೆ. ಪೊಲೀಸರು ಆರೋಪಿಗಳನ್ನು ಹುಡುಕಿ ಶಿಕ್ಷೆ ಕೊಡಿಸಬೇಕು’ ಎಂದು ವಿದ್ಯಾರ್ಥಿನಿಯ ಪಾಲಕರು ಕಣ್ಣೀರು ಹಾಕಿದರು.

ವಿಶ್ವಕರ್ಮ ಸಮಾಜ ಸಂಘಟನೆಯ ನೇತೃತ್ವದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಮಗಳ ಸಾವಿನ ಬಗ್ಗೆ ಹಲವು ಅನುಮಾನಗಳಿವೆ. ಪೊಲೀಸರು ಬಂಧಿಸಿರುವ ಸುದರ್ಶನ್‌ ಯಾದವ್‌ ಹಲವು ತಿಂಗಳುಗಳಿಂದ ತೊಂದರೆ ಕೊಡುತ್ತಿದ್ದ ಎಂಬುದು ಈಗ ಗೊತ್ತಾಗಿದೆ. ಆತನ ಮಾವನ ಮೂಲಕ ನಮ್ಮ ಮಗಳ ಸ್ಕೂಟರ್‌ ಮತ್ತು ಮೊಬೈಲ್‌ ಸಿಕ್ಕಿವೆ. ಈ ಬಗ್ಗೆಯೂ ತನಿಖೆ ಮಾಡಬೇಕು’ ಎಂದು ಆಗ್ರಹಿಸಿದರು.

ಆತ್ಮಹತ್ಯೆ ಎಂದು ದಿಕ್ಕುತಪ್ಪಿಸಲು ಯತ್ನ
ಬೆಂಗಳೂರು: ‘ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿ ನಗರದ ಕಾಲೇಜು ವಿದ್ಯಾರ್ಥಿಗಳು ಹಾಗೂಉದ್ಯೋಗಸ್ಥ ಯುವತಿಯರು ಶನಿವಾರ ಪ್ರತಿಭಟನೆ ನಡೆಸಿದರು.

‘ಆಲ್‌ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್‌), ಆಲ್‌ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ಮತ್ತು ಆಲ್‌ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಟಿವೈಒ) ಸಂಘಟನೆಗಳ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಸೇರಿದ್ದ ಪ್ರತಿಭಟನಾಕಾರರು, ‘ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸಿ’ ಎಂದು ಘೋಷಣೆ ಕೂಗಿದರು.

‘ವಿದ್ಯಾರ್ಥಿನಿಯನ್ನು ಬಲವಂತವಾಗಿ ಕರೆದೊಯ್ದಿದ್ದ ಆರೋಪಿಗಳು ಕೊಲೆ ಮಾಡಿರುವ ಸಾಧ್ಯತೆ ಇದೆ. ಕೊಲೆ ವಿಷಯವನ್ನು ಮುಚ್ಚಿಡಲು ನೇಣು ಹಾಕಿರುವ ಅನುಮಾನವಿದೆ. ಈ ಸಾವು ನಿರ್ಭಯ ಪ್ರಕರಣ ಹೋಲುವಂತಿದೆ. ಈ ಘಟನೆಯಿಂದ ಇಡೀ ರಾಯಚೂರಿನ ಮಹಿಳೆಯರಲ್ಲಿ ಭಯ ಉಂಟಾಗಿದೆ’ ಎಂದು ಪ್ರತಿಭಟನಾಕಾರರು ಹೇಳಿದರು.

ಮೌನ ಪ್ರತಿಭಟನೆ: ವಿದ್ಯಾರ್ಥಿನಿ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಮೌನ ಪ್ರತಿಭಟನೆ ನಡೆಸಿದರು.

ಪ್ರಕರಣ ಸಿಐಡಿ ತನಿಖೆಗೆ ವರ್ಗ
ವಿದ್ಯಾರ್ಥಿನಿ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಡಿಜಿಪಿ ನೀಲಮಣಿ ರಾಜು ಶನಿವಾರ ಆದೇಶಿಸಿದ್ದಾರೆ. ವಿದ್ಯಾರ್ಥಿನಿಯ ಪೋಷಕರು ಶುಕ್ರವಾರ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ತಮಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು.

ಆ ಕೋರಿಕೆಗೆ ಸ್ಪಂದಿಸಿದ್ದ ಸಿದ್ದರಾಮಯ್ಯ, ಕೂಡಲೇ ಗೃಹಸಚಿವ ಎಂ.ಬಿ.ಪಾಟೀಲ ಅವರನ್ನು ಸಂಪರ್ಕಿಸಿ ‘ಪ್ರಕರಣವನ್ನು ಸಿಐಡಿಗೆ ವಹಿಸುವುದು ಸೂಕ್ತ’ ಎಂಬ ಸಲಹೆ ಕೊಟ್ಟಿದ್ದರು. ಅದಕ್ಕೆ ಒಪ್ಪಿದ ಸಚಿವರು, ಶನಿವಾರ ಡಿಜಿಪಿ ಮೂಲಕ ಆದೇಶ ಹೊರಡಿಸಿದ್ದಾರೆ.

ದರ್ಶನ, ಯೋಗರಾಜ್‌ ಭಟ್‌ ಟ್ವೀಟ್‌
‘ಅನುಮಾನಸ್ಪದ ಸಾವಿನ ತನಿಖೆ ಶೀಘ್ರ ನಡೆಸಬೇಕು. ಕೃತ್ಯ ಎಸಗಿರುವ ಕೀಚಕರಿಗೆ ಕಾನೂನು ಬದ್ಧ ತಕ್ಕಶಾಸ್ತಿ ಮಾಡಬೇಕು’
-ದರ್ಶನ್,ಚಿತ್ರನಟ

**

‘ವಿಕೃತನ ಕೆಲಸಕ್ಕೆ ಹೂವೊಂದು ಸುಟ್ಟು ಹೋಗಿದೆ. ಎಲ್ಲ ಕಡೆಗೂ ಮರುಕ ಮಡುಗಟ್ಟಿದೆ’
-ಯೋಗರಾಜ್‌ ಭಟ್‌,ಚಲನಚಿತ್ರ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT