ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಶಾಲಾ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳ ನಿರಾಸಕ್ತಿ

ಸಚಿವರ ಆದೇಶಕ್ಕೂ ಬೆಲೆ ಕೊಡದ ಅಧಿಕಾರಿಗಳು: ಆರೋಪ
Published : 29 ಸೆಪ್ಟೆಂಬರ್ 2024, 6:19 IST
Last Updated : 29 ಸೆಪ್ಟೆಂಬರ್ 2024, 6:19 IST
ಫಾಲೋ ಮಾಡಿ
Comments

ರಾಯಚೂರು: ನಗರದ ಚಂದ್ರಬಂಡ ರಸ್ತೆಯ ಸಂತೋಷನಗರ ಬಡಾವಣೆಯಲ್ಲಿ ಅಲ್ಲಮಪ್ರಭು ಕಾಲೊನಿಯ ಸರ್ಕಾರಿ ಪ್ರೌಢಶಾಲೆ ನಿರ್ಮಾಣಕ್ಕೆ ಸಿಎ ಸೈಟ್ ನಗರಾಭಿವೃದ್ಧಿ ಪ್ರಾಧಿಕಾರದಿಂದ ಶಿಕ್ಷಣ ಇಲಾಖೆ ಖರೀದಿ ಮಾಡಿ ಒಂದೂವರೆ ವರ್ಷ ಕಳೆದರೂ ಶಾಲೆ ನಿರ್ಮಾಣವಾಗದೇ ನನೆಗುದಿಗೆ ಬಿದ್ದಿದೆ.

ಎಲ್‌ಬಿಎಸ್ ನಗರದ ಅಲ್ಲಮಪ್ರಭು ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದ ಕಾರಣ ಅಂದಿನ ಜಿಲ್ಲಾ ಪಂಚಾಯಿತಿಯ ಸಿಇಒ ಎಂ.ಕೂರ್ಮಾ ರಾವ್ ಅವರು ಮುತುವರ್ಜಿ ವಹಿಸಿ ಸಿ.ಎ ಸೈಟ್ ಕೊಡಿಸಿದ್ದರು. ಶಿಕ್ಷಣ ಇಲಾಖೆಯ ಅಧಿಕಾರಿಗಳು 2017ರ ಏಪ್ರಿಲ್ 20ರಂದು ₹19 ಲಕ್ಷ ನೀಡಿ ಖರೀದಿ ಮಾಡಿದ್ದರು.

‘ಶಾಲೆ ನಿರ್ಮಾಣಕ್ಕೆ ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿಗಳು ಮುಂದಾದಾಗ ಕೆಲ ಅತಿಕ್ರಮಣಕಾರರು ದೇವಸ್ಥಾನ ಇದೆ ಎಂದು ತಪ್ಪು ಮಾಹಿತಿ ಕೊಟ್ಟು ಶಾಲೆಯ ಜಾಗ ಒತ್ತುವರಿ ಮಾಡಲು ಸಂಚು ರೂಪಿಸಿ ಶಾಲೆ ನಿರ್ಮಾಣಕ್ಕೆ ಅಡ್ಡಿಪಡಿಸಿದ್ದರು. ಶಾಲೆಯ ವಿವಿಧ ಕನ್ನಡಪರ, ದಲಿತಪರ ಸಂಘಟನೆಗಳ ಹೋರಾಟದ ಪರಿಣಾಮ ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ ಕಳೆದ ಫೆಬ್ರುವರಿ 9ರಂದು ವಿವಾದ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಜೊತೆ ಚರ್ಚೆ ಮಾಡಿ ದೇವಸ್ಥಾನವೂ ಇರಲಿ ಮತ್ತು ಶಾಲೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಆರು ತಿಂಗಳಾದರೂ ಇತ್ತ ಶಾಸಕರು ಹಾಗೂ ಅಧಿಕಾರಿಗಳು ಸುಳಿದಿಲ್ಲ’ ಎಂದು ಶಿಕ್ಷಣ ಪ್ರೇಮಿ ಸಾದೀಕ್ ಪಾಶ, ನರಸಿಂಹಲು, ಫಯಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ದೇವಸ್ಥಾನವಿರಲಿ ಎಂದು ಕ್ಯಾತೆ ತೆಗೆದಿದ್ದ ಸಂತೋಷನಗರ ಕ್ಷೇಮಾಭಿವೃದ್ಧಿ ಸಂಘದವರೇ ಶಾಲೆ ನಿರ್ಮಾಣ ಮಾಡಿ ಎಂದು ಜನವರಿ 5ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ವಿವಾದ ಕೊನೆಗಾಣಿಸಲು ಮುಂದಾಗಿದ್ದರು. ಶಾಲೆ ನಿರ್ಮಾಣಕ್ಕಾಗಿ ಹೋರಾಡಿದ ಸಂಘಟಕರ, ಶಿಕ್ಷಣ ಪ್ರೇಮಿಗಳ ಮನವಿಗೆ ಸ್ಪಂದಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲರು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸಿಇಒ ಮತ್ತು ಜಿಲ್ಲಾಧಿಕಾರಿಗೆ ಜಂಟಿಯಾಗಿ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಿ ಶಾಲೆ ನಿರ್ಮಾಣ ಕಾಮಗಾರಿ ಆರಂಬಿಸುವಂತೆ ಆದೇಶ ನೀಡಿದ್ದರು. ಒಂದು ತಿಂಗಳಾದರೂ ಒಬ್ಬ ಅಧಿಕಾರಿಯೂ ಶಾಲೆಯ ಜಾಗಕ್ಕೆ ಭೇಟಿ ನೀಡಿಲ್ಲ’ ಎಂದು ಸಂಘಟಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕೋಪಯೋಗಿ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡುತ್ತಿಲ್ಲ. ಹೀಗಾಗಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ.

‘ಒಂದು ಕಡೆ ಸರ್ಕಾರ ಕನ್ನಡ ಶಾಲೆಗಳ ಅಭಿವೃದ್ಧಿ ಮತ್ತು ಕನ್ನಡ ಉಳಿಸಲು ಖಾಸಗಿ ದಾನಿಗಳ, ಹಳೆಯ ವಿದ್ಯಾರ್ಥಿಗಳ ನೆರವು ಪಡೆಯುತ್ತಿದೆ. ಆದರೆ ಶಾಲೆ ನಿರ್ಮಾಣಕ್ಕೆ ಅನುದಾನ, ಜಾಗವಿದ್ದರೂ ಕಟ್ಟಡ ನಿರ್ಮಾಣ ಆರಂಭವಾಗಿಲ್ಲ. ಜನಪ್ರತಿನಿಧಿಗಳ ನಿರಾಸಕ್ತಿಯೇ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿಯುವಂತೆ ಮಾಡಿದೆ. ಶಾಲೆ ನಿರ್ಮಾಣ ಮಾಡದೇ ಹೀಗೆ ಕಾಲಹರಣ ಮಾಡಿದರೆ ಶಾಲೆಯ ಜಾಗ ಭೂಗಳ್ಳರ ಪಾಲಾಗಲಿದೆ’ ಎಂದು ಭಾರತ ಕ್ರಾಂತಿಕಾರಿ ಸಂಘಟನೆಯ ಮುಖಂಡ ಅಜೀಜ ಜಾಗೀರದಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT