ಸೋಮವಾರ, ಮಾರ್ಚ್ 27, 2023
29 °C
ಕಾಂಗ್ರೆಸ್‌ ಕಚೇರಿಯಲ್ಲಿ ಇಂದಿರಾಗಾಂಧಿ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪ ನಮನ

ರಾಯಚೂರು: ಇಂದಿರಾಗಾಂಧಿ ಪುಣ್ಯತಿಥಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮಾಜಿ ಪ್ರಧಾನಿ ಇಂದಿರಾಗಾಂಧಿಯರು ಬಡವರು, ದಲಿತರು, ಅಲ್ಪಸಂಖ್ಯಾತರ ಬಗ್ಗೆ ಬಹಳ ಕಳಕಳಿಯನ್ನು ಹೊಂದಿದ್ದರು. ಅವರು ತಮ್ಮ ಆಡಳಿತಾವಧಿಯಲ್ಲಿ ಪಕ್ಷಕ್ಕೆ ಹಾಗೂ ದೇಶಕ್ಕೆ ಅನೇಕ ಕೊಡುಗೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಕೆ.ಶಾಂತಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಾಲಯದಲ್ಲಿ ಭಾನುವಾರ ಪಕ್ಷದಿಂದ ಹಮ್ಮಿಕೊಳ್ಳಲಾದ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿಯವರ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಪಕ್ಷದ ಮೂಲೆ ಮೂಲೆಯಲ್ಲಿ ಸಂಘಟನೆಗೊಳ್ಳಲು ಇಂದಿರಾಗಾಂಧಿಯವರೇ ಕಾರಣ.

ದೇಶಕ್ಕೆ ಸಮರ್ಥ ನಾಯಕತ್ವ ಕೊಟ್ಟಿದ್ದರು. ಇಂದಿರಾಜಿಯವರು ಕೊನೆಯ ಉಸಿರಿನವರೆಗೂ ಪಕ್ಷಕ್ಕಾಗಿ, ರಾಷ್ಟ್ರಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡು ದೇಶಕ್ಕೆ ಪ್ರಾಣವನ್ನೆ ಬಲಿಕೊಟ್ಟ ಮಹಾತ್ಮರಾಗಿದ್ದಾರೆ. ವಿಧವಾ ವೇತನ, ಬ್ಯಾಂಕ್ ರಾಷ್ಟ್ರೀಕರಣಗಳಂತಹ ಮುಖ್ಯವಾದ ನಿರ್ಧಾರಗಳನ್ನು ಕೈಗೊಂಡ ಮಹಾನ್ ನಾಯಕಿ ಎಂದರು.

ವಕ್ಫ್ ಬೋರ್ಡ್‍ನ ಮಾಜಿ ಸದಸ್ಯ ನಜೀರ್ ಪಂಜಾಬಿ ಮಾತನಾಡಿ, ಪ್ರಧಾನಿಯಾಗಿದ್ದಾಗ ಜಾರಿಗೆ ತಂದಿರುವ ಗರೀಬಿ ಹಠಾವೋ, ವೃದ್ಯಾಪ್ಯ ವೇತನ, ಬಡವರಿಗಾಗಿ ಸೂರು, ರಾಜಧನ ರದ್ದು, ಜೀತ ವಿಮುಕ್ತಿ ಕಾನೂನು ಜಾರಿ, 20 ಅಂಶಗಳ ಕಾರ್ಯಕ್ರಮ, ಇನ್ನಿತರ ಯೋಜನೆಗಳು ಇಂದಿಗೂ ಜನ-ಮನದಲ್ಲಿ ಉಳಿದು ಪ್ರಚಲಿತದಲ್ಲಿದ್ದು, ಅವರ  ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಮಹಿಳಾ ಕಾಂಗ್ರೆಸ್‍ನ ಪದಾಧಿಕಾರಿ ಮಾಲಾ ಭಜಂತ್ರಿ ಮಾತನಾಡಿದರು. ಪಕ್ಷದ ಮುಖಂಡ ಜಿ.ಬಸವರಾಜರೆಡ್ಡಿ, ಅಮರೇಗೌಡ ಹಂಚಿನಾಳ, ಜಿ.ಶಿವಮೂರ್ತಿ, ತಾಯಣ್ಣ ನಾಯಕ, ರುದ್ರಪ್ಪ ಅಂಗಡಿ, ಆಂಜನೇಯ ಕುರುಬದೊಡ್ಡಿ, ಭೀಮನಗೌಡ ನಾಗಡದಿನ್ನಿ, ಸುಧೀಂದ್ರ ಜಾಗೀರದಾರ, ಪೂಜಾರಿ ಶರಣಪ್ಪ, ಬಸವರಾಜ ಪಾಟೀಲ್ ಅತ್ತನೂರು,  ನಿರ್ಮಲಾ ಬೆಣ್ಣಿ, ವಂದನಾ, ರಾಣಿ ರಿಚರ್ಡ್, ಶಶಿಕಲಾ ಭೀಮರಾಯ, ಜ್ಯೋತಿ, ಶ್ರೀದೇವಿ, ಬಿ.ವಿ.ಭಾರತಿ, ಖಾಸಿಂಬೀ, ಇಲ್ಲೂರು ಗೋಪಾಲಯ್ಯ, ಎನ್.ನಲ್ಲಾರೆಡ್ಡಿ, ದಸ್ತಗಿರಿ, ವಿಜಯಕುಮಾರ ದೇಸಾಯಿ, ರಂಗರಾಜ ನಾಯಕ, ದತ್ತಾತ್ರೇಯ ಕಲ್ಮಲಾ, ತಿಮ್ಮಪ್ಪ, ಗೋವಿಂದ ಜೆ, ಟಿ.ಶಿವಕುಮಾರ ಹಾಗೂ ಪ್ರಮುಖರು ಇದ್ದರು.

ದೇಶಕ್ಕೆ ಕೊಡುಗೆ ಅಪಾರ: ಬಣ್ಣನೆ

ಸಿಂಧನೂರು: ‘ಭಾರತ ದೇಶದ ಪ್ರಗತಿಗೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಎಂದಿಗೂ ಮರೆಯುವಂತಿಲ್ಲ‘ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ ಅಭಿಪ್ರಾಯಪಟ್ಟರು.

ಸ್ಥಳೀಯ ತಾಲ್ಲೂಕು ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 37ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

‘ಪ್ರಧಾನಿ ಮೋದಿ ಅವರು ಸುಳ್ಳಗಳನ್ನು ಹೇಳುತ್ತಲೇ ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಜತೆಗೆ ರೈತ ಮತ್ತು ಕಾರ್ಮಿಕ ವಿರೋಧಿ
ನೀತಿ ಅನುಸರಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಈ ಬಿಜೆಪಿಗೆ ದೇಶದ ಜನತೆ ತಕ್ಕ ಪಾಠ ಕಲಿಸುತ್ತಾರೆ‘ ಎಂದರು.

ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ರಾಗಲಪರ್ವಿ, ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಮಾಜಿ
ಅಧ್ಯಕ್ಷ ಖಾಜಾಹುಸೇನ್ ರೌಡಕುಂದಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದ್ರಾಕ್ಷಾಯಿಣಿ, ಮುಖಂಡರಾದ ಚನ್ನಬಸವ ಕುಂಬಾರ  ಅಲಬನೂರು, ಆಯಿಶಾ ಬೇಗಂ, ಅಸ್ಲಾಂ ಸೇರಿದಂತೆ ಯುವಕರು,  ಮಹಿಳಾ ಪದಾಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು