ಬುಧವಾರ, ಆಗಸ್ಟ್ 21, 2019
22 °C

‘ವಿಜ್ಞಾನದ ಆವಿಷ್ಕಾರಗಳು ಜನರಿಗೆ ತಲುಪಲಿ’

Published:
Updated:
Prajavani

ರಾಯಚೂರು: ವಿಜ್ಞಾನದ ಬೆಳವಣಿಗೆಯಿಂದಲೇ ದೇಶ ಬಹಳಷ್ಟು ಪ್ರಗತಿ ಸಾಧಿಸಿದೆ. ಎಲ್ಲ ಆವಿಷ್ಕಾರಗಳು ಜನರಿಗೆ ತಲುಪಬೇಕು ಎಂದು ವಿಶ್ರಾಂತ ಕುಲಪತಿ ಡಾ. ಬಿ.ವಿ.ಪಾಟೀಲ ಹೇಳಿದರು.

ನಗರದಲ್ಲಿ ಗುರುವಾರ ಆಯೋಜಿಸಿದ್ದ ವಿಜ್ಞಾನಕ್ಕಾಗಿ ಭಾರತ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯದ ಸಂದರ್ಭದಲ್ಲಿ ದೇಶದಲ್ಲಿ 48 ಮಿನಿಯಲ್ ಟನ್ ಆಹಾರ ಉತ್ಪಾದನೆ ಮಾಡಲಾಗುತ್ತಿತ್ತು. ವಿಜ್ಞಾನದ ಪ್ರಗತಿಯಿಂದ 280 ಮಿಲಿಯನ್ ಟನ್ ಉತ್ಪಾದನೆ ಮಾಡಲಾಗುತ್ತಿದೆ. ಇದರಲ್ಲಿ ಕೃಷಿ ವಿಜ್ಞಾನಿಗಳ ಹಾಗೂ ರೈತರ ಶ್ರಮ ಶ್ಲಾಘನೀಯವಾಗಿದೆ ಎಂದರು.

ಚಿಕ್ಕ ಮನೆ ಕಟ್ಟಿಸಬಹುದಾದಂತ ಸ್ಥಳದಲ್ಲಿ ಟನ್‌ಗಟ್ಟಲೇ ಆಹಾರ ಉತ್ಪಾದನೆ ಮಾಡಬಹುದು. ಲೇಸರ್ ಚಿಕಿತ್ಸೆಯಿಂದ ಶಸ್ತ್ರ ಚಿಕಿತ್ಸೆಗಳು ಸುಲಭವಾಗಿವೆ. ಮಣ್ಣಿನ ಉಪಯೋಗವಿಲ್ಲದೇ ಗಾಳಿಯ ಸಹಾಯದಿಂದ ಬೆಳೆ ಬೆಳೆಯುವ ವಿಧಾನಗಳ ಬಗ್ಗೆ ಅನ್ವೇಷಣೆ ನಡೆಯುತ್ತಿದೆ ಎಂದು ತಿಳಿಸಿದರು.

ಬ್ರೇಕ್‌ ಥ್ರೋ ಸೈನ್ಸ್ ಸೊಸೈಟಿ ಸಂಘಟಕ ಮುರಳಿಧರರೆಡ್ಡಿ ಮಾತನಾಡಿ, ವಿಜ್ಞಾನ ಜನಪ್ರಿಯಗೊಳಿಸುವ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವ ಆಶಯವನ್ನು ಈ ಕಾರ್ಯಕ್ರಮ ಹೊಂದಿದ್ದು, ವಿಜ್ಞಾನದ ಸಾಧನೆಗಳನ್ನು ಸಮಾಜದಲ್ಲಿ ಹರಡುವ ಮತ್ತು ಸಂಶೋಧನೆಗೆ ಹಣ ಒದಗಿಸುವುದರಿಂದ ಮನುಕುಲದ ಏಳಿಗೆ ಸಾಧ್ಯವಾಗಲಿದೆ ಎಂದು ಹೇಳಿದರು.

ನವೋದಯ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕ ಚಂದ್ರಮೌಳಿ ಮಾತನಾಡಿ, ಮೂಢನಂಬಿಕೆಗಳು, ಕಂದಾಚಾರಗಳು ಅಮಾಯಕ ಜನರನ್ನು ಕಷ್ಟಕ್ಕೆ ತಳ್ಳುತ್ತಿವೆ. ದಿನ ಬೆಳಗಾದರೆ ಟಿವಿಯಲ್ಲಿ ಬರುವ ಭವಿಷ್ಯ ಕಾರ್ಯಕ್ರಮ ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ. ವೈಜ್ಞಾನಿಕ ಮನೋಭಾವ ಬೆಳೆಸಲು ಇಂತಹ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕು ಎಂದು ತಿಳಿಸಿದರು.

ಅಪೂರ್ವ ಮಾತನಾಡಿದರು. ಕರ್ನಾಟಕ ಸಂಘದಿಂದ ಭಗತ್‌ಸಿಂಗ್‌ ವೃತ್ತದವರೆಗೆ ಭಾಸ್ಕಾರಾಚಾರ್ಯ, ಸಿ.ವಿ.ರಾಮನ್, ಜಗದೀಶ ಚಂದ್ರ ಬೋಸ್, ಮೇರಿಕ್ಯೂರಿ ಮತ್ತು ಐನಸ್ಟೈನ್ ಮುಂತಾದ ವಿಜ್ಞಾನಿಗಳ ಭಾವಚಿತ್ರ ಮತ್ತು ಸೂಕ್ತಿಗಳನ್ನು ಹಿಡಿದು ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.

Post Comments (+)