ಮಲಿಯಾಬಾದ್‌ನಲ್ಲಿ ಐದು ಶಾಸನಗಳು ಪತ್ತೆ

ಶುಕ್ರವಾರ, ಏಪ್ರಿಲ್ 26, 2019
36 °C
ಇತಿಹಾಸ ರಚನೆಗೆ ನೆರವಾಗುವ ನೂರಾರು ಕುರುಹುಗಳ ಆಗರ

ಮಲಿಯಾಬಾದ್‌ನಲ್ಲಿ ಐದು ಶಾಸನಗಳು ಪತ್ತೆ

Published:
Updated:
Prajavani

ರಾಯಚೂರು: ತಾಲ್ಲೂಕಿನ ಮಲಿಯಾಬಾದ್‌ ಗ್ರಾಮದಲ್ಲಿ ಐದು ಶಾಸನಗಳನ್ನು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ ಅವರು ಪತ್ತೆ ಮಾಡಿದ್ದಾರೆ.

ನಗರದಿಂದ ಆಜ್ಞೇಯ ದಿಕ್ಕಿಗೆ 10 ಕಿ.ಮೀ ದೂರದ ಗ್ರಾಮ. ಗ್ರಾಮದಲ್ಲಿ ಸಾಕಷ್ಟು ಪುರಾತನ ಅವಶೇಷಗಳಿವೆ. ಗ್ರಾಮದ ಗೋ ಶಾಲೆಯಿಂದ ಪೂರ್ವ ದಿಕ್ಕಿನ ಚಿಕ್ಕನಾರಕೆರೆಗೆ ಹೋಗುವ ದಾರಿಯ ಆಸು-ಪಾಸಿನಲ್ಲಿ ಬೂದಿ ಮಣ್ಣು ಕಾಣ ಬರುತ್ತಿದ್ದು, ಅಲ್ಲಿ ಬೃಹತ್ ಶಿಲಾಯುಗ ಕಾಲಕ್ಕೆ ಸೇರಿದ ಮಡಕೆಯ ಚೂರಿನ ಅವಶೇಷಗಳು ಕಂಡು ಬಂದಿವೆ ಎಂದು ತಿಳಿಸಿದ್ದಾರೆ.

ಈ ಗ್ರಾಮವು ಪುರಾತನ ಕಾಲದಲ್ಲಿ ಮುದ್ಗುಂದೂರು-300 ರ ಉಪ ವಿಭಾಗವಾಗಿದ್ದು, ಎಡೆದೊರೆ-2000 ನಾಡಿನಲ್ಲಿತ್ತು. ನಂತರದ ದಿನಗಳಲ್ಲಿ ಮಲಯಾಬಾದ್>ಮಲಿಯಾಬಾದ್ ಎಂಬ ಹೆಸರು ಪಡೆದುಕೊಂಡಿದೆ. ಇಲ್ಲಿ ಬಲಿಷ್ಠವಾದ ಎರಡು ಸುತ್ತಿನ ಕೋಟೆ ಇದೆ. ಪಲ್ಲವೇಶ್ವರ [ಪ್ರಸ್ತುತ ರಾಮಲಿಂಗೇಶ್ವರ], ಬಸವಣ್ಣ, ಈಶ್ವರ, ಕಾಳಿಕಾದೇವಿ, ಮಾರುತಿ, ಚೌಡಮ್ಮ ಮೊದಲಾದ ದೇವಾಲಯಗಳಿವೆ. ಹಾಗೆಯೇ ಐದಾರು ಕೆರೆಗಳು, ಬಿಡಿಶಿಲ್ಪಗಳಾದ ಕೋಟೆಯ ಚಪ್ಪಡಿ ಕಲ್ಲುಗಳಲ್ಲಿ ಕುದುರೆಯ ಸಾಲು, ಕೋಟೆಯ ಬೃಹತ್ ಕಲ್ಲುಗಳನ್ನು ಸಾಗಿಸಲು ಕೋಣಗಳು ಮತ್ತು ವಡ್ಡರ ಬಂಡಿಯ ಚಿತ್ರ, ಗಣೇಶ, ನಂದಿ, ಎರಡು ಸುಂದರವಾದ ಕಲ್ಲಾನೆಗಳು, ವಿಷ್ಣು, ಮಹೀಶಮರ್ದಿನಿ ಶಿಲ್ಪಗಳು, ಕಾಳಬೈರವ ಇತ್ಯಾದಿ ವಿಗ್ರಹಗಳಿವೆ ಎಂದು ತಿಳಿಸಿದ್ದಾರೆ.

ಇವುಗಳೊಂದಿಗೆ ಹಲವು ವೀರಗಲ್ಲು, ನಾಗಶಿಲ್ಪಗಳನ್ನು ಪತ್ತೆ ಮಾಡಿಕೊಂಡು ರಾಯಚೂರು ನಗರದ ಪೋಲಿಸ್ ಸೂಪರಿಡೆಂಟ್ ಕಛೇರಿ ಆವರಣದಲ್ಲಿ ಸಂರಕ್ಷಿಸಲಾಗಿದೆ. ಆದರೂ ಕೂಡ ಇನ್ನೂ ಅನೇಕ ವೀರಗಲ್ಲು, ನಾಗಶಿಲ್ಪಿಗಳು ಇಲ್ಲಿನ ಗ್ರಾಮದ ಪರಿಸರದಲ್ಲಿ ಅನಾಥವಾಗಿ ಬಿದ್ದಿವೆ. ಇಲ್ಲಿ ಒಟ್ಟು ಏಳು ಶಾಸನಗಳನ್ನು ಈಗ ಪತ್ತೆ ಮಾಡಿರುವುದಾಗಿ ತಿಳಿಸಿದ್ದಾರೆ.

ಇವುಗಳಲ್ಲಿ ಎರಡು ಶಾಸನಗಳನ್ನು ಕ್ರಿ.ಶ. 2006 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪಿಎಚ್.ಡಿ ಪದವಿಗಾಗಿ ಸಲ್ಲಿಸಿದ ರಾಯಚೂರು ಜಿಲ್ಲೆಯ ಶಾಸನಗಳ ಸಮಗ್ರ ಅಧ್ಯಯನ ಎಂಬ ಸಂಶೋಧನಾ ಮಹಾ ಪ್ರಬಂಧದಲ್ಲಿ ಪ್ರಕಟಗೊಂಡಿರುತ್ತವೆ. ಇನ್ನುಳಿದ ಐದು ಶಾಸನಗಳನ್ನು ಹಲವು ವರ್ಷಗಳ ಕಾಲ ಪ್ರತಿ ಮಾಡಿಕೊಂಡು ಬಂದರೂ ಅವುಗಳನ್ನು ಓದುವುದಕ್ಕೆ ಸಾಧ್ಯವಾಗಿದ್ದಿಲ್ಲ. ಈಗ ಐದು ಶಾಸನಗಳನ್ನು ಡಾ.ದೇವರಕೊಂಡಾರೆಡ್ಡಿ ಗುರುಗಳ ನೆರವಿನಿಂದ ಸಿದ್ಧಪಡಿಸಲಾಗಿದೆ ಎಂದಿದ್ದಾರೆ.

ಈ ಐದು ಶಾಸನಗಳು ಕಣಶಿಲೆಯ ಬಂಡೆಗಲ್ಲುಗಳಲ್ಲಿ ರಚಿತಗೊಂಡಿದ್ದು, ರಾಷ್ಟ್ರಕೂಟ ಅರಸರ ಕಾಲಾವಧಿಯಲ್ಲಿ [ಕ್ರಿ.ಶ 9-10 ನೇ ಶತಮಾನ] ಬರೆಸಲ್ಪಟ್ಟ ಶಾಸನಗಳಾಗಿವೆ. ಗ್ರಾಮದ ಬೋಡಯ್ಯನ ಹೊಲದಲ್ಲಿನ ಶಾಸನವು ನೊಳಂಬವಾಡಿ ಪಲ್ಲವ ಅರಸ ಅಯ್ಯಪ್ಪ ದೇವನ [ಕ್ರಿ.ಶ 892-934] ದ್ದಾಗಿದೆ. ಚೌಡಮ್ಮ ದೇವಾಲಯದ ಹತ್ತಿರ ದೊಡ್ಡ ಗುಂಡಿಗೆ ಇರುವ ಒಂದು ಶಾಸನವು ಅಕಾಲವರ್ಷನ [2ನೇ ಕೃಷ್ಣ ಕ್ರಿ.ಶ 878-914] ದ್ದಾಗಿದ್ದರೆ, ಇನ್ನೊಂದು ಶಾಸನವು 3 ನೇ ಅಮೋಘವರ್ಷನಿಗೆ [ಕ್ರಿ.ಶ 935-939] ಸೇರುತ್ತದೆ. ಚಿಕ್ಕ ನಾರಗಿದ್ದ ಕೆರೆಯ ಒಡ್ಡಿಗೆ ಜೋಡಿಸಿದ ದೊಡ್ಡ ಗುಂಡಿಗೆ ಇರುವ ಶಾಸನವು ಕ್ರಿ.ಶ. 9ನೇ ಶತಮಾನಕ್ಕೆ ಸೇರುತ್ತದೆ. ಇದರಲ್ಲಿ ರಾಷ್ಟ್ರಕೂಟ ಸಾಮಂತ ಅರಸ ಚಟ್ಟಿಯರಸನ ಬಗ್ಗೆ ಉಲ್ಲೇಖವಿದೆ. ಹಾಗೆಯೇ ಇನ್ನೊಂದು ಶಾಸನವು ಬೆಟ್ಟದ ರಾಮಲಿಂಗೇಶ್ವರ ದೇವಾಲಯದ ಹತ್ತಿರ ಗವಿಯ ಬಂಡೆಗಲ್ಲಿಗೆ ಇದ್ದು. ಇದು ಸಂಸ್ಕೃತ ಭಾಷೆ ನಾಗರಲಿಪಿಯಲ್ಲಿದ್ದು, ಕ್ರಿ.ಶ 9ನೇ ಶತಮಾನದ್ದಾಗಿದೆ.

ಇಲ್ಲಿನ ಪ್ರಾಚೀನ ಕುರುಹುಗಳನ್ನು ಪತ್ತೆ ಮಾಡುವಲ್ಲಿ ಮಲಿಯಾಬಾದ್ ಗ್ರಾಮದ ರವಿಚಂದ್ರ, ಪರಪ್ಪ ಭಂಡಾರಿ ಹಂಚಿನಾಳ, ಪಟಕನದೊಡ್ಡಿ ಸಣ್ಣ ಚನ್ನಬಸವ ಮೊದಲಾದವರು ಕೈ ಜೋಡಿಸಿದ್ದಾರೆ ಎಂದು ಸಂಶೋಧಕ ಡಾ. ಚನ್ನಬಸಪ್ಪ ಮಲ್ಕಂದಿನ್ನಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !