ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರಿನಲ್ಲಿ ’ಜಲಧಾರೆ’ ಜಾರಿಗೆ ಸಿದ್ಧತೆ

ನಾರಾಯಣಪುರ ಜಲಾಶಯದಿಂದ ಪೈಪ್‌ಲೈನ್‌ ಮೂಲಕ ನೀರು ಪೂರೈಕೆ
Last Updated 5 ಜುಲೈ 2019, 12:36 IST
ಅಕ್ಷರ ಗಾತ್ರ

ರಾಯಚೂರು:‌ ಜಿಲ್ಲೆಯ ಪ್ರತಿ ಗ್ರಾಮೀಣ ಭಾಗದ ಮನೆಗಳಿಗೆಲ್ಲ ನಿರಂತರ ನೀರಿನ ಲಭ್ಯತೆ ಇರಬೇಕು ಎನ್ನುವ ಸದುದ್ದೇಶದೊಂದಿಗೆ ರಾಜ್ಯ ಸರ್ಕಾರವು ‘ಜಲಧಾರೆ’ ಯೋಜನೆಯನ್ನು ಜಾರಿಗೆ ತಂದಿದೆ. ಮುಖ್ಯವಾಗಿ ರಾಯಚೂರು ಜಿಲ್ಲೆಯಲ್ಲಿ ಪ್ರಥಮ ಆದ್ಯತೆಯೊಂದಿಗೆ ಜಾರಿ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ನಗರದ ಯರಮರಸ್‌ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಲಧಾರೆ ಯೋಜನೆಯ ರೂಪುರೇಷೆ ಕುರಿತ ಸಂವಾದ ಸಭೆಯಲ್ಲಿ ಮಾತನಾಡಿದರು.

ಕಳೆದ 18 ವರ್ಷಗಳಲ್ಲಿ 14 ವರ್ಷ ಬರಗಾಲ ಇತ್ತು. ಕೆಲವು ದಶಕಗಳ ಹಿಂದೆ ಬರಗಾಲವು ಎಂದಾದರೊಮ್ಮೆ ಬರುತ್ತಿತ್ತು. ಈಗ ಬರಗಾಲ ವಾಡಿಕೆಯಾಗಿದ್ದು, ಮಳೆಗಾಲ ಅಪರೂಪ ಎನ್ನುವಂತಹ ಪರಿಸ್ಥಿತಿ ಇದೆ. ಅಂತರ್ಜಲ ಮಟ್ಟ ಕೂಡಾ ಕುಸಿತವಾಗಿದೆ. ಗ್ರಾಮೀಣ ಭಾಗಕ್ಕೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಪರಿಣಾಮಕಾರಿಯಾಗಿ ಮಾಡಿಕೊಂಡು ಬರಲಾಗಿದೆ. ನಜೀರ್‌ಸಾಬ್‌ ಅವರ ಕಾಲದಲ್ಲೂ ಬಹಳಷ್ಟು ಯೋಜನೆಗಳು ಜಾರಿಯಾಗಿವೆ. ಆದರೆ, ನಿರಂತರ ಬರಗಾಲ ಬಂದಿದ್ದರಿಂದ ಯಾವ ಯೋಜನೆಯಿಂದಲೂ ಸಮರ್ಪಕವಾಗಿ ನೀರು ಪೂರೈಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಶಾಶ್ವತ ನೀರಿನ ಮೂಲದಿಂದಲೇ ಗ್ರಾಮೀಣ ಭಾಗಕ್ಕೆ ನೀರು ಒದಗಿಸುವ ಉದ್ದೇಶದ ಇಟ್ಟುಕೊಂಡು ‘ಜಲಧಾರೆ’ ಪರಿಕಲ್ಪನೆ ರೂಪಿಸಲಾಗಿದೆ. ರಾಯಚೂರು ಜಿಲ್ಲೆಯ ಪ್ರತಿ ಗ್ರಾಮಕ್ಕೂ ನಾರಾಯಣಪುರ ಜಲಾಶಯದಿಂದ ನೀರು ಪೂರೈಸುವುದಕ್ಕೆ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಯೋಜನೆಯನ್ನು ರೂಪಿಸಿದ್ದಾರೆ. ಯೋಜನೆ ರೂಪುರೇಷೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಅಭಿಪ್ರಾಯ ಸಂಗ್ರಹಿಸಿಕೊಂಡು, ಸಚಿವ ಸಂಪುಟದಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದರು.

ನಾರಾಯಣಪುರ ಜಲಾಶಯದಲ್ಲಿ ವರ್ಷಪೂರ್ತಿ ಡೆಡ್‌ ಸ್ಟೋರೇಜ್‌ನಲ್ಲಿ ಎಂಟು ಟಿಎಂಸಿಯಷ್ಟು ನೀರಿನ ಲಭ್ಯತೆ ಇರುತ್ತದೆ. ಈ ನೀರು ಜಲಾಶಯದಿಂದ ಹರಿಬಿಡುವುದಕ್ಕೆ ಸಾಧ್ಯವಾಗುವುದಿಲ್ಲ. ಅದನ್ನು ಕುಡಿಯುವ ನೀರಿನ ಯೋಜನೆಗಾಗಿ ಬಳಸಿಕೊಳ್ಳುವುದಕ್ಕೆ ಈ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ಜಲಧಾರೆ ಯೋಜನೆಯ ರೂಪುರೇಷೆ ಸಿದ್ಧಪಡಿಸಿದಸ್ಕೂಪ್‌ ಸಂಸ್ಥೆಯ ಉಪಾಧ್ಯಕ್ಷ ಮನಮೋಹನ್‌ ಅವರು ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗದ ಜನಸಂಖ್ಯೆಯು 2011 ರ ಜನಗಣತಿ ಪ್ರಕಾರ 13.77 ಲಕ್ಷ ಇದೆ. 2052 ಕ್ಕೆ 22.63 ಲಕ್ಷಕ್ಕೆ ಏರಿಕೆಯಾಗುವ ಅಂದಾಜು ಮಾಡಿಕೊಂಡು ನೀರು ಪೂರೈಸುವುದಕ್ಕೆ ಈ ಯೋಜನೆ ಮಾಡಲಾಗಿದೆ. ನಾರಾಯಣಪುರ ಜಲಾಶಯದಿಂದ ಸಿಂಧನೂರು, ಲಿಂಗಸುಗೂರು ಹಾಗೂ ಮಾನ್ವಿ ತಾಲ್ಲೂಕಿನ ಗ್ರಾಮಗಳಿಗೆ ನೀರು ಪೂರೈಸಲಾಗುವುದು. ಗೂಗಲ್‌ ಬ್ಯಾರೇಜ್‌ನಿಂದ ರಾಯಚೂರು ಮತ್ತು ದೇವದುರ್ಗ ತಾಲ್ಲೂಕಿನ ಗ್ರಾಮಗಳಿಗೆ ನೀರು ಒದಗಿಸಲಾಗುವುದು. ಓವರ್‌ಹೆಡ್‌ ಟ್ಯಾಂಕ್‌ಗಳ ಮೂಲಕವೇ ನೀರು ಪೂರೈಕೆ ಮಾಡುವುದಕ್ಕೆ ಯೋಜಿಸಲಾಗಿದೆ ಎಂದರು.

ಮುಖ್ಯ ಪೈಪ್‌ಲೈನ್‌ನಿಂದ 40 ಕಡೆಗಳಲ್ಲಿ ನೀರಿನ ಸಂಗ್ರಹ ಮಾಡಿಕೊಳ್ಳಲಾಗುವುದು. ಅವುಗಳ ಮೂಲಕ ಗ್ರಾಮಗಳ ಓವರ್‌ಹೆಡ್‌ ಟ್ಯಾಂಕ್‌ಗಳಿಗೆ ನೀರು ಒದಗಿಸಲಾಗುವುದು. ಪ್ರತಿ ಗ್ರಾಮಕ್ಕೂ ಭೇಟಿಕೊಟ್ಟು ಯೋಜನೆ ಮಾಡಲಾಗಿದ್ದು, ಹೊಸದಾಗಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ ಅಗತ್ಯವಿರುವ ಬಗ್ಗೆಯೂ ಯೋಜಿಸಲಾಗಿದೆ. ವರ್ಷಕ್ಕೆ ಅಗತ್ಯವಾಗುವ ಒಟ್ಟು ನೀರು 2.98 ಟಿಎಂಸಿಯಷ್ಟು ಎಂದು ವಿವರಿಸಿದರು.

ಯೋಜನೆಯ ಜಾರಿಯನ್ನು ಎಲ್ಲ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರು ಸ್ವಾಗತಿಸಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ವಿಫಲವಾಗಿದ್ದು, ಈ ಬಗ್ಗೆ ಸಚಿವರು ಗಮನ ಹರಿಸಬೇಕು. ಜಲಧಾರೆ ಯೋಜನೆ ಅನುಷ್ಠಾನ ಸಂಪೂರ್ಣವಾಗುವವರೆಗೂ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಶಾಸಕರಾದ ಡಿ.ಎಸ್‌.ಹುಲಗೇರಿ, ಬಸನಗೌಡ ದದ್ದಲ, ಪ್ರತಾಪಗೌಡ ಪಾಟೀಲ, ರಾಜಾ ವೆಂಕಟಪ್ಪ ನಾಯಕ, ವಿಧಾನ ಪರಿಷತ್‌ ಸದಸ್ಯರಾದ ಎನ್‌.ಎಸ್‌. ಬೋಸರಾಜು, ಬಸವರಾಕ ಪಾಟೀಲ ಇಟಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿನ ನಲಿನ್‌ ಅತುಲ್‌ ಇದ್ದರು.

***

ಹಾಲಿ ವ್ಯವಸ್ಥೆಯೂ ಇರಲಿದೆ

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಪೂರೈಸುವುದಕ್ಕೆ ಈಗಾಗಲೇ ಅಸ್ತಿತ್ವದಲ್ಲಿರುವ ವ್ಯವಸ್ಥೆಗೆ ಧಕ್ಕೆ ತರುವುದಿಲ್ಲ. ಬೇಸಿಗೆಯಲ್ಲಿ ಅಥವಾ ನೀರಿನ ಕೊರತೆಯಾದಾಗ ಮಾತ್ರ ಜಲಧಾರೆ ಯೋಜನೆಯಡಿ ಅಳವಡಿಸುವ ಪೈಪ್‌ಲೈನ್‌ ಮೂಲಕ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತದೆ. ನೀರು ಪೂರೈಸಲು ಮತ್ತು ಸಂಗ್ರಹಿಸಲು ವ್ಯವಸ್ಥೆಯಿಲ್ಲದ ಗ್ರಾಮಗಳಲ್ಲಿ ಹೊಸ ವ್ಯವಸ್ಥೆ ಮಾಡಲಾಗುವುದು.ವರ್ಷಪೂರ್ತಿ ನೀರು ಲಭ್ಯವಾಗುವಂತೆ ನೋಡಿಕೊಳ್ಳುವುದು ಈ ಯೋಜನೆ ಉದ್ದೇಶವಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಪಟ್ಟಣಗಳಿಗೂ ನೀರು

ಜಿಲ್ಲೆಯ ಪಟ್ಟಣ ಕೇಂದ್ರಗಳಿಗೂ ಜಲಧಾರೆ ಯೋಜನೆಯಡಿ ನೀರು ಒದಗಿಸಲಾಗುವುದು. ರಾಯಚೂರು ನಗರಕ್ಕೆ ಪ್ರತ್ಯೇಕ ಯೋಜನೆಯಿಂದ ನೀರು ಸಿಗುತ್ತಿದೆ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT