4
ನ್ಯಾಯಬೆಲೆ ಪಡಿತರಕ್ಕೆ ಐದನಾಳ, ಕರಡಕಲ್ಲ, ಮಿಂಚೇರಿಗೆ ಅಲೆದಾಟ

ಸಮಸ್ಯೆಗಳ ಆಗರ ಜಾಲಿಬೆಂಚಿ

Published:
Updated:
ಲಿಂಗಸುಗೂರು ತಾಲ್ಲೂಕು ಜಾಲಿಬೆಂಚಿ ಗ್ರಾಮದಲ್ಲಿ ನಿರ್ಮಿಸಿದ ಮೇಲೆತ್ತರ ನೀರು ಸಂಗ್ರಹಣ ತೊಟ್ಟೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳು ಉದ್ಘಾಟನೆಗೊಳ್ಳದೆ ಅನಾಥ ಸ್ಥಿತಿಯಲ್ಲಿ

ಲಿಂಗಸುಗೂರು:  ತಾಲ್ಲೂಕಿನ ಕಾಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಲಿಬೆಂಚಿ ಗ್ರಾಮಕ್ಕೆ ಶುದ್ಧ ಕುಡಿವ ನೀರು ಸೇರಿದಂತೆ ಸರ್ಕಾರದ ಬಹುತೇಕ ಯೋಜನೆಗಳು ಸಮರ್ಪಕವಾಗಿ ತಲುಪಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳದಿಂದ 2 ಕಿ.ಮೀ. ಮತ್ತು ತಾಲ್ಲೂಕು ಕೇಂದ್ರದಿಂದ 5 ಕಿ.ಮೀ. ಅಂತರದಲ್ಲಿರುವ ಜಾಲಿಬೆಂಚಿ ಗ್ರಾಮದಲ್ಲಿ 400 ಮನೆಗಳಿವೆ. 700 ಮತದಾರರಿದ್ದು ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿರುವ ಅಂದಾಜು 1800 ಜನಸಂಖ್ಯೆ ಹೊಂದಿದೆ.

ಸರ್ಕಾರದಿಂದ ಸಂಪರ್ಕ ರಸ್ತೆ, ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆ, ಭಾಗಶಃ ಸಿಸಿ ರಸ್ತೆ ಬಿಟ್ಟರೆ ಉಳಿದೆಲ್ಲವು ಮರೀಚಿಕೆಯಾಗಿವೆ.  ಪ್ರಸಕ್ತ ಅವಧಿಗೆ ಗ್ರಾಮದಿಂದ ಯಲ್ಲಮ್ಮ ಹನುಮಂತಪ್ಪ ಜಿನ್ನಾಪುರ, ಬಸಪ್ಪ ಬೆಂಡೋಣಿ ಎಂಬುವವರು ಕಾಳಾಪುರ ಗ್ರಾಮ ಪಂಚಾಯಿತಿಗೆ ಆಯ್ಕೆಗೊಂಡಿದ್ದಾರೆ. ಸರ್ಕಾರದ ನೂರಾರು ಯೋಜನೆಗಳು ಗ್ರಾಮಸ್ಥರಿಗೆ ಸಿಗದೆ ಹೋದರು ಪರವಾಗಿಲ್ಲ, ಶುದ್ಧ ಹಾಗೂ ಸಮರ್ಪಕ ಕುಡಿವ ನೀರು ದೊರಕುತ್ತಿಲ್ಲ. ಅಡುಗೆಗೆ ಯೋಗ್ಯವಲ್ಲದ ನೀರನ್ನು ಅನಿವಾರ್ಯವಾಗಿ ಬಳಕೆ ಮಾಡುತ್ತಿದ್ದೇವೆ ಎಂದು ನಾಗರಾಜ ದೂರಿದರು.

ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕುರುಬ, ಹರಿಜನ, ನಾಯಕ ಜನಾಂಗದವರು ಹೆಚ್ಚಾಗಿದ್ದಾರೆ. ಕೃಷಿ ಹಾಗೂ ಕುರಿ ಸಾಕಾಣಿಕೆ ಇಲ್ಲಿನ ಮೂಲ ಕಸುಬು.  ಈಚೆಗೆ ನೀರಾವರಿ ಸೌಲಭ್ಯ ಬಂದಿದ್ದು ಸ್ವಲ್ಪ ಮಟ್ಟಿನ ಆರ್ಥಿಕ ಚೇತರಿಕೆ ಕಾಣಿಸಿಕೊಂಡಿದೆ. ಸೌಲಭ್ಯಗಳು ಬೇಕು ಎಂದು ಕೇಳುವಷ್ಟು ಶಿಕ್ಷಣವಂತರಿಲ್ಲದೆ ಹೋಗಿದ್ದರಿಂದ ಸೌಲಭ್ಯಗಳು ಮರೀಚಿಕೆಯಾಗಿವೆ ಎಂದು ಅಮರೇಶ ಅಳಲು ತೋಡಿಕೊಂಡರು.

ಕಾಂಕ್ರಿಟ್‌ ರಸ್ತೆಗಳಲ್ಲಿ, ವ್ಯವಸ್ಥಿತ ಚರಂಡಿಗಳ ನಿರ್ಮಾಣ ಮಾಡಿಲ್ಲ. ಬೆರಳೆಣಿಕೆಯಷ್ಟು ವೈಯಕ್ತಿಕ ಶೌಚಾಲಯ ಕಾಣಸಿಗುತ್ತವೆ. ಸರ್ಕಾರದ ಯೋಜನೆಗಳನ್ನು ಗ್ರಾಮಸ್ಥರ ಮನೆ ಬಾಗಿಲಿಗೆ ತಲುಪಿಸಿ ಜಾಗೃತಿ ಮೂಡಿಸುವಂತ ಕಾರ್ಯಗಳು ಈ ಗ್ರಾಮದಲ್ಲಿ ನಡೆದಿಲ್ಲ. ಸರ್ಕಾರದ ಯೋಜನೆಗಳು ತಮಗೆ ಸಂಬಂಧ ಇಲ್ಲ ಎಂಬಂತೆ ಬದುಕು ಕಟ್ಟಿಕೊಂಡಿದ್ದೇವೆ ಎಂದು ಬಸವರಾಜ ಮಾಹಿತಿ ನೀಡಿದರು.

ಗ್ರಾಮದ ಆರು ಸ್ಥಳಗಳಲ್ಲಿ ಸಿಸ್ಟರ್ನ್‌ ಅಳವಡಿಸಲಾಗಿದೆ, ಲಕ್ಷಾಂತರ ಹಣ ಖರ್ಚು ಮಾಡಿ ಮೇಲೆತ್ತರದ ನೀರು ಸಂಗ್ರಹಣಾ ತೊಟ್ಟೆ ನಿರ್ಮಿಸಿದ್ದರು ಕೂಡ ಅವುಗಳಿಗೆ ನೀರು ತುಂಬಿಸುವ ಪ್ರಯತ್ನ ನಡೆಯುತ್ತಿಲ್ಲ. ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಇಲ್ಲದ್ದರಿಂದ ಐದನಾಳ, ಕರಡಕಲ್ಲ, ಮಿಂಚೇರಿಗೆ ಪಡಿತರದಾರರನ್ನು ವಿಭಜಿಸಿ ಹಂಚಿಕೆ ಮಾಡಿದ್ದು ಪಡಿತರಕ್ಕಾಗಿ ಪರದಾಡುವಂತಾಗಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಸುತ್ತಮುತ್ತ ತಿಪ್ಪೆಗುಂಡಿಗಳು, ಅವೈಜ್ಞಾನಿಕ ರಸ್ತೆಗಳ ನಿರ್ಮಾಣದಿಂದ ಮಳೆ ನೀರು, ಚರಂಡಿ ನೀರು ರಸ್ತೆಗಳಲ್ಲಿ ಸಂಗ್ರಹಗೊಂಡು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ. ಸಾಮೂಹಿಕ ಶೌಚಾಲಯಗಳಿಲ್ಲ, ಮೃತ ಪಟ್ಟವರ ಹೂಳಲು ರುದ್ರಭೂಮಿ ವ್ಯವಸ್ಥೆಯಿಲ್ಲ. ಕಲುಷಿತ ವಾತಾವರಣದಿಂದ ಚರ್ಮರೋಗ, ಮಲೇರಿಯಾ ಇತರೆ ರೋಗಗಳ ತಾಣವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಕೂಲಿಕಾರರೇ ಹೆಚ್ಚಾಗಿರುವ ಈ ಗ್ರಾಮದತ್ತ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಗೊಳ್ಳದಿರುವುದು ದುರದೃಷ್ಟಕರ. ಉದ್ಯೋಗ ಖಾತ್ರಿ ಉಳ್ಳವರ ಪಾಲಾಗಿದೆ. ಕೂಲಿಕಾರ ಜನತೆ ಉದ್ಯೋಗ ಸಿಗದೆ ಬೇರೆ ಗ್ರಾಮಗಳತ್ತ ಮುಖ ಮಾಡಿದ್ದಾರೆ. ಸಂಕಷ್ಟದಲ್ಲಿರುವ ಗ್ರಾಮಸ್ಥರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಲು ತಾಲ್ಲೂಕು ಆಡಳಿತ ಮುಂದಾಗಬೇಕು ಎಂದು ದುರುಗಪ್ಪ, ಅಮರಪ್ಪ ಒತ್ತಾಯಿಸಿದರು.

ಕುರುಬ, ಹರಿಜನ, ವಾಲ್ಮೀಕಿ ಜನಾಂಗ ಹೆಚ್ಚಾಗಿ ವಾಸಿಸುತ್ತಿರುವ ಜಾಲಿಬೆಂಚಿ ಗ್ರಾಮಕ್ಕೆ ಅಗತ್ಯ ಸೌಲಭ್ಯಗಳ ಜೊತೆ ಸ್ಮಶಾನ ಮಂಜೂರಾತಿ ಆಗಬೇಕು 
- ಗಿರಿಮಲ್ಲನಗೌಡ ಕರಡಕಲ್ಲ, ಹಿರಿಯ ಮುಖಂಡರು, ಬಿಜೆಪಿ, ಲಿಂಗಸುಗೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !