ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾನವ ಸಂಬಂಧ ಕದಡಿ ದೇಶ ಕಟ್ಟಲಾಗದು’

ಪ್ರತಿಭಟನೆ ಮೂಲಕ ಕರ್ನಾಟಕ ಜನಶಕ್ತಿ ರಾಜ್ಯ ಸಮ್ಮೇಳನ ಉದ್ಘಾಟನೆ
Last Updated 3 ಜುಲೈ 2022, 12:35 IST
ಅಕ್ಷರ ಗಾತ್ರ

ರಾಯಚೂರು: ‘ಮಾನವ ಸಂಬಂಧಗಳನ್ನು ಕದಡಿ, ಕೇವಲ ಆರ್ಥಿಕ ಸಾಧನೆಗಳನ್ನು ಮಾಡಿ ದೇಶ ಕಟ್ಟುವುದು ಅಸಾಧ್ಯ’ ಎಂದು ಸಂಸ್ಕೃತಿ ಚಿಂತಕ ಡಾ. ರಹಮತ್‌ ತರೀಕೆರೆ ಹೇಳಿದರು.

ನಗರದಲ್ಲಿ ಭಾನುವಾರದಿಂದ ಆರಂಭವಾದ ಎರಡು ದಿನಗಳ ಕರ್ನಾಟಕ ಜನಶಕ್ತಿ ಮೂರನೇ ರಾಜ್ಯ ಸಮ್ಮೇಳನದಲ್ಲಿ ಅವರು ಉದ್ಘಾಟನಾ ಭಾಷಣ ಮಾಡಿದರು.

‘ದೇಶದಲ್ಲಿ ಒಂದು ರೀತಿ ಆತಂಕದ ವಾತಾವರಣ ಮನೆಮಾಡಿದೆ. ಮಾನವ ಹಕ್ಕುಗಳಿಗಾಗಿ ಹೋರಾಟ ಮಾಡುವವರನ್ನು ಬಂಧಿಸುವ ಸ್ಥಿತಿ ಇದೆ. ಅವ್ಯವಸ್ಥೆ ವಿರುದ್ಧ ಧ್ವನಿ ಎತ್ತುವಂತಿಲ್ಲ. ಮಾಧ್ಯಮಗಳನ್ನು ಕೂಡಾ ಮೌನಗೊಳಿಸುವ ಕೆಲಸ ಆಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸಂವಿಧಾನದಡಿ ಪ್ರಮಾಣವಚನ ಸ್ವೀಕರಿಸಿದವರು, ತಮ್ಮ ಜೊತೆಗೆ ಬದುಕುತ್ತಿರುವವರನ್ನು ಪ್ರತ್ಯೇಕಿಸಿ ಮಾತನಾಡುತ್ತಿದ್ದಾರೆ.‌ ರಾಜ್ಯದಲ್ಲಿ ಪಠ್ಯಪುಸ್ತಕಗಳ ಬ್ರಾಹ್ಮಣ್ಯವಾದ ಸಂಸ್ಕೃತಿ ಹೇರಲಾಗುತ್ತಿದೆ. ಮಾನುಷ ಬದಲು ಅಮಾನುಷದತ್ತ ಭಾರತ ಸಾಗುತ್ತಿದೆ’ ಎಂದು ಹೇಳಿದರು.

‘ಇಂತಹ ಸನ್ನಿವೇಶದಲ್ಲಿ ಹೋರಾಟ ನಡೆಸಬೇಕಾದ ಪ್ರಜಾಸತ್ತಾತ್ಮಕ ಸಂಘಟನೆಗಳು ಛಿದ್ರವಾಗಿರುವುದು ಶೋಚನೀಯ ಸಂಗತಿ. ರೈತ, ದಲಿತ, ಜಾತ್ಯತೀತ ತಳಹದಿ ಸಂಘಟನೆಗಳು ಭಿನ್ನ ಭಿನ್ನ ಹಾದಿಯಲ್ಲಿವೆ. ಸದ್ಯದ ಪರಿಸ್ಥಿತಿಯಲ್ಲಿ ಸಾಮಾನ್ಯ ಸೈದ್ಧಾಂತಿಕ ನೆಲೆಯಲ್ಲಿ ಎಲ್ಲರೂ ಒಂದಾಗುವ ಅಗತ್ಯವಿದೆ. ಈ ದಿಕ್ಕಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಹೊಸದನ್ನು ಕಟ್ಟುವ‌ ಮನಸ್ಸಿರುವ ಸಂಘಟನೆಗಳು ಬೆಸೆದುಕೊಳ್ಳಬೇಕಾದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಆರ್‌.ಬಸವರಾಜಪ್ಪ ಮಾತನಾಡಿ, ‌‘ಸ್ವಾತಂತ್ರ್ಯದ ಪರಿಕಲ್ಪನೆ ಸಾಕಾರ ಆಗಿದೆಯಾ ಎಂಬುದನ್ನು ಚಿಂತನೆ ಮಾಡಬೇಕಿದೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಶ್ರೀಮಂತರು ಶ್ರೀಮಂತರಾಗಿಯೇ ಮುಂದುವರಿದಿದ್ದಾರೆ. ಆಡಳಿತ ನಡೆಸುವ ಪ್ರಭುತ್ವದ ವಿರುದ್ಧ ಹೋರಾಟ ಮಾಡುವ ಪರಿಸ್ಥಿತಿ ‌ಇದೆಯೇ? ಎಂಬುದನ್ನು ಅವಲೋಕಿಸಬೇಕಿದೆ’ ಎಂದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಎನ್‌.ವೆಂಕಟೇಶ್‌ ಮಾತನಾಡಿ, ‘ದೇಶದಲ್ಲಿ ಬೇರೆ‌ಬೇರೆ ಕಡೆಗಳಲ್ಲಿ ದೊಡ್ಡ ಚಳವಳಿಗಳು‌ ನಡೆಯುತ್ತಿವೆ.‌ ಇವೆಲ್ಲವನ್ನೂ ಒಂದು ಕಡೆಗೆ ಸೇರಿಸುವ ಕೆಲಸ ಮಾಡೋಣ’ ಎಂದು ಸಲಹೆ ನೀಡಿದರು.

ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್‌ ಸೇರಿ ಮೂವರು ಹೋರಾಟಗಾರರ ಬಂಧನದ ವಿರುದ್ಧ ವೇದಿಕೆಯಲ್ಲಿ ಪ್ರತಿಭಟನೆ ಮಾಡುವ ಮೂಲಕ ರಾಜ್ಯ ಸಮ್ಮೇಳನ ಉದ್ಘಾಟಿಸಲಾಯಿತು.

ರಾಜ್ಯದ ವಿವಿಧೆಡೆಯಿಂದ ಜನಪರ, ಜೀವಪರ ಸಂಘಟನೆಗಳ ಮುಖಂಡರು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಒಗ್ಗಟ್ಟಿನಿಂದ ಹೋರಾಟ ನಡೆಸುವ ಕುರಿತು ಚಿಂತನಾಗೋಷ್ಠಿಗಳು ನಡೆದವು.

ಇಂದಿನ ದಿನಗಳಲ್ಲಿ ಹೋರಾಟಗಳು‌ ಛಿದ್ರವಾಗಿವೆ. ಹಿಂಸೆ ಸಾಂಸ್ಥಿಕ ಮಾಡಲಾಗುತ್ತಿದ್ದು, ಇದು ಅತ್ಯಂತ ಅಪಾಯಕಾರಿ
ಫಾ. ಜೆರಾಲ್ಡ್‌ ಡಿಸೋಜಾ, ನಿರ್ದೇಶಕ, ಸೇಂಟ್‌ ಜೋಸೆಫ್‌ ಕಾನೂನು ಕಾಲೇಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT