ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಜೀವನ್‌ ಮಿಷನ್‌ ಜಾರಿ ತ್ವರಿತಗೊಳಿಸಿ: ಕೆ.ಎಸ್‌.ಈಶ್ವರಪ್ಪ ಸೂಚನೆ

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಸೂಚನೆ
Last Updated 28 ಫೆಬ್ರುವರಿ 2022, 13:53 IST
ಅಕ್ಷರ ಗಾತ್ರ

ರಾಯಚೂರು: ಗ್ರಾಮೀಣ ಭಾಗದ ಪ್ರತಿ ಮನೆಗೂ ನೀರು ತಲುಪಿಸುವ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವು ಜಲಜೀವನ್‌ ಮಿಷನ್‌ (ಜೆಜೆಎಂ) ಯೋಜನೆ ರೂಪಿಸಿದ್ದು, ಮೊದಲ ಹಂತದ ಕಾಮಗಾರಿಗಳನ್ನು ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಏಪ್ರಿಲ್‌ ನಂತರ ಎರಡನೇ ಹಂತದ ಕೆಲಸಗಳನ್ನು ಪ್ರಾರಂಭಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮಗಳಲ್ಲಿ ಮನೆಮನೆಗೂ ಪೈಪ್‌ಲೈನ್‌, ಮೀಟರ್‌ ಹಾಗೂ ನಳಗಳನ್ನು ಅಳವಡಿಸುವ ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರನ ವಾಸ್ತವ ಸ್ಥಿತಿ ಅರಿತು ಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರರಿಗೆ ತೊಂದರೆ ಕೊಡುವ ಬದಲಾಗಿ, ನಿಜವಾದ ಸಮಸ್ಯೆ ಅರ್ಥ ಮಾಡಿಕೊಳ್ಳಿ. ಅಧಿಕಾರಿಗಳು ಪ್ರಶ್ನೆಗೆ ಉತ್ತರ ಕೊಡುವುದು ಮುಖ್ಯವಲ್ಲ. ಗ್ರಾಮಗಳಿಗೆ ಹೋಗಿ ವಾಸ್ತವ ಪರಿಶೀಲನೆ ಮಾಡಬೇಕು. ಅಧಿಕಾರಿಗಳು ಜಂಟಿಯಾಗಿ ಕೆಲಸ ಮಾಡಬೇಕು. ಗ್ರಾಮೀಣ ಜನರು ನೀರಿನ ಮೀಟರ್ ಅಳವಡಿಸುವುದನ್ನು ಸ್ವಾಗತಿಸುತ್ತಿದ್ದಾರೆ. ಕಡ್ಡಾಯವಾಗಿ ಮೂರು ಅಡಿ ಒಳಗೆ ಪೈಪ್‌ ಜೋಡಿಸಬೇಕು ಎಂದು ತಿಳಿಸಿದರು.

ಕೆಲಸ ಪೂರ್ಣಗೊಳಿಸಿದ ಗುತ್ತಿಗೆದಾರರ ಬಿಲ್‌ ಪಾವತಿಸುವುದಕ್ಕೆ ವಿಳಂಬ ಮಾಡಬಾರದು. ಲಿಂಗಸುಗೂರಿನಲ್ಲಿ ವಿಳಂಬವಾಗಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ಅನುದಾನ ಬಿಡುಗಡೆಗೊಳಿಸಿ ಎಂದು ತಾಕೀತು ಮಾಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಯೋಜನೆ ಜಾರಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಜಲಜೀವನ್ ಮಿಷನ್ ಸಭೆ ಕರೆಯಬೇಕು. ಥರ್ಡ್ ಪಾರ್ಟಿ ಏಜೆನ್ಸಿಯನ್ನು ಸಭೆಗೆ ಕರೆಯಬೇಕು. ಬಿಲ್ ಬಂದ ಮೇಲೆ ಸ್ಥಳ ಪರಿಶೀಲನೆ ಮಾಡಿ ಸಹಿ ಮಾಡಬೇಕು. ಮಾರ್ಚ್ 10 ರೊಳಗಾಗಿ ಸಿಇಓ ಅವರಿಗೆ ಇಓ ಹಾಗೂ ಎಇಇ ಅವರು ಸಭೆ ನಡೆಸಿದ್ದರ ವರದಿ ಕೊಡಬೇಕು ಎಂದು ತಿಳಿಸಿದರು

ಹೆಚ್ಚುವರಿ ಕೆಲಸ: ಗ್ರಾಮಗಳಲ್ಲಿ ಹೊಸ ಜಾಬ್‌ ಕಾರ್ಡ್‌ ಮಾಡಿಕೊಡಿ. ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಮಾನವ ದಿನಗಳ ಮಂಜೂರಾತಿ ಕೇಳಲಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ‌ ಕೂಲಿ ಪಾವತಿಸುವುದು ಗರಿಷ್ಠ ಒಂದು ವಾರ ಮಾತ್ರ ವಿಳಂಬವಾಗುತ್ತುದೆ. ಸಲಕರಣೆಗಳ ಬಿಲ್‌ ಪಾವತಿ ವಿಳಂಬವಾದರೂ, ಮೊದಲಿದ್ದಂತೆ ಈಗ ಸಮಸ್ಯೆಯಿಲ್ಲ ಎಂಬುದನ್ನು ಗಮನಿಸಬೇಕು ಎಂದರು.

ಯಾವ ಶಾಲೆಯಲ್ಲಿ ಶೌಚಾಲಯ ಇದೆ, ಇಲ್ಲ ಎನ್ನುವ ಮಾಹಿತಿಯನ್ನು ಸಿಇಓ ಅವರಿಗೆ ಕೊಡಬೇಕು. ಶೌಚಾಲಯ ಮತ್ತು ಕುಡಿಯುವ ನೀರು ಒದಗಿಸುವ ವ್ಯವಸ್ಥೆಯನ್ನು ಇಓ ಮಾಡಬೇಕು. ಪಿಡಿಓ ಸಭೆ ಮಾಡಿ, ಆದ್ಯತೆಯಿಂದ ಕೆಲಸ ಮಾಡಬೇಕು. ಶೌಚಾಲಯ ಇಲ್ಲದವರಿಗೆ ಶೌಚಾಲಯ ಕಟ್ಟಿಕೊಡಿ. ಈಗಾಗಲೇ ದಾಖಲೆಯಲ್ಲಿ ಶೌಚಾಲಯ ಇದ್ದರೂ ವಾಸ್ತವದಲ್ಲಿ ಶೌಚಾಲಯ ಇಲ್ಲದ ಮನೆಗಳಿಗೆ ಶೌಚಾಲಯ ಮಾಡಿಕೊಡಬೇಕು. ಇದಕ್ಕಾಗಿ ನಿಯಮ ಬದಲಾವಣೆ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಹಾರಾ ಖಾನಂ ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಡಿ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿ ಎರಡು ವರ್ಷಗಳಾಗಿವೆ. ಮೂರು ತಿಂಗಳಲ್ಲೇ ಕಾಮಗಾರಿ ಮುಗಿಸಬೇಕಿತ್ತು. ಅವಧಿ ವಿಸ್ತರಿಸಿ ಆರು ತಿಂಗಳು ಕೊಟ್ಟರೂ ಕೆಲಸ ಮುಗಿಸಿಲ್ಲ. ಸ್ಥಳ ಪರಿಶೀಲನೆ ಮಾಡಿ ಕೆಲವು ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದೆ. ಮಾರ್ಚ್ 31 ರೊಳಗೆ ಕೆಲಸ ಮುಗಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಲಿಂಗಸುಗೂರು ತಾಲ್ಲೂಕು ಪಂಚಾಯಿತಿ ಇಓ ಲಕ್ಷ್ಮೀದೇವಿ ಮಾತನಾಡಿ, ಗೆಜ್ಜಲಗಟ್ಟ, ಹೊನ್ನಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಳೇ ಪೈಪ್‌ಲೈನ್‌ನಲ್ಲಿ ಸಾಕಷ್ಟು ನೀರಿದೆ. ಹೀಗಾಗಿ ಹೊಸದಾಗಿ ಪೈಪ್ ಲೈನ್ ಹಾಗೂ ಮೀಟರ್ ಅಳವಡಿಸಲು ಒಪ್ಪಿರಲಿಲ್ಲ.. ಗ್ರಾಮಸಭೆ ಮಾಡಿ, ತಿಳಿವಳಿಕೆ ಮೂಡಿಸಿದ ಬಳಿಕ ಶೇ 70 ರಷ್ಟು ಜನರು ಮೀಟರ್‌ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT