ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಕಾಲ ಅರಿಯದೆ ಭವಿಷ್ಯ ನಿರ್ಮಾಣ ಅಸಾಧ್ಯ

ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ; ಸಮಾರೋಪ ಸಮಾರಂಭದಲ್ಲಿ ಡಾ.ಚನ್ನಪ್ಪ ಕಟ್ಟಿ ಅಭಿಮತ
Last Updated 12 ಡಿಸೆಂಬರ್ 2022, 5:50 IST
ಅಕ್ಷರ ಗಾತ್ರ

ಲಿಂಗಸುಗೂರು (ಆಯ್ದಕ್ಕಿ ಲಕ್ಕಮ್ಮ ವೇದಿಕೆ): ‘ಇತಿಹಾಸ ಬಲ್ಲವನು ಮಾತ್ರ ಇತಿಹಾಸ ಸೃಷ್ಟಿಸುವನು ಎಂಬ ನುಡಿಯಂತೆ, ಗತಕಾಲದ ಮಾಹಿತಿ ಅರಿಯದೆ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ’ ಎಂದು ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ಚನ್ನಪ್ಪ ಕಟ್ಟಿ ಸಿಂಧಗಿ ಹೇಳಿದರು.

ಭಾನುವಾರ ನಡೆದ ಜಿಲ್ಲಾ 11 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ‘ರಾಯಚೂರು ಜಿಲ್ಲೆಯ ಇತಿಹಾಸ ಮೆಲಕು ಹಾಕಿದರೆ, ರಕ್ತಸಿಕ್ತ ಇತಿಹಾಸವೇ ಕಾಣಬಹುದು. ಈ ಪ್ರದೇಶವನ್ನು ಕಬಳಿಸಿ ಆಳ್ವಿಕೆ ನಡೆಸಲು ಅನೇಕ ದಾಳಿಗಳು ನಡೆದಾಗಲೆಲ್ಲ ಸಹಿಷ್ಣುತಾ ಮನೋಭಾವ ದೃಢಪಡಿಸುತ್ತ ಬಂದಿದೆ. ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯಿಂದ ಅನೇಕ ಸಾಹಿತಿಗಳು, ಕವಿಗಳು, ಕನ್ನಡ ಸಾಹಿತ್ಯ, ಸಂಸ್ಕೃತಿ, ನೆಲ, ಜಲ ಭಾಷೆ ಎಲ್ಲವನ್ನ ತಿಳಿಯಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಮಾತನಾಡಿ, ‘ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತಿಗಳು ಸಾಹಿತ್ಯಿಕ ಚಟುವಟಿಕೆ, ನೆಲ, ಜಲ, ಭಾಷೆ ಕಟ್ಟುವ ಕೆಲಸ ಜತೆಗೆ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. 8 ಜ್ಞಾನಪೀಠ ಪ್ರಶಸ್ತಿ ಲಭಿಸಿದ ಕೀರ್ತಿ ಈ ಭಾಷೆಗಿದೆ. ಈ ಭಾಗದ ಜಾನಪದ ಸಾಹಿತ್ಯ ಬದುಕಿನ ಸಮಗ್ರತೆ ಸಾರುತ್ತದೆ. ಯುವ ಜನಾಂಗ ದುಶ್ಚಟಗಳ ದಾಸರಾಗದೆ ಸಾಹಿತ್ಯಾಭಿರುಚಿ ಮೈಗೂಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಹೇಳಿದರು.

ಸಾಧಕರಿಗೆ ಸನ್ಮಾನ: ವೈದ್ಯಕೀಯ ಶಿಕ್ಷಣ, ಸಾಹಿತ್ಯ, ಸಮಾಜಸೇವೆ, ಪತ್ರಿಕೋದ್ಯಮ, ಹೋರಾಟ, ರಂಗಭೂಮಿ, ಆಡಳಿತಾತ್ಮಕ, ಸಂಗೀತ, ಕ್ರೀಡೆ ಸೇರಿದಂತೆ ವಿವಿಧ
ರಂಗಗಳಲ್ಲಿ ಪ್ರತಿಭೆ ಮೆರೆದ ಸಾಧಕರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.

ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಡಿ.ಎಸ್.ಹೂಲಗೇರಿ, ಸಮ್ಮೇಳನಾಧ್ಯಕ್ಷ ವೀರಹನುಮಾನ್, ಮುಖಂಡರಾದ ಶರಣಪ್ಪ ಮೇಟಿ, ಸಿದ್ಧು ಬಂಡಿ, ಎಚ್.ಬಿ.ಮುರಾರಿ, ಅಮರಗುಂಡಪ್ಪ ಮೇಟಿ, ಭೂಪನಗೌಡ ಪಾಟೀಲ್, ಮಲ್ಲಣ್ಣ ವಾರದ, ಪಾಮಯ್ಯ ಮುರಾರಿ, ವೀರೇಶ ಸೌದ್ರಿ, ಎಂ.ಡಿ.ರಫೀ, ಪ್ರಮೋದ ಕುಲಕರ್ಣಿ, ವಿನಯ ಗಣಾಚಾರಿ, ಅಮರೇಶಪ್ಪ ಹೂನೂರು, ಕುಮಾರೆಪ್ಪ, ಅಮರಣ್ಣ ಜೀರಾಳ ಇದ್ದರು.

ಮಹತ್ವದ ನಿರ್ಣಯ ಮಂಡನೆ

ಸಮ್ಮೇಳನಾಧ್ಯಕ್ಷ ವೀರಹನುಮಾನರ ನೇತೃತ್ವ, ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಅವರ ಅಧ್ಯಕ್ಷತೆಯಲ್ಲಿ ಸರ್ವಾನುಮತದ ಏಕೈಕ ನಿರ್ಣಯವನ್ನು ಮಂಡಿಸಲಾಯಿತು.

ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರಾತಿಯಾಗಬೇಕು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೀಘ್ರ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ತಾಯಪ್ಪ ಹೊಸೂರು, ಮಂಜುನಾಥ ಕಾಮಿನ್, ಗೌರವ ಕೋಶಾಧ್ಯಕ್ಷ ಜಿ.ಸುರೇಶ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗೌಡೂರು ಇದ್ದರು.

ಮಕ್ಕಳ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಗಲಿ: ಡಾ.ಕಾಡ್ಲೂರು

‘ಸಾಹಿತ್ಯ ಕ್ಷೇತ್ರದಲ್ಲಿ ಅನುಭವಿಗಳು, ಹಿರಿಯರಿಗಾಗಿ ಸಮ್ಮೇಳನ ಮಾಡುವ ಬದಲು ಮಕ್ಕಳ ಸಾಹಿತ್ಯ ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಮ್ಮೇಳನ ಗಳಲ್ಲಿ ಅವಕಾಶ ಕಲ್ಪಿಸಬೇಕು’ ಎಂದು ಡಾ. ಶಶಿಕಾಂತ ಕಾಡ್ಲೂರು ಹೇಳಿದರು.

ಮಕ್ಕಳ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸಾಹಿತ್ಯ ರಚಿಸಲು ವಯಸ್ಸಿನ ಪರಿಮಿತಿಯಿಲ್ಲ. ಮಕ್ಕಳನ್ನು ಕವಿಗಳಾಗಿ, ಬರಹಗಾರರಾಗಿ, ಕಾದಂಬರಿಕಾರರನ್ನಾಗಿ ಗುರುತಿಸಬೇಕಿದೆ. ಎಷ್ಟೋ ಮಕ್ಕಳಲ್ಲಿರುವ ಪ್ರತಿಭೆ ಪ್ರೋತ್ಸಾಹ ಸಿಗದೆ ಕಮರುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಡಾ.ತಿಮ್ಮಯ್ಯಶೆಟ್ಟಿ ಇಲ್ಲೂರು, ‘ಇಂದಿನ ಕವಿಗೋಷ್ಠಿಯಲ್ಲಿ ಮಕ್ಕಳ ಸ್ವರಚಿತ ಕವನ ವಾಚನ ಅದರಲ್ಲಿನ ಗೂಡಾರ್ಥ ಹುಬ್ಬೇರಿಸುವಂತೆ ಮಾಡಿತು. ಸೂಪ್ತ ಪ್ರತಿಭೆಗಳನ್ನು ಗುರುತಿಸಲು ತಾಲ್ಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರೀಯ ಸಮ್ಮೇಳನಗಳಲ್ಲಿ ಮಕ್ಕಳಿಗಾಗಿ ವಿಶೇಷ ಆದ್ಯತೆ ನೀಡುವ ಪರಂಪರೆ ಬೆಳೆಸಬೇಕು’ ಎಂದು ಸಲಹೆ ನೀಡಿದರು.

ಕವಿಗಳಾದ ರಮ್ಯಾ ಬಾಲಗವಿ, ಸಾಯಿಸಾಗರ, ಶ್ರೇಯಸ್‍ ಬಳೆ, ಸ್ಫೂರ್ತಿ, ವಾಣಿಶ್ರೀ, ಮಮತಾ ಕುರ್ಡಿ, ಸ್ನೇಹಾ, ಗಂಗಾಂಬಿಕಾ, ಮುಕ್ತಾ, ಸಂದೀಪ, ಅಮೃತಾ ಬನ್ನಿಕೊಪ್ಪ ಕವನ ವಾಚನ ಮಾಡಿದರು. ನಿರ್ಮಲಾ ಪಾಟೀಲ, ಗಂಗಮ್ಮ ಕಟ್ಟಿಮನಿ, ಸೂಗೂರೇಶ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT