ಬುಧವಾರ, ನವೆಂಬರ್ 13, 2019
21 °C

ಪಾಲಕರ ಭಾಷೆ ತೆಲುಗು; ಮಕ್ಕಳ ಭಾಷೆ ಕನ್ನಡ!

Published:
Updated:

ರಾಯಚೂರು: ಈ ಗ್ರಾಮಗಳು ಕರ್ನಾಟಕ ರಾಜ್ಯದಲ್ಲಿವೆ. ಆದರೆ ಗ್ರಾಮದಲ್ಲಿ ಜನರು ಆಡುವ ಭಾಷೆ ತೆಲುಗು. ಶಾಲೆಗೆ ಹೋಗುವ ಮಕ್ಕಳಿಗೆ ಕನ್ನಡ ಮತ್ತು ತೆಲುಗು ಎರಡೂ ಭಾಷೆ ಗೊತ್ತಿದೆ. ಆದರೆ ತೆಲುಗು ಗೊತ್ತಿಲ್ಲದ ಶಿಕ್ಷಕರು ಹಾಗೂ ಅಧಿಕಾರಿಗಳು ಇಲ್ಲಿ ಕಾರ್ಯನಿರ್ವಹಿಸುವುದು ತುಂಬಾ ಕಷ್ಟ!

ಹೌದು, ಇಂತಹ ಇಕ್ಕಟ್ಟಿನ ಪರಿಸ್ಥಿತಿಯ ರಾಯಚೂರು ತಾಲ್ಲೂಕಿನ ಗಡಿಯಲ್ಲಿವೆ. ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಗಡಿಗೆ ಹೊಂದಿಕೊಂಡ ಕರ್ನಾಟಕದ ಗ್ರಾಮಗಳಲ್ಲಿ ಕನ್ನಡ ಭಾಷೆ ಇನ್ನೂ ಕಲಿಯುವ ಹಂತದಲ್ಲಿಯೇ ಉಳಿದಿರುವುದು ಅಚ್ಚರಿ ಎಂದೆನಿಸಿದರೂ ವಾಸ್ತವ ಸತ್ಯ. ಕೇವಲ 15 ವರ್ಷಗಳಿಂದ ಈಚೆಗೆ ಗಡಿಗ್ರಾಮಗಳ ಸರ್ಕಾರಿ ಕನ್ನಡ ಶಾಲೆಗಳಲ್ಲಿ ತೆಲುಗು ಮೂಲಕ ಮಕ್ಕಳಿಗೆ ಕನ್ನಡ ಭಾಷೆಯನ್ನು ಪರಿಣಾಮಕಾರಿಯಾಗಿ ಹೇಳಿಕೊಡಲಾಗುತ್ತಿದೆ.

ಶಾಲೆಯೊಳಗೆ ಕನ್ನಡ ಕಲಿಯುಯವ ಮಕ್ಕಳು, ಮನೆಗೆ ಹೋಗುತ್ತಿದ್ದಂತೆ ಅಪ್ಪ- ಅಮ್ಮ ಹಾಗೂ ಸಂಬಂಧಿಗಳೊಂದಿಗೆ ತೆಲುಗು ಮಾತನಾಡುವುದು, ಹೊರಗಡೆ ವ್ಯವಹರಿಸುವುದು ಅನಿವಾರ್ಯವಿದೆ. ಕರ್ನಾಟಕದ ಗಡಿ ಗ್ರಾಮಗಳಲ್ಲಿ ಕನ್ನಡಕ್ಕಿಂತಲೂ ತೆಲುಗು ಹಾಸುಹೊಕ್ಕಾಗಿ ಉಳಿದುಕೊಂಡಿದೆ. ವ್ಯವಹಾರದಲ್ಲಿ ತೆಲುಗು ಭಾಷೆಗೆ ಪ್ರಥಮ ಆದ್ಯತೆ.

ರಾಯಚೂರು ತಾಲ್ಲೂಕಿನ ಯರಗೇರಾ, ಗಿಲ್ಲೇಸುಗೂರು, ಚಂದ್ರಬಂಡಾ, ಯಾಪಲದಿನ್ನಿ ಹೋಬಳಿ ವ್ಯಾಪ್ತಿಯ ಗ್ರಾಮಗಳು ಹಾಗೂ ದೇವಸುಗೂರು ಹೋಬಳಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ತೆಲುಗು ಸಂಪೂರ್ಣ ಆಡುಭಾಷೆಯಾಗಿ ಬಳಕೆ ಆಗುತ್ತಿದೆ.

ತೆಲುಗು ಹಾಗೂ ಕನ್ನಡ ಭಾಷೆ ಎರಡೂ ಗೊತ್ತಿರುವ ಜನರು ಸಹ ಇದ್ದಾರೆ. ಆದರೆ ಅನಿವಾರ್ಯ ಎನ್ನುವ ಪರಿಸ್ಥಿತಿ ಇದ್ದರೆ ಹಾಗೂ ಬರೀ ಕನ್ನಡ ಗೊತ್ತಿರುವರೊಂದಿಗೆ ಮಾತ್ರ ಕನ್ನಡ ಮಾತನಾಡುತ್ತಾರೆ.

'ವಯಸ್ಕರ ಶಿಕ್ಷಣ ಯೋಜನೆ ಮೂಲಕ ದೊಡ್ಡವರಿಗೆ ಕನ್ನಡ ಅಕ್ಷರ ಹಾಗೂ ಕನ್ನಡ ಭಾಷೆ ಕಲಿಸುವ ಪ್ರಯತ್ನ ನಡೆಯುತ್ತಿದೆ.‌ ಪ್ರಯತ್ನಕ್ಕೆ ತಕ್ಕಂತೆ ಪ್ರತಿಫಲ ಸಿಕ್ಕಿಲ್ಲ. ಶಾಲಾ ಮಕ್ಕಳ ಮೂಲಕವೇ ಗಡಿಗ್ರಾಮಗಳಲ್ಲಿ ಕನ್ನಡವನ್ನು ಬೆಳೆಸುವ, ಉಳಿಸುವ ಕೆಲಸ ನಡೆಯುತ್ತಿದೆ' ಎನ್ನುವುದು ಗಡಿಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಹೇಳುವ ಮಾತಿದು.

ಪ್ರತಿಕ್ರಿಯಿಸಿ (+)