ನಗರಸಭೆ ಕಾರ್ಯವೈಖರಿಗೆ ಖಂಡನೆ

7
ಸಮಸ್ಯೆ ನಿವಾರಿಸದ ಆಡಳಿತ ಮಂಡಳಿ ವಿರುದ್ಧ ಕರವೇ ಪ್ರತಿಭಟನೆ

ನಗರಸಭೆ ಕಾರ್ಯವೈಖರಿಗೆ ಖಂಡನೆ

Published:
Updated:
Prajavani

ರಾಯಚೂರು: ನಗರದ ಸಮಸ್ಯೆಗಳು ನಿವಾರಿಸುವಲ್ಲಿ ವಿಫಲವಾಗಿರುವ ನಗರಸಭೆ ಕಾರ್ಯವೈಖರಿ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಎಚ್‌.ಶಿವರಾಮೇಗೌಡ ಬಣ) ಜಿಲ್ಲಾ ಘಟಕದ ಸದಸ್ಯರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನ್ಯಾಯಾಲಯದ ಆದೇಶದಂತೆ ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲು ಕ್ರಮ ಕೈಗೊಳ್ಳದೇ ಮೌನ ವಹಿಸಲಾಗಿದೆ. ಪರಿಸರ ನಾಶವಾಗುತ್ತಿದೆ. ಬಿಡಾಡಿ ದನಗಳು ಪ್ಲಾಸ್ಟಿಕ್ ಸೇವನೆಯಿಂದ ಸಾವನ್ನಪ್ಪುತ್ತಿದ್ದು, ಚರಂಡಿಗಳು ಕೂಡ ಪ್ಲಾಸ್ಟಿಕ್‌ನಿಂದ ತುಂಬಿವೆ. ವ್ಯಾಪಾರಿಗಳಿಂದ ಹಾಗೂ ಸಾರ್ವಜನಿಕರಿಂದ ನಿರಂತರವಾಗಿ ಪ್ಲಾಸ್ಟಿಕ್ ಬಳಕೆಯಾಗುತ್ತಿದ್ದರೂ, ನಗರಸಭೆ ಕುಂಭಕರ್ಣ ನಿದ್ರೆಯಲ್ಲಿದೆ ಎಂದು ಪೌರಾಯುಕ್ತರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಆರೋಪಿಸಿದರು.

ಪ್ರಮುಖ ರಸ್ತೆಗಳ ಅಗಲೀಕರಣ ಕೈಗೊಂಡು ವಿಸ್ತಾರವಾದ ಪಾದಚಾರಿಗಳ ಪಥ ನಿರ್ಮಾಣ ಮಾಡಲಾಗಿದೆ. ಆದರೆ, ಪಾದಚಾರಿಗಳ ಪಥವನ್ನು ಅತಿಕ್ರಮಣ ಮಾಡಿ ಸಣ್ಣ ವ್ಯಾಪಾರಿಗಳು ಜನರಿಗೆ ಅನಾನುಕೂಲ ಮಾಡಿದ್ದಾರೆ. ಕೆಲವರು ಈ ವ್ಯಾಪಾರಿಗಳಲ್ಲಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.

ಉಸ್ಮಾನಿಯಾ ತರಕಾರಿ ಮಾರುಕಟ್ಟೆಯ ದುಸ್ಥಿತಿ ಇನ್ನೂ ಮುಂದುವರೆದಿದ್ದು, ರೈತರು ತರಕಾರಿ ಮಾರಾಟ ಮಾಡಲು ನಿರ್ಮಾಣ ಮಾಡಿರುವ ಕಟ್ಟೆಯಲ್ಲಿ ವ್ಯಾಪಾರ ನಡೆಸಲು ಕ್ರಮ ಜರುಗಿಸಿಲ್ಲ. ಮಾರುಕಟ್ಟೆಯ ಒಳಾಂಗಣದ ವ್ಯಾಪಾರಸ್ಥರು ಮಾರುಕಟ್ಟೆಯ ಹಿಂದಿನ ರಸ್ತೆಯ ಮೇಲೆ ವಹಿವಾಟು ಮಾಡುತ್ತಾರೆ. ರೈತರಿಗೆ ಸ್ಥಳಾವಕಾಶ ನೀಡದೇ ದೌರ್ಜನ್ಯ ಮಾಡುತ್ತಿದ್ದು, ರೈತರು ಕಂದಗಡ್ಡೆ ಮಾರೆಮ್ಮ ದೇವಸ್ಥಾನದಿಂದ ಮಹಾವೀರ ವೃತ್ತದವರೆಗೂ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆ ನೀಡಿ ವಹಿವಾಟು ಮಾಡುತ್ತಿದ್ದು, ನಗರಸಭೆ ಅಗತ್ಯ ಕ್ರಮ ಕೈಗೊಳ್ಳದೇ ವಿಫಲವಾಗಿದೆ ಎಂದರು.

ಕುಡಿಯುವ ನೀರಿನ ಸಮಸ್ಯೆ ನಗರದ ಕೆಲ ಭಾಗದಲ್ಲಿ ಇನ್ನೂ ಮುಂದುವರೆದಿದ್ದು, ದಿನಬಿಟ್ಟು ದಿನ ನೀರು ಸರಬರಾಜು ಮಾಡಲಾಗುತ್ತಿದೆ. ನಳಗಳನ್ನು ಮುಚ್ಚದೇ ಜನರು ನೀರು ಪೋಲು ಮಾಡುತ್ತಿದ್ದಾರೆ. ನೀರು ಪೋಲಾಗುವುದನ್ನು ನಗರಸಭೆ ತಡೆಯುತ್ತಿಲ್ಲ. ಆದ್ದರಿಂದ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕ ಅಧ್ಯಕ್ಷ ಅಶೋಕಕುಮಾರ ಜೈನ್, ಗೋವಿಂದರಾಜು, ಮಲ್ಲು, ಕೆ.ಕಿಶನರಾವ್, ಆಸೀಫ್, ಸಂಜಯ ವೈಷ್ಣವ, ಶರಣು, ನಾಗರಾಜ, ಕೃಷ್ಣ ಯಾದವ್ ಸುಂಕಪ್ಪ, ಬಸ್ಸಯ್ಯಸ್ವಾಮಿ, ಶರಣಬಸವ, ರಾಚಯ್ಯ ಸ್ವಾಮಿ, ವೀರಾಂಜನೇಯ, ಪರಶುರಾಮ, ದಿನೇಶ ಚೌದರಿ, ಭೀಮೇಶ, ಮಹೇಶ, ನಾಗೇಶ ಸ್ವಾಮಿ, ಗೌಸ, ತಾಹೇರ್, ರಾಮಾಂಜನೇಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !